ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನ್ ‘ವಾಣಿಜ್ಯಶಾಸ್ತ್ರ’ದ ವಿಸ್ಮಯ

Last Updated 28 ಜುಲೈ 2018, 19:30 IST
ಅಕ್ಷರ ಗಾತ್ರ

ವಾಣಿಜ್ಯಶಾಸ್ತ್ರಅಧ್ಯಾಪನದಲ್ಲಿ ದಂತ ಕಥೆಯಾಗಿದ್ದ ಪ್ರೊ ಬಿ.ಎಸ್. ರಾಮನ್ ತಮ್ಮ 81ನೇ ವಯಸ್ಸಿನಲ್ಲಿ ಹುಟ್ಟೂರಾದ ಊಟಿಯಲ್ಲಿ ಚಿರನಿದ್ರೆಗೆ ಜಾರಿದ್ದಾರೆ. ಇವರ ಅಗಲಿಕೆ ಕರ್ನಾಟಕದ ವಾಣಿಜ್ಯಶಾಸ್ತ್ರ ಶಿಕ್ಷಣ ಕ್ಷೇತ್ರವನ್ನು ಬಡವಾಗಿಸಿದೆ.

ರಾಮನ್ ಯಾವುದೇ ಪ್ರಚಾರದ ಹಿಂದೆ ಬಿದ್ದವರಲ್ಲ. ಆದರೂ ಅವರು ರಾಜ್ಯದ ಜನತೆಗೆ ಹೇಗೆ ಗೊತ್ತು ಎಂದರೆ ಅವರ ಪುಸ್ತಕಗಳ ಮೂಲಕ. ಅವರು 110 ಕ್ಕೂ ಹೆಚ್ಚಿನ ವಾಣಿಜ್ಯ ಶಾಸ್ತ್ರ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ.

ಪದವಿ ಪೂರ್ವ ತರಗತಿಗಳಿಂದ- ಪದವಿ ಮಟ್ಟದ ಇಡೀ ರಾಜ್ಯದ ವಿದ್ಯಾರ್ಥಿಗಳು ಓದಿದ್ದು ರಾಮನ್ ಪುಸ್ತಕಗಳನ್ನು. ರಾಮನ್ ಪುಸ್ತಕಗಳಿಲ್ಲದ ಕಾಲೇಜಿನ ಲೈಬ್ರರಿಗಳೇ ಇಲ್ಲ.

1960ರಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಅಧ್ಯಾಪನ ಪ್ರಾರಂಭಿಸಿದ ರಾಮನ್ ಮುಂದೆ 35 ವರ್ಷಗಳ ಕಾಲ (1995) ಶಿಕ್ಷಕ ವೃತ್ತಿಯ ಘನತೆ, ಹಿರಿಮೆಯನ್ನು ಎತ್ತಿ ಹಿಡಿದವರು. ನನಗೆ 18 ವರ್ಷಗಳ ಕಾಲ ಅವರ ವಿಭಾಗದಲ್ಲಿ ಸಹೋದ್ಯೋಗಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು.

ನಮಗೆಲ್ಲಾ ಒಂದು ಐಡೆಂಟಿಟಿ ಕೊಟ್ಟವರು ಅವರು. ನನ್ನ ಪರಿಚಯ ಕೇಳಿದವರಿಗೆ ಪುಸ್ತಕಗಳನ್ನು ಬರೆದ ರಾಮನ್ ಇದ್ದಾರಲ್ಲ, ನಾನು ಅವರ ಸಹೋದ್ಯೋಗಿ ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯವಾಗಿತ್ತು.

ರಾಮನ್ ಸರ್ ಅತ್ಯಂತ ಶಿಸ್ತಿನ ವ್ಯಕ್ತಿ. ಎಂತಹ ಪುಂಡ ವಿದ್ಯಾರ್ಥಿಯಾದರೂ ಅವರನ್ನು ತಲೆ ಎತ್ತಿ ನೋಡುವ ಧೈರ್ಯ ಮಾಡುತ್ತಿರಲಿಲ್ಲ. ಅದೊಂದು ಗೌರವದ ಭಯ. ಅವರ ಅಕೌಂಟೆನ್ಸಿ ಕ್ಲಾಸ್ ಎಂದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಶುಕ್ಲಾ, ಗ್ರೇವಲ್ ಪುಸ್ತಕ ತರಲೇಬೇಕಿತ್ತು. ಅದಕ್ಕಿಂತ ಮುಂಚೆ ಬಾಟ್ಲಿಬಾಯ್ ಪುಸ್ತಕ. ಅವರೇ ಬರೆದ ಅಕೌಂಟೆನ್ಸಿ ಪುಸ್ತಕ ಅತ್ಯಂತ ಜನಪ್ರಿಯವಾಗಿದ್ದರೂ, ವಿದ್ಯಾರ್ಥಿಗಳು ಅದನ್ನೇ ಓದುತ್ತಿದ್ದರೂ, ರಾಮನ್ ಮಾತ್ರ ತಮ್ಮ ಪುಸ್ತಕವನ್ನು ಶಿಫಾರಸು ಮಾಡುತ್ತಿರಲಿಲ್ಲ.

ಪ್ರೊ.ರಾಮನ್ 35 ವರ್ಷಗಳ ವೃತ್ತಿ ಜೀವನದಲ್ಲಿ ರಜಾ ಹಾಕಲೇ ಇಲ್ಲ. ಅವರ ತಂದೆ ನಿಧನರಾದಾಗ ಅರ್ಧ ದಿವಸ ಭಾಗಿಯಾಗಿ ಮಧ್ಯಾಹ್ನ ಕಾಲೇಜಿಗೆ ಹಾಜರ್!. ಒಮ್ಮೆ ರಾಮನ್ ಕಾಲೇಜಿಗೆ ಬಂದಾಗ ಅವರ ತಲೆಗೂದಲು ಕೆದರಿತ್ತು. ಅಂಗಿಯ ಬಟನ್ ಸರಿಯಾಗಿ ಹಾಕಿರಲಿಲ್ಲ. ಒಂದು ರೀತಿಯ ನೋವು ಅವರ ಮುಖದಲ್ಲಿ ಕಾಣಿಸುತ್ತಿತ್ತು. ನಮಗೆ ಕೇಳುವ ಧೈರ್ಯವಾಗಲಿಲ್ಲ. ಮುಂದೆ ಸ್ವಲ್ಪ ದಿವಸಗಳಲ್ಲಿ ಗೊತ್ತಾಯ್ತು. ಅಂದು ಬೆಳಿಗ್ಗೆ ಅವರ ಪ್ರೀತಿಯ ಮೊಮ್ಮಗು ತೀರಿಕೊಂಡಿತ್ತು.

ರಾಮನ್ ಅವರ ನೂರಾರು ವಿದ್ಯಾರ್ಥಿಗಳು ಚಾರ್ಟರ್ಡ್ ಅಕೌಂಟೆಂಟ್ ಮತ್ತು ಇನ್ನಿತರ ಉನ್ನತ ಪರೀಕ್ಷೆಗಳನ್ನು ಪಾಸು ಮಾಡಿ ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿದ್ದಾರೆ. ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಕಂಬನಿ ಮಿಡಿದು ಕೇವಲ 2 ಗಂಟೆಗಳಲ್ಲಿ ಒಂದು ಕೋಟಿ ರೂಪಾಯಿ ಬಂಡವಾಳದ ‘ಪ್ರೊ.ರಾಮನ್ ಮೆಮೋರಿಯಲ್ ಟ್ರಸ್ಟ್’ ಸ್ಥಾಪಿಸಲು ನಿರ್ಧರಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಸಂತ ಅಲೋಶಿಯಸ್ ಕಾಲೇಜು ‘ಎಮಿನೆಂಟ್ ಅಲೋಶಿಯನ್’ ಪ್ರಶಸ್ತಿ ನೀಡಿ ಗೌರವಿಸಿದಾಗ ಅವರು ಸ್ವೀಕರಿಸುವುದಿಲ್ಲ ಎನ್ನುವ ಭಯ ಇತ್ತು. ಅವರು ಮನಸ್ಸು ಬದಲಾಯಿಸಿ ಸಮಾರಂಭಕ್ಕೆ ಬಂದರು.

ಆಗ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಆಟೋರಿಕ್ಷಾದಲ್ಲಿ ಪ್ರಯಾಣಿಸಿ ಹಣ ಕೊಡುವ ಸಂದರ್ಭದಲ್ಲಿ ಚಾಲಕ ಅವರ ಹೆಸರು ಕೇಳಿದನಂತೆ, ಪ್ರೊ ರಾಮನ್ ಎಂದು ಗೊತ್ತಾದಾಗ ಹಣ ತೆಗೆದುಕೊಳ್ಳಲು ನಿರಾಕರಿಸಿ ತಾನು ಸಂಜೆ ಕಾಲೇಜಿನಲ್ಲಿ ತಮ್ಮ ಪುಸ್ತಕಗಳನ್ನೇ ಓದಿ ಪಾಸಾಗಿದ್ದು ಎಂದು ನಮಸ್ಕರಿಸಿದನಂತೆ.

ನಿಂತ ನೀರಾಗದೇ ಸದಾ ಹರಿಯುವ ನದಿಯ ತಿಳಿ ನೀರಿನಂತೆ ರಾಮನ್ ಮತ್ತೊಂದು ಲೋಕದತ್ತ ಪಯಣ ಬೆಳೆಸಿದ್ದಾರೆ.

ಅವರ ಪುಸ್ತಕಗಳು, ಅವರು ಎತ್ತಿಹಿಡಿದ ಅಧ್ಯಾಪಕ ವೃತ್ತಿಯ ಮೌಲ್ಯಗಳು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಇದುವೇ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.

(ಲೇಖಕರು: ಸಂತ ಅಲೋಶಿಯಸ್ವಿಶ್ವವಿದ್ಯಾಲಯದ ಕುಲಸಚಿವ)

***

ಪ್ರೊ.ಬಿ.ಎಸ್‌.ರಾಮನ್‌ ನಿಧನ
ಮಂಗಳೂರು:
ನಗರದ ಸೇಂಟ್‌ ಅಲೋಶಿಯಸ್ ಕಾಲೇಜಿನಲ್ಲಿ 35 ವರ್ಷಗಳ ಕಾಲ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿದ್ದ ಹಾಗೂ 100ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದ ಪ್ರೊ.ಬಿ.ಎಸ್‌.ರಾಮನ್‌ (81) ಶುಕ್ರವಾರ ತಮಿಳುನಾಡಿನ ಊಟಿಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

1960ರಲ್ಲಿ ಅಲೋಶಿಯಸ್‌ ಕಾಲೇಜು ಸೇರಿದ್ದ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದರು. ಅತ್ಯಂತ ಕಟ್ಟುನಿಟ್ಟಿನ ಗುರುಗಳಾಗಿದ್ದ ಅವರ ತರಗತಿಗೆ ಚಕ್ಕರ್ ಹೊಡೆಯುವ ವಿದ್ಯಾರ್ಥಿಗಳೇ ಇರಲಿಲ್ಲ. ಅವರು ಒಟ್ಟಾರೆ 20 ಸಾವಿರಕ್ಕಿಂತಲೂ ಅಧಿಕ ಶಿಷ್ಯರನ್ನು ಹೊಂದಿದ್ದು, ಮಂಗಳೂರಿನ ಬಹುತೇಕ ಲೆಕ್ಕ ಪರಿಶೋಧಕರು ಅವರ ಪ್ರಭಾವಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಒಳಗಾದವರು.

ರಾಮನ್‌ ಅವರು ಅಕೌಂಟೆನ್ಸಿ, ಕಾಮರ್ಸ್, ಎಕನಾಮಿಕ್ಸ್, ಬಿಸಿನೆಸ್‌ ಲಾ ಮೊದಲಾದ ವಿಷಯಗಳಲ್ಲಿ 100ಕ್ಕಿಂತ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಹಲವು ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿವೆ. ಮಂಗಳೂರು ಭಾಗದಲ್ಲಿ ಬಿಬಿಎ ಕೋರ್ಸ್‌ ಆರಂಭಿಸಿದವರು
ಇವರೇ.

ತಮ್ಮ ನಿವೃತ್ತಿಯ ನಂತರ ರಾಮನ್‌ ಬಹಳ ವರ್ಷ ಮಂಗಳೂರಿನಲ್ಲಿ ನೆಲೆಸಿದ್ದರು. ಬಳಿಕ 4 ವರ್ಷ ಬೆಂಗಳೂರಿನಲ್ಲಿದ್ದರು. ಈಚೆಗೆ ಅವರು ತಮ್ಮ ಹುಟ್ಟೂರಾದ ಊಟಿಗೆ ತೆರಳಿ ಅಲ್ಲೇ ನೆಲೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT