ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಾಜೇಗೌಡ ಬಿಟ್ಟು ಇತರರಿಗೆ ವಿಡಿಯೊ ಕೊಟ್ಟಿಲ್ಲ– ಕಾರು ಚಾಲಕ ಕಾರ್ತಿಕ್‌

ಪ್ರಜ್ವಲ್‌ ರೇವಣ್ಣ ವಿಡಿಯೊ ಪ್ರಕರಣ: ಮಾಜಿ ಕಾರು ಚಾಲಕ ಕಾರ್ತಿಕ್‌ ವಿಡಿಯೊ ಸಂದೇಶ
Published 1 ಮೇ 2024, 0:04 IST
Last Updated 1 ಮೇ 2024, 0:04 IST
ಅಕ್ಷರ ಗಾತ್ರ

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿರುವ ಲೈಂಗಿಕ ದೌರ್ಜನ್ಯದ ವಿಡಿಯೊ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಅಜ್ಞಾತ ಸ್ಥಳದಿಂದ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

6 ನಿಮಿಷಗಳಿಗೂ ಹೆಚ್ಚಿರುವ ವಿಡಿಯೊದಲ್ಲಿ ಮಾತನಾಡಿರುವ ಅವರು, ‘ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೊ ಮತ್ತು ಫೋಟೊಗಳನ್ನು ನಾನು ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ಮಾತ್ರ ಕೊಟ್ಟಿದ್ದೇನೆ. ಬೇರೆ ಯಾರಿಗೂ ನೀಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್‍ನ ಯಾರೊಬ್ಬರಿಗೂ ವಿಡಿಯೊ–ಫೋಟೊಗಳನ್ನು ಕೊಟ್ಟಿಲ್ಲ. ನಾನು ಕಾಂಗ್ರೆಸ್‍ನವರಿಗೆ ಕೊಡುವುದಾಗಿದ್ದರೆ, ದೇವರಾಜೇಗೌಡರ ಬಳಿ ಏಕೆ ಹೋಗುತ್ತಿದ್ದೆ? ಅವರಿಗೆ ಬಿಟ್ಟರೆ ಒಂದೂ ತುಣುಕನ್ನು ಯಾರಿಗೂ ಕೊಟ್ಟಿಲ್ಲ. ವಿನಾಕಾರಣ ಕಾಂಗ್ರೆಸ್‍ನವರ ಹೆಸರನ್ನು ಎಳೆದುತರಬೇಡಿ’ ಎಂದು ಕೋರಿದ್ದಾರೆ.

‘15 ವರ್ಷದಿಂದ ಪ್ರಜ್ವಲ್ ಹಾಗೂ ಅವರ ಕುಟುಂಬದ ಕಾರು ಚಾಲಕನಾಗಿ ಕೆಲಸ ಮಾಡಿದ್ದೆ. ಆ ಸಂದರ್ಭದಲ್ಲಿ ನನ್ನ ಜಮೀನನ್ನು ಅವರು ಬಲವಂತವಾಗಿ ಬರೆಸಿಕೊಂಡು ನನ್ನ ಹಾಗೂ ನನ್ನ ಪತ್ನಿ ಮೇಲೆ ಹಲ್ಲೆ ಮಾಡಿ ಹಿಂಸೆ ಕೊಟ್ಟರು. ಹಾಗಾಗಿ ನಾನು ಒಂದು ವರ್ಷದಿಂದೀಚೆಗೆ ಕೆಲಸ ಬಿಟ್ಟು ಅವರ ಮನೆಯಿಂದ ಹೊರ ಬಂದೆ. ಆ ಸಂದರ್ಭದಲ್ಲಿ ನನಗೆ ಯಾರೂ ನ್ಯಾಯ ಕೊಡಿಸಲಿಲ್ಲ. ಹಾಗಾಗಿ ನನಗಾದ ಅನ್ಯಾಯವನ್ನು ಬಿಜೆಪಿ ಮುಖಂಡ ದೇವರಾಜೇಗೌಡ ಬಳಿ ಹೋಗಿ ವಿವರಿಸಿದೆ’ ಎಂದಿದ್ದಾರೆ.

‘ದೇವರಾಜೇಗೌಡರು ಪ್ರಜ್ವಲ್ ಕುಟುಂಬದ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದರು. ನಿನ್ನ ಬಳಿ ಇರುವ ವಿಡಿಯೊ ಮತ್ತು ಫೋಟೊಗಳನ್ನು ಕೊಡು, ನಾನು ಯಾರಿಗೂ ತೋರಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಅವರ ಮಾತನ್ನು ನಂಬಿ ನನ್ನ ಬಳಿ ಇದ್ದ ವಿಡಿಯೊದ ಒಂದು ಕಾಪಿಯನ್ನು ಅವರಿಗೆ ಕೊಟ್ಟಿದ್ದೆ’ ಎಂದು ತಿಳಿಸಿದ್ದಾರೆ.

‘ಆದರೆ, ಅವರು ಅದನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆಯೋ ಏನೋ ಗೊತ್ತಿಲ್ಲ. ಹಾಗೆಯೇ ಯಾರು ಪೆನ್‍ಡ್ರೈವ್ ಹಂಚಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ವಿನಾಕಾರಣ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಎಲ್ಲ ವಿಚಾರವನ್ನು ಎಸ್‍ಐಟಿ ಮುಂದೆ ಎಳೆ ಎಳೆಯಾಗಿ ಹಂಚಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ಮಹಿಳೆಯ ವಿರುದ್ಧ ಒಡನಾಡಿ ದೂರು: ‘ಸಂತ್ರಸ್ತ ಮಹಿಳೆಯ ನಡವಳಿಕೆ ಸರಿ ಇಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿರುವ ಮಹಿಳೆ ಹಾಗೂ ಪುರುಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒಡನಾಡಿ ಸಂಸ್ಥೆಯ ಮೇಲ್ವಿಚಾರಕಿ ಶ್ರುತಿ, ಜಿಲ್ಲಾಧಿಕಾರಿ ಮತ್ತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.

ಪೆನ್‍ಡ್ರೈವ್ ಎಲ್ಲಿಂದ ಎಲ್ಲಿಗೆ ಹೋಗಿದೆ ಎಂಬುದರ ಬಗ್ಗೆಯೂ ತನಿಖೆ ಆಗಲಿ. ಎಸ್‍ಐಟಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಸಿಬಿಐ ತನಿಖೆಯಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ.
ದೇವರಾಜೇಗೌಡ, ಬಿಜೆಪಿ ಮುಖಂಡ

ಭಾಷಣ ಮಾಡಲು ಜಿಲ್ಲಾಧಿಕಾರಿ ಯಾರು?’

‘ಪಾಪದ ಕೊಡ ತುಂಬಿದಾಗ ಎಲ್ಲವೂ ಹೊರಬರಲೇಬೇಕು’ ಎಂಬ ಹಾಸನ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌. ಲಿಂಗೇಶ್‌, ‘ರಾಜಕೀಯ ಭಾಷಣ ಮಾಡಲು ಇವರು ಯಾರು? ಜಿಲ್ಲಾಧಿಕಾರಿಯ ಕೆಲಸವೇನು ಎಂಬುದನ್ನು ತಿಳಿದುಕೊಳ್ಳಲಿ’ ಎಂದು ತಿರುಗೇಟು ನೀಡಿದ್ದಾರೆ.

‘ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಎಚ್.ಡಿ. ದೇವೇಗೌಡರು ಪತ್ರ ಬರೆದಿದ್ದರು. ಇದನ್ನು ಗುರಿಯಾಗಿಸಿಕೊಂಡು ಪ್ರತಿಭಟನಕಾರರ ಎದುರು ಮಹಾಭಾರತದ ಉದಾಹರಣೆ ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬನ್ನಿ ದೂರು ಕೊಡಿ ಎಂದು ಹೇಳಲು ಇವರು ಯಾರು? ಜಿಲ್ಲಾಧಿಕಾರಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇನೆ. ಪೆನ್‌ಡ್ರೈವ್ ಹಂಚಿಕೆ ಹಿಂದೆ ಯಾರಿದ್ದಾರೆ ಎಂಬುದನ್ನು ಎಸ್ಐಟಿ ತನಿಖೆ ಮಾಡಲಿ. ಪೆನ್‌ಡ್ರೈವ್‌ಗೆ ಬಂಡವಾಳ ಹಾಕಿದವರು ಯಾರು ಎಂಬುದರ ಬಗ್ಗೆಯೂ ಸಂಪೂರ್ಣ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.

‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಗೊತ್ತಾಗಿದೆ. ಮುಂದೆ ಮುಖ್ಯಮಂತ್ರಿ ಆಗಬೇಕು ಎಂದುಕೊಂಡಿರುವವರು, ರಾಜಕೀಯವಾಗಿ ಎಚ್‌.ಡಿ. ರೇವಣ್ಣ ಅವರನ್ನು ಹಣಿಯಲು ಈ ರೀತಿ ಎಫ್‌ಐಆರ್ ಮಾಡಿಸಿದ್ದಾರೆ’ ಎಂದು ಆರೋಪಿಸಿದರು.

‘ಎಸ್‌ಐಟಿಗೆ ಎಲ್ಲ ದಾಖಲೆ ನೀಡುವೆ’

ಬೆಂಗಳೂರು: ‘ಪೆನ್‌ಡ್ರೈವ್‌ ನಲ್ಲಿದ್ದ ವಿವರಗಳು ಬಹಿರಂಗ ಮಾಡಿರುವುದು ರೇವಣ್ಣ ಕುಟುಂಬದ ಮಾಜಿ ಕಾರು ಚಾಲಕ ಕಾರ್ತಿಕ್‌. ಅವನ ಆರೋಪಕ್ಕೆ
ಪ್ರತಿಕ್ರಿಯಿಸುವುದಿಲ್ಲ. ಪೆನ್‌ಡ್ರೈವ್‌ ಹಂಚಿಕೆ ಹಿಂದೆ ಯಾರಿದ್ದಾರೆ ಎನ್ನುವ ಎಲ್ಲ ಪ್ರಮುಖ ದಾಖಲೆಗಳನ್ನು ಎಸ್‌ಐಟಿಗೆ ನೀಡುತ್ತೇನೆ’ ಎಂದು ಹಾಸನ ಜಿಲ್ಲೆಯ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು,‘ಅಶ್ಲೀಲ ವಿಡಿಯೊಗಳ ಪೆನ್‌ಡ್ರೈವ್‌ ಅನ್ನು ನನಗೆ ಕಾರ್ತಿಕ್‌ ಕೊಟ್ಟಿದ್ದು ನಿಜ. ಆದರೆ, ಆತ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಸೇರಿದಂತೆ ಕಾಂಗ್ರೆಸ್‌ ಮುಖಂಡರ ಸಂಪರ್ಕದಲ್ಲೆ ಇದ್ದ. ಕಾರ್ತಿಕ್‌ ಬಳಿ ಪೆನ್‌ಡ್ರೈವ್‌ ಹೇಗೆ ಬಂತು? ಚುನಾವಣೆ ಮೂರು ದಿನ ಇರುವಾಗ ಹೇಗೆ ಬಹಿರಂಗವಾಯಿತು? ಕಾಂಗ್ರೆಸ್‌ ಪಾತ್ರವೇನು ಎನ್ನುವ ಕುರಿತು ಸರಿಯಾದ ತನಿಖೆಯಾಗಬೇಕು. ಇಲ್ಲದಿದ್ದರೆ ಸಿಬಿಐಗೆ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಅವರ ಸಾಮಾಜಿಕ ಜಾಲತಾಣದ ಉಸ್ತುವಾರಿಯನ್ನುಕಾರ್ತಿಕ್ ವಹಿಸಿಕೊಂಡಿದ್ದ. ಚುನಾವಣೆ ಸಮಯದಲ್ಲಿ ಏನೆಲ್ಲ ನಡೆದಿದೆ ಎನ್ನುವುದು ಗೊತ್ತಿದೆ. ತಾನೇ ತೋಡಿದ ಗುಂಡಿಯಲ್ಲಿ ಕಾಂಗ್ರೆಸ್ ಬೀಳಲಿದೆ’ ಎಂದರು.

‘ರೇವಣ್ಣ ಕುಟುಂಬ ಕಾರ್ತಿಕ್‌ ಕುಟುಂಬದ ಮೇಲೆ ದೌರ್ಜನ್ಯ ಎಸಗಿದಾಗ ಕಾಂಗ್ರೆಸ್‌ ಮುಖಂಡರನ್ನು ಸಂಪರ್ಕಿಸಿದ್ದ. ಅವರ ಬಳಿ ನ್ಯಾಯ ಸಿಗಲಿಲ್ಲ ಎಂದು ನನ್ನ ಬಳಿ ಬಂದಿದ್ದ. ಆಗ ಪೆನ್‌ಡ್ರೈವ್‌ನಲ್ಲಿನ ವಿವರ ಬಹಿರಂಗ ಮಾಡದಂತೆ ಕೋರ್ಟ್‌ ತಡೆ ನೀಡಿತ್ತು. ಹಾಗಾಗಿ, ವಕೀಲನಾಗಿರುವುದರಿಂದ ನನ್ನ ಬಳಿ ಪೆನ್‌ಡ್ರೈವ್‌ ಕೊಟ್ಟಿದ್ದ’ ಎಂದು ಹೇಳಿದರು.

‘ಅಶ್ಲೀಲ ವಿಡಿಯೊ ಬಗ್ಗೆ ವಿಜಯೇಂದ್ರ ಗಮನಕ್ಕೆ ತಂದಿದ್ದೆ’: ‘ಪ್ರಜ್ವಲ್‌ಗೆ ಸಂಬಂಧಿಸಿದ ಅಶ್ಲೀಲ ವಿಡಿಯೊಗಳ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ನಾಯಕರಿಗೆ ಪತ್ರ ಬರೆದು, ಮೇಲ್‌ ಮೂಲಕ ಗಮನಕ್ಕೆ ತಂದಿದ್ದೆ ಎಂದೂ ದೇವರಾಜೇಗೌಡ ಹೇಳಿದರು.

‘ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಪ್ರಜ್ವಲ್‌ಗೆ ಟಿಕೆಟ್‌ ನೀಡದಂತೆ ವಿಜಯೇಂದ್ರ ಅವರಿಗೆ ಮನವಿ ಮಾಡಿದ್ದೆ, ನಮ್ಮ ನಾಯಕರು ಅದನ್ನು ಗಂಭೀರವಾಗಿ ತೆಗೆದು ಕೊಳ್ಳಲಿಲ್ಲ’ ಎಂದು ಹೇಳಿದರು.

‘ನಾನು ಅಶ್ಲೀಲ ವಿಡಿಯೊಗಳನ್ನು ಬಿಡುಗಡೆ ಮಾಡುವುದಿದ್ದರೆ ರೇವಣ್ಣ ವಿರುದ್ಧ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗಲೇ ಬಿಡುಗಡೆ ಮಾಡಬಹುದಿತ್ತು. ಪ್ರಜ್ವಲ್‌ಗೆ ಟಿಕೆಟ್‌ ನೀಡುವ ಕುರಿತು ಚರ್ಚೆ ನಡೆದ ಸಮಯದಲ್ಲೇ ಬಹಿರಂಗ ಪಡಿಸಬಹುದಿತ್ತು. ಈಗ ಅದರ ಅಗತ್ಯ ಏನಿತ್ತು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT