ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಪಾಲಿಗೆ ಅಕ್ಕಿ ದೇವರು: ಪ್ರದೀಪ್ ಈಶ್ವರ್

Published 12 ಜುಲೈ 2023, 20:55 IST
Last Updated 12 ಜುಲೈ 2023, 20:55 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಇನ್ನಷ್ಟು ಶಕ್ತಿ ತುಂಬಲು ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 1 ರಿಂದ 10 ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರ ಉನ್ನತ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದರು.

‘ಶ್ರೀಮಂತರು, ಪ್ರತಿ ಪಕ್ಷಗಳು ಅಕ್ಕಿಯನ್ನು ಪಡಿತರವೆಂದು ನೋಡಬಹುದು. ನನ್ನಂತಹ ಕೋಟ್ಯಂತರ ಬಡವರ ಪಾಲಿಗೆ ಅಕ್ಕಿ ಎಂದರೆ ದೇವರು. ಅನ್ನಭಾಗ್ಯ ಜಾರಿಗೊಳಿಸಿರುವ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ಇಂಗ್ಲಿಷ್‌ ಶಿಕ್ಷಣ ಬೆನ್ನತ್ತಿ ಹೋಗುವವರಿಗೆ ನನ್ನ ಮಾತು ಇಷ್ಟೇ, ಇಂಗ್ಲಿಷ್‌ ಇರುವುದೇ ತಪ್ಪು ತಪ್ಪಾಗಿ ಮಾತನಾಡಲು. ಸರಿಯಾಗಿ ಮಾತನಾಡಲು ಕನ್ನಡವಿದೆ. ಕನ್ನಡವನ್ನು ಸರಿಯಾಗಿ ಬಳಸೋಣ. ನನ್ನಂತಹ ಬಡ ಕುಟುಂಬದ ಹುಡುಗ ವಿಧಾನಸೌಧ ತಲುಪಲು ಕಾರಣರಾದ ಡಾ।ಬಿ.ಆರ್‌. ಅಂಬೇಡ್ಕರ್, ನನ್ನಂತಹ ಅನಾಥರಿಗೆ ಅನ್ನ ನೀಡಿ ಬೆಳೆಸಿದ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರನ್ನು ಸ್ಮರಿಸುತ್ತೇನೆ’ ಎಂದು ಹೇಳಿದರು.

‘ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಬಡವರಿಗೆ ಉಪಯುಕ್ತವಾಗಿವೆ. ಬಡವರ ಮಕ್ಕಳು ಬೆಳೆಯಬೇಕೆಂಬ ಉದ್ದೇಶದಿಂದ ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು’ ಎಂದರು.

ಟ್ರೋಲ್‌ಗಳಿಗೆ ಹೆದರಬೇಡಿ: ಖಾದರ್ ‘ಹೊಸ ಶಾಸಕರು ಧೈರ್ಯದಿಂದ ಮಾತನಾಡಬೇಕು. ಮಾತನಾಡುವಾಗ ಹೆಚ್ಚು ಕಮ್ಮಿ ಆದರೂ ತಲೆಕೆಡಿಸಿಕೊಳ್ಳಬೇಡಿ. ಟ್ರೋಲ್‌ ಮಾಡುತ್ತಾರೆ ಎಂಬ ಭಯ ಬೇಡ. ನನ್ನ ಬಗ್ಗೆಯೂ ಟ್ರೋಲ್ ಮಾಡಿದ್ದರು. ನಾನು ಈ ಸ್ಥಾನಕ್ಕೆ ಏರುವಲ್ಲಿ ಟ್ರೋಲ್ ಪಾತ್ರವೂ ಇದೆ. ಆದ್ದರಿಂದ ಮುಕ್ತವಾಗಿ ಮಾತನಾಡಿ’ ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌ ಉತ್ತೇಜನ ನೀಡಿದರು.

ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಇನ್ನಷ್ಟು ಶಕ್ತಿ ತುಂಬಲು ಸರ್ಕಾರ ವಿಶೇಷ ಆದ್ಯತೆ ನೀಡಬೇಕು. ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT