ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಕತಾ ಸಮಾವೇಶ | ಬ್ರಿಟನ್‌ ಪ್ರೊಫೆಸರ್‌ಗೆ ಪ್ರವೇಶ ನಿರಾಕರಣೆ

Published 25 ಫೆಬ್ರುವರಿ 2024, 22:30 IST
Last Updated 25 ಫೆಬ್ರುವರಿ 2024, 22:30 IST
ಅಕ್ಷರ ಗಾತ್ರ

ನವದೆಹಲಿ: ಏಕತಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಕರ್ನಾಟಕ ಸರ್ಕಾರದ ಆಹ್ವಾನದ ಮೇರೆಗೆ ಬಂದಿದ್ದ ತಮ್ಮನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಪಸ್‌ ಕಳುಹಿಸಿದರು ಎಂದು ಬ್ರಿಟನ್‌ನ ವೆಸ್ಟ್‌ಮಿನಿಸ್ಟರ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿರುವ ಭಾರತೀಯ ಸಂಜಾತೆ ನಿತಾಶಾ ಕೌಲ್ ಆರೋಪಿಸಿದ್ದಾರೆ.

‘ಮಾನ್ಯತೆ ಇರುವ ವೀಸಾ ತಮ್ಮಲ್ಲಿದ್ದರೂ ಸಕಾರಣವನ್ನು ನೀಡದೆ ವಾಪಸ್‌ ತೆರಳಲು ವಲಸೆ ವಿಭಾಗದ ಅಧಿಕಾರಿಗಳು ಹೇಳಿದರು. ತಾವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕುರಿತು ಹಿಂದೆ ಟೀಕಿಸಿದ್ದನ್ನು ಅನೌಪಚಾರಿಕವಾಗಿ ಉಲ್ಲೇಖಿಸಿದರು. ದೆಹಲಿಯಿಂದ ಆದೇಶ ಬಂದಿರುವುದರಿಂದ ತಾವು ಪಾಲಿಸುತ್ತಿದ್ದೇವೆ ಎಂದಷ್ಟೇ ತಿಳಿಸಿದರು’ ಎಂದು ‘ಎಕ್ಸ್‌’ನಲ್ಲಿ ನಿತಾಶಾ ಪೋಸ್ಟ್‌ ಮಾಡಿದ್ದಾರೆ. 

ವೆಸ್ಟ್‌ಮಿನಿಸ್ಟರ್‌ ವಿಶ್ವವಿದ್ಯಾಲಯದ ಪ್ರಜಾಪ್ರಭುತ್ವ ಅಧ್ಯಯನ ಕೇಂದ್ರದ ನಿರ್ದೇಶಕಿಯಾಗಿರುವ ಪ್ರೊಫೆಸರ್ ನಿತಾಶಾ ಅವರು ಲೇಖಕಿಯೂ ಹೌದು. 

ಶುಕ್ರವಾರ ಇಡೀ ರಾತ್ರಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಕಳೆದು, ಶನಿವಾರ ಬ್ರಿಟನ್‌ಗೆ ವಾಪಸಾದರು. ಕರ್ನಾಟಕದ ಸಚಿವ ಎಚ್‌.ಸಿ.ಮಹದೇವಪ್ಪ ಅವರ ಅಧಿಕೃತ ಆಹ್ವಾನದ ಮೇರೆಗೆ ಬಂದಿದ್ದಾಗಿಯೂ ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. 

ಭಾರತದ ವಿದೇಶಿ ಪ್ರಜೆ (ಒಸಿಐ) ಎಂಬ ಕಾರ್ಡ್‌ ಹೊಂದಿದ್ದ ಅವರ ಬಳಿ ಬ್ರಿಟನ್‌ನ ಪಾಸ್‌ಪೋರ್ಟ್‌ ಕೂಡ ಇತ್ತು. ಆದರೂ ಪ್ರವೇಶ ನಿರಾಕರಿಸಲಾಗಿದೆ. 

ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಟೀಕಾಕಾರರಾದ, ಸ್ವೀಡನ್‌ನ ಶಿಕ್ಷಣತಜ್ಞ ಅಶೋಲ್ ಸ್ವೇನ್‌  ಅವರ ಒಸಿಐ ಅನ್ನೂ ಕೇಂದ್ರ ಸರ್ಕಾರ ಇತ್ತೀಚೆಗೆ ರದ್ದು ಪಡಿಸಿತ್ತು. ಫ್ರೆಂಚ್ ಪತ್ರಕರ್ತೆ ವೆನೆಸ್ಸಾ ಡೌಗ್ನ್ಯಾಕ್‌ ಕೂಡ ಒಸಿಐ ರದ್ದತಿಯಿಂದಾಗಿ ಇತ್ತೀಚೆಗೆ ವಾಪಸ್ ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT