ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್‌ ಪ್ರೊಫೆಸರ್‌ ನಿತಾಶಾಗೆ ನಿರ್ಬಂಧ: ತೀವ್ರ ಆಕ್ಷೇಪ

ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕ್ರಮ–ಕಾಂಗ್ರೆಸ್ * ಸರ್ಕಾರ ಆಹ್ವಾನಿಸಿದ್ದೇ ಅಪರಾಧ –ಬಿಜೆಪಿ
Published 27 ಫೆಬ್ರುವರಿ 2024, 0:30 IST
Last Updated 27 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಬೆಂಗಳೂರಿಗೆ ಆಗಮಿಸಿದ್ದ ಬ್ರಿಟನ್‌ನ ಪ್ರೊಫೆಸರ್‌, ಭಾರತ ಮೂಲದ ನಿತಾಶಾ ಕೌಲ್ ಅವರು ನಗರ ಪ್ರವೇಶಿಸದಂತೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿಯೇ ತಡೆದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಈ ಬೆಳವಣಿಗೆಯು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಒಕ್ಕೂಟ ವ್ಯವಸ್ಥೆಯ ನೀತಿಗಳ ಮೇಲಿನ ಹಲ್ಲೆ ಎಂದು ಕಾಂಗ್ರೆಸ್ ಪಕ್ಷ ಪ್ರತಿಕ್ರಿಯಿಸಿದ್ದರೆ, ‘ನಿತಾಶಾ ಕೌಲ್‌ ಭಾರತ ವಿರೋಧಿ’ ಎಂದು ಬಿಜೆಪಿ ಟೀಕಿಸಿದೆ.

ಬ್ರಿಟನ್‌ನ ವೆಸ್ಟ್‌ಮಿನಿಸ್ಟರ್‌ ವಿಶ್ವವಿದ್ಯಾಲಯದ ಕಾಶ್ಮೀರಿ ಪಂಡಿತ್ ವಿಭಾಗದ ಪ್ರೊಫೆಸರ್‌ ಆಗಿರುವ ಪ್ರೊ. ನಿತಾಶಾ ಕೌಲ್ ಅವರನ್ನು, ರಾಜ್ಯ ಸರ್ಕಾರ ನಗರದಲ್ಲಿ ಏರ್ಪಡಿಸಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ’ಕ್ಕೆ ಆಹ್ವಾನಿಸಿತ್ತು.

ಇವರನ್ನು ವಿಮಾನನಿಲ್ದಾಣದಲ್ಲಿಯೇ ತಡೆದಿದ್ದ ಅಧಿಕಾರಿಗಳು ವಾಪಸ್‌ ಕಳುಹಿಸಿದ್ದರು. ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಂಡಿದ್ದಾಗಿಯೂ ಹೇಳಿದ್ದರು.

ಈ ಮಧ್ಯೆ ಭಾರತ ವಿರೋಧಿ ಎಂಬ ಬಿಜೆಪಿಯ ಟೀಕೆಯನ್ನು ‘ಅಸಂಬದ್ಧ’ ಎಂದು ನಿತಾಶಾ ಕೌಲ್ ಅವರು ಹೇಳಿದ್ದಾರೆ. ‘ಎಕ್ಸ್‌’ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದು, ‘ಅಧಿಕಾರದಲ್ಲಿರುವವರು ಹೆದರುವಂತಹ ಪ್ರಗತಿಪರ ಚಿಂತನೆಯುಳ್ಳ ಮಹಿಳೆ ನಾನು‘ ಎಂದು ಪ್ರತಿಪಾದಿಸಿದ್ದಾರೆ.

ಸಚಿವ ಎಚ್‌.ಸಿ.ಮಹದೇವಪ್ಪ ಅವರು, ‘ವ್ಯಕ್ತಿಯ ಮೂಲಭೂತ ಹಕ್ಕು ಹಾಗೂ ರಾಜ್ಯ ಸರ್ಕಾರದ ಹಕ್ಕುಗಳನ್ನು ಹೇಗೆ ಹತ್ತಿಕ್ಕಲಾಗುತ್ತಿದೆ ಎಂಬುದಕ್ಕೆ ಈ ಘಟನೆ ನಿದರ್ಶನ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ದೇಶದಲ್ಲಿ ಸಾಂವಿಧಾನಿಕ ಚಿಂತನೆಗಳಿಗೆ ಎದುರಾಗಿರುವ ಸವಾಲುಗಳಿಗೆ ಇದು ಉದಾಹರಣೆ. ಎಲ್ಲ ನಾಗರಿಕರು  ಇಂಥ ಪ್ರಕರಣಗಳನ್ನು ಎದುರಿಸಲು, ಸಂವಿಧಾನ ರಕ್ಷಿಸಲು ಒಗ್ಗಟ್ಟಾಗಬೇಕಾಗಿದೆ’ ಎಂದು ಹೇಳಿದರು.

ಸಮಾವೇಶವನ್ನು ಆಯೋಜಿಸುವುದು ಹಾಗೂ ಅದಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ರಾಜ್ಯದ ಅಭಿವೃದ್ಧಿಯನ್ನು ಅರ್ಥಪೂರ್ಣವಾಗಿ ಬಿಂಬಿಸುವ ಪರಿಣತರನ್ನು ಆಹ್ವಾನಿಸುವುದು ರಾಜ್ಯ ಸರ್ಕಾರದ ಹಕ್ಕು. ಇದು ಸಂವಿಧಾನದತ್ತವಾಗಿದೆ. ಕೇಂದ್ರ ಸರ್ಕಾರ ಇದನ್ನು ಅಲಕ್ಷಿಸಿದೆ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರೂ ಈ ಬೆಳವಣಿಯ ಬಗ್ಗೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ್ರೊಫೆಸರ್ ಅವರನ್ನು ಏಕೆ ವಾಪಸು ಕಳುಹಿಸಲಾಯಿತು ಎಂದು ಕೇಂದ್ರ ಸರ್ಕಾರ ವಿವರಣೆ ನೀಡಲಿ ಎಂದು ಒತ್ತಾಯಿಸಿದ್ದಾರೆ. 

‘ಎಕ್ಸ್‌’ನಲ್ಲಿ ಈ ಕುರಿತಂತೆ ಅವರು, ‘ಕ್ಷಮಿಸಿ, ನಿತಾಶಾ ಕೌಲ್. ‘ಪ್ರಜಾಪ್ರಭುತ್ವದ ತಾಯಿ’ ನಿಮಗೆ ಪ್ರವೇಶ ನಿರಾಕರಿಸಿದೆ. ಬೆಂಗಳೂರಿನ ಸಮಾವೇಶದಲ್ಲಿ ನಿಮ್ಮ ಮಾತುಗಳನ್ನು ಕೇಳಲು ನಾವು ಕಾಯುತ್ತಿದ್ದೆವು.  ಇವರನ್ನು ಏಕೆ ವಾಪಸ್ ಕಳುಹಿಸಲಾಯಿತು ಎಂದು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ದಯವಿಟ್ಟು ವಿವರಣೆ ನೀಡುವರೇ?‘ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಭಾರತದ ಸಾಗರೋತ್ತರ ಪ್ರಜೆಯಾಗಿರುವ ನಿತಾಶಾ ಕೌಲ್ ಅವರು ‘ಭಯೋತ್ಪಾದಕರ ಬಗ್ಗೆ ಅನುಕಂಪ ಉಳ್ಳವರಾಗಿದ್ದು, ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ಇಂತಹ ಸಮಾವೇಶಗಳನ್ನು ಆಯೋಜಿಸುವ ಮೂಲಕ ಅನಗತ್ಯ ವೆಚ್ಚ ಮಾಡುತ್ತಿದೆ. ಇದೇ ಮೊತ್ತದಲ್ಲಿ ಎಷ್ಟೋ ರೈತರಿಗೆ ನೆರವು ನೀಡಬಹುದಾಗಿತ್ತು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ. 

ಬಿಜೆಪಿಯು ತನ್ನ ಟೀಕಾಕಾರರಿಗೆ ‘ಕಿರುಕುಳ ನೀಡಲು ಮತ್ತು ದಂಡನೆಗೆ ಒಳಪಡಿಸಲು’ ಪಾಸ್‌ಪೋರ್ಟ್‌ಗಳನ್ನು ‘ಅಸ್ತ್ರಗಳಾಗಿ’ ಬಳಸುತ್ತಿದ್ದು, ಪ್ರಯಾಣದ ಮೇಲೆ ‘ಅಕ್ರಮವಾಗಿ’ ನಿಷೇಧ ಹೇರುತ್ತಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೋಮವಾರ ಕಾಶ್ಮೀರದ ಶ್ರೀನಗರದಲ್ಲಿ ಆರೋಪಿಸಿದರು.

ನಿತಾಶಾ ಕೌಲ್‌ ಅವರನ್ನು ಆಹ್ವಾನಿಸುವ ಮೂಲಕ ರಾಜ್ಯದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕ್ಷಮಿಸಲಾಗದ ಅಪರಾಧ ಮಾಡಿದೆ. ಕೌಲ್‌ ಅವರನ್ನು ಆಹ್ವಾನಿಸಿದ್ದು ಖಂಡನೀಯ.
ಬಿ.ವೈ.ವಿಜಯೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ
ನಿತಾಶಾ ಕೌಲ್‌ ಅವರನ್ನು ವಾಪಸು ಕಳುಹಿಸಿದ ಕ್ರಮ ಸಮರ್ಥನೀಯ. ನಿತಾಶಾ ಅವರು ತಾವು ಬಯಸಿದ್ದನ್ನು ಮಾಡಿಕೊಳ್ಳಲಿ. ಆದರೆ ಅದು ಭಾರತದ ಹೊರಗಡೆ ಮಾತ್ರ
ಮೋಹನದಾಸ, ಪೈ ಇನ್ಫೊ ಸಂಸ್ಥೆಯ ಮಾಜಿ ಅಧಿಕಾರಿ  
ವೈಯಕ್ತಿಕವಾದ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವಂತಹ ನಿರಂಕುಶ ಆಡಳಿತ ವ್ಯವಸ್ಥೆಯು ನಮ್ಮ ದೇಶದಲ್ಲಿದೆಯೇ?
ರಿಜ್ವಾನ್‌ ಅರ್ಷದ್  ಕಾಂಗ್ರೆಸ್‌ ಶಾಸಕ
ನಾನು ಭಾರತ ವಿರೋಧಿಯೂ ಅಲ್ಲ ಗ್ಯಾಂಗ್‌ನ ಸದಸ್ಯೆಯೂ ಅಲ್ಲ
ನಿತಾಶಾ ಕೌಲ್ ಪ್ರೊಫೆಸರ್ ವೆಸ್ಟ್‌ಮಿನಿಸ್ಟರ್ ವಿ.ವಿ. ಲಂಡನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT