ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pen Drive Case | ರಾಜ್ಯಪಾಲರಿಗೆ ಜೆಡಿಎಸ್ ಮನವಿ– ಎಸ್‌ಐಟಿಗೆ ಕಾಂಗ್ರೆಸ್ ದೂರು

Published 9 ಮೇ 2024, 15:24 IST
Last Updated 9 ಮೇ 2024, 15:24 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ ಕ್ಷೇತ್ರದ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ಜೆಡಿಎಸ್‌ ನಾಯಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರೆ, ಕಾಂಗ್ರೆಸ್ ಮುಖಂಡರು ವಿಶೇಷ ತನಿಖಾ ತಂಡಕ್ಕೆ ದೂರು ಸಲ್ಲಿಸಿದರು.

ಮಹಿಳೆಯರ ಅಶ್ಲೀಲ ವಿಡಿಯೊಗಳಿದ್ದ 25 ಸಾವಿರಕ್ಕೂ ಹೆಚ್ಚು ಪೆನ್‌ಡ್ರೈವ್‌ಗಳನ್ನು ವ್ಯಾಪಕವಾಗಿ ಹಂಚಿಕೆ ಮಾಡಿದ ಆರೋಪಿಗಳ ವಿರುದ್ಧ ಎಸ್‌ಐಟಿ ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಹಾಗಾಗಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಪಿತೂರಿಯಲ್ಲಿ ಭಾಗಿಯಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಸಂಪುಟದಿಂದ ವಜಾ ಮಾಡಲು ಮುಖ್ಯಮಂತ್ರಿಗೆ ನಿರ್ದೇಶನ ನೀಡಬೇಕು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ನಿಯೋಗ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ನೀಡಿತು.

ಜೆಡಿಎಸ್‌ ಪ್ರಮುಖ ನಾಯಕರ ಸಮಿತಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ಎಚ್.ಕೆ.ಕುಮಾರಸ್ವಾಮಿ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ವೆಂಕಟರಾವ್ ನಾಡಗೌಡ, ಆಲ್ಕೋಡ್ ಹನುಮಂತಪ್ಪ, ಆನಂದ್ ಆಸ್ನೋಟಿಕರ್, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್‍ಯಾನಾಯ್ಕ ಸೇರಿದಂತೆ ಹಲವು ನಿಯೋಗದಲ್ಲಿದ್ದರು.

ಅತ್ತ ಕಾಂಗ್ರೆಸ್‌ ಮುಖಂಡರು, ‘ಪ್ರಜ್ವಲ್‌ ರೇವಣ್ಣ ಅವರು ನಡೆಸಿದ್ದಾರೆ ಎನ್ನಲಾದ ಲೈಂಗಿಕ ಕೃತ್ಯಗಳ ಪೆನ್‌ಡ್ರೈವ್‌ ತಮ್ಮ ಬಳಿ ಇದೆ ಎಂದು ಬಹಿರಂಗ ಹೇಳಿಕೆ ನೀಡಿರುವ ಹಾಸನ ಬಿಜೆಪಿ ಮುಖಂಡ ದೇವರಾಜೇಗೌಡ ಹಾಗೂ ಸಂತ್ರಸ್ತ ಮಹಿಳೆಯರು ಇರುವ ಸ್ಥಳದ ಮಾಹಿತಿ ಬಿಡುಗಡೆ ಮಾಡುವ ಮೂಲಕ ಆರೋಪಿಗಳಿಗೆ ಪರೋಕ್ಷವಾಗಿ ಸಹಕಾರ ನೀಡುತ್ತಿರುವ, ತನಿಖೆಯ ದಾರಿ ತಪ್ಪಿಸುತ್ತಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಶೇಷ ತನಿಖಾ ದಳದ ಅಧಿಕಾರಿಗಳಿಗೆ ದೂರು ಸಲ್ಲಿಸಿದರು. ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ. ಪ್ರಕಾಶ್‌ ಮತ್ತಿತರರು ನಿಯೋಗದಲ್ಲಿದ್ದರು.

ಜೆಡಿಎಸ್‌ ಮನವಿಯೇನು?

* ವಿಶೇಷ ತನಿಖಾ ತಂಡ ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುತ್ತಿದೆ 

* ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ

* ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್‌–ಡಿ.ಕೆ. ಶಿವಕುಮಾರ್ ಸಂಚಿನಲ್ಲಿ ಭಾಗಿ

* ಕೃತ್ಯದಲ್ಲಿ ಭಾಗಿಯಾದ ನವೀನ್ ಗೌಡ, ಕಾರ್ತಿಕ್‌ ಅವರನ್ನು ಬಂಧಿಸಿಲ್ಲ 

* ಮಹಿಳೆಯರ ಮಾನ ಹಾನಿ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲ 

* ಎಚ್‌.ಡಿ. ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ವರ್ಚಸ್ಸು ಹಾಳು ಮಾಡಲು ಎಸ್‌ಐಟಿ ಬಳಕೆ 

 ಕಾಂಗ್ರೆಸ್‌ ದೂರಿನ ಸಾರಾಂಶ

* ಪರೋಕ್ಷವಾಗಿ ಆರೋಪಿಗಳ ರಕ್ಷಣೆಗೆ ನಿಂತ ಎಚ್‌.ಡಿ. ಕುಮಾರಸ್ವಾಮಿ

* ಕುಮಾರಸ್ವಾಮಿ ಹೇಳಿಕೆಯಿಂದ ತನಿಖಾ ತಂಡದ ಮುಂದೆ ಬರಲು ಸಂತ್ರಸ್ತೆಯರ ಹಿಂದೇಟು

* ಕುಮಾರಸ್ವಾಮಿಗೆ ಆರೋಪಗಳ ಸುಳಿವೂ ಇದೆ. ಅವರನ್ನು ತನಿಖೆಗೆ ಒಳಪಡಿಸಬೇಕು

* ಪೆನ್‌ಡ್ರೈವ್‌ ತಮ್ಮ ಬಳಿ ಇದೆ ಎಂದು ಒಪ್ಪಿಕೊಂಡ ದೇವರಾಜೇಗೌಡ ವಿರುದ್ಧ ಪ್ರಕರಣ ದಾಖಲಿಸಬೇಕು

* ಪೆನ್‌ಡ್ರೈವ್‌ ಇದ್ದರೂ ತನಿಖೆಗೆ ಒಪ್ಪಿಸದೇ ದೇವರಾಜೇಗೌಡ ವಂಚನೆ ಮಾಡಿದ್ದಾರೆ

* ಮಹಿಳಾ ಪರ ಹೋರಾಟ ಮಾಡದೆ, ತನಿಖಾ ತಂಡ ಟೀಕಿಸುವ ಮೂಲಕ ಆರೋಪಿಗಳಿಗೆ ಪರೋಕ್ಷ ರಕ್ಷಣೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT