ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ತಿ ಕಲಹ: ತಂಗಿ ಮೇಲೆ ನಾಯಿ ಛೂ ಬಿಟ್ಟ ಅಣ್ಣ

Published : 17 ಸೆಪ್ಟೆಂಬರ್ 2024, 16:37 IST
Last Updated : 17 ಸೆಪ್ಟೆಂಬರ್ 2024, 16:37 IST
ಫಾಲೋ ಮಾಡಿ
Comments

ಬೆಂಗಳೂರು: ಆಸ್ತಿ ಕಲಹಕ್ಕೆ ಸಂಬಂಧಿಸಿದ ತಕರಾರು ಪ್ರಕರಣವೊಂದರಲ್ಲಿ ತಂಗಿಯ ಮೇಲೆ ಅಣ್ಣನೊಬ್ಬ ನಾಯಿ ಛೂ ಬಿಟ್ಟು ಜೀವ ಬೆದರಿಕೆ ಹಾಕಿದ ಆರೋಪದ ತನಿಖಾ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್‌ ಹಲಸೂರು ಪೊಲೀಸರಿಗೆ ನಿರ್ದೇಶಿಸಿದೆ.

‘ಜೀವ ಬೆದರಿಕೆ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಪುರುಷೋತ್ತಮ್‌ ಮತ್ತು ಅವರ ಪತ್ನಿ ಭಾಗ್ಯ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. 

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆಯನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ‘ಏನ್ರೀ ಮನೆಗೆ ಬಂದರೆ ನಾಯಿ ಛೂ ಬಿಡುತ್ತಾರಾ ನಿಮ್ಮ ಅರ್ಜಿದಾರರು’ ಎಂದು ಪ್ರಶ್ನಿಸಿದರು.

ಇದಕ್ಕೆ ವಕೀಲೆ, ‘ಅದು ಸಾಕಿದ ನಾಯಿ, ಅಷ್ಟಕ್ಕೂ ಅವರ ಸಹೋದರಿ ಬಂದಾಗ ಕಟ್ಟಿ ಹಾಕಲಾಗಿತ್ತು. ಅರ್ಜಿದಾರರ ಮೇಲಿನ ಆರೋಪಗಳು ಸುಳ್ಳು’ ಎಂದು ತಿಳಿಸಿದರು. 

ಆದರೆ, ಇದಕ್ಕೆ ತೃಪ್ತರಾಗದ ನ್ಯಾಯಮೂರ್ತಿಗಳು, ‘ಸಾಕು ನಾಯಿನಾ? ಸಾಕಿದ ನಾಯಿ ಎಂದರೆ ಕಚ್ಚುವುದಿಲ್ಲವೇ? ಕಟ್ಟಿ ಹಾಕಿದ ನಾಯಿಯನ್ನು ದೂರುದಾರರ ಮೇಲೆ ಏಕೆ ಛೂ ಬಿಟ್ಟರು?  ಆಸ್ತಿ ವಿವಾದವಿದ್ದರೆ ಆ ಸಮಸ್ಯೆ ಬಗೆಹರಿಸಲು ನಾಯಿಗೆ ಏಕೆ ಹೇಳಿದಿರಿ ಎಂದು ಕುಟುಕಿದರು.

‘ಪ್ರಕರಣದ ಕುರಿತಂತೆ ತನಿಖೆಯ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿ’ ಎಂದು ಪ್ರಾಸಿಕ್ಯೂಷನ್‌ ಪರ ವಕೀಲರಿಗೆ ಸೂಚಿಸಿ ಇದೇ 19ಕ್ಕೆ ವಿಚಾರಣೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT