ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಆಸ್ತಿ ತೆರಿಗೆ: ಶೇ 5ರ ರಿಯಾಯಿತಿ ಅವಧಿ ವಿಸ್ತರಣೆ

ಕೊರೊನಾ ಸಂಕಷ್ಟ: ಆಸ್ತಿ ಮಾಲೀಕರ ಬೇಡಿಕೆಗೆ ಸ್ಪಂದಿಸಿದ ಬಿಬಿಎಂಪಿ
Last Updated 28 ಏಪ್ರಿಲ್ 2020, 16:11 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣ ಸಲುವಾಗಿ ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ನಗರದ ಆಸ್ತಿ ಮಾಲೀಕರ ಕೋರಿಕೆಗೆ ಬಿಬಿಎಂಪಿ ಕೊನೆಗೂ ಅಸ್ತು ಎಂದಿದೆ. ಇದೇ ಮೇ 31 ಒಳಗೆ ತೆರಿಗೆ ಪಾವತಿಸುವವರಿಗೂ ಶೇ 5ರಷ್ಟು ರಿಯಾಯಿತಿ ನೀಡಲು ಪಾಲಿಕೆ ನಿರ್ಧರಿಸಿದೆ. ಈ ಕುರಿತು ಮಂಗಳವಾರ ಆದೇಶ ಹೊರಡಿಸಿದೆ.

ಪ್ರತಿವರ್ಷವೂ ಏಪ್ರಿಲ್‌ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಾತ್ರ ಶೇ 5ರಷ್ಟು ರಿಯಾಯಿತಿ ಸಿಗುತ್ತಿತ್ತು. ಏಪ್ರಿಲ್‌ ತಿಂಗಳಲ್ಲೇ ಆಸ್ತಿ ತೆರಿಗೆ ಪಾವತಿಸುತ್ತಿದ್ದ ಅನೇಕರಿಗೆ ಈ ಬಾರಿ ಇದುವರೆಗೆ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ. ಅನೇಕರು ಮನೆಯಿಂದ ಹೊರಗೆ ಬಂದು ಚಲನ್‌ ಪಡೆಯಲು ಭಯಪಡುತ್ತಿದ್ದಾರೆ. ಕೆಲವರಿಗೆ ಆರ್ಥಿಕ ಸಂಕಷ್ಟದಿಂದಾಗಿಯೂ ತೆರಿಗೆ ಪಾವತಿ ಸಾಧ್ಯವಾಗಿಲ್ಲ. ಹಾಗಾಗಿ ತೆರಿಗೆದಾರರಿಗೆ ಶೇ 5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಜೂನ್‌ವರೆಗೆ ವಿಸ್ತರಿಸುವಂತೆ ಅನೇಕರು ಬಿಬಿಎಂಪಿಯನ್ನು ಕೋರಿದ್ದರು.

ಬಿಬಿಎಂಪಿ ಬಜೆಟ್‌ ಕುರಿತು ಚರ್ಚಿಸುವ ಸಲುವಾಗಿ ಇತ್ತೀಚೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದಿದ್ದ ಕೌನ್ಸಿಲ್‌ ಸಭೆಯಲ್ಲೂ ಅನೇಕ ಸದಸ್ಯರು ತೆರಿಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಜೂನ್‌ ಅಂತ್ಯದವರೆಗೂ ವಿಸ್ತರಿಸುವಂತೆ ಮನವಿ ಮಾಡಿದ್ದರು.

ಪಾಲಿಕೆ ಸದಸ್ಯ ಎಂ.ಕೆ.ಗುಣಶೇಖರ್‌ ಅವರು ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರಿಗೆ ಪತ್ರ ಬರೆದು ಅವಧಿ ವಿಸ್ತರಿಸುವಂತೆ ಕೋರಿದ್ದರು. 2016–17ನೇ ಸಾಲಿನಲ್ಲಿ ತಾವು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆಸ್ತಿ ತೆರಿಗೆ ಪಾವತಿ ತಂತ್ರಾಂಶದಲ್ಲಿ ದೋಷ ಕಾಣಿಸಿಕೊಂಡಿದ್ದಾಗಲೂ ಮೇ ಅಂತ್ಯದವರೆಗೆ ಈ ಸೌಕರ್ಯವನ್ನು ವಿಸ್ತರಿಸಿದ್ದನ್ನು ಅವರು ನೆನಪಿಸಿದ್ದರು.

ಈ ಬೆಳವಣಿಗೆಗಳ ಬಳಿಕ ಮೇಯರ್‌ ಅವರು ತೆರಿಗೆ ಪಾವತಿದಾರರಿಗೆ ಶೇ 5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ವಿಸ್ತರಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌, ‘ತೆರಿಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಯಿತಿ ನೀಡುವ ಅವಧಿಯನ್ನು ಮೇ 31ರ ವರೆಗೆ ವಿಸ್ತರಿಸಲಾಗಿದೆ’ ಎಂದರು.

ತೆರಿಗೆ ಸಂಗ್ರಹ ಗಣನೀಯ ಇಳಿಕೆ

ಮಂಗಳವಾರದವರೆಗೆ (ಏ.28) ಬಿಬಿಎಂಪಿಗೆ ₹ 296.89 ಆಸ್ತಿ ತೆರಿಗೆ ಮಾತ್ರ ಪಾವತಿಯಾಗಿದೆ. ಕಳೆದ ವರ್ಷದ ಒಟ್ಟು ಆಸ್ತಿ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಈ ಏಪ್ರಿಲ್‌ನಲ್ಲಿ ಇದುವರೆಗೆ ಶೇ 11ರಷ್ಟೂ ತೆರಿಗೆ ಮಾತ್ರ ಸಂಗ್ರಹವಾಗಿದೆ.

2019–20ನೇ ಸಾಲಿನಲ್ಲಿ ಒಟ್ಟು ₹ 2689.65 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಅದರಲ್ಲಿ ಹೆಚ್ಚೂ ಕಡಿಮೆ ₹ 1 ಸಾವಿರ ಕೋಟಿ ತೆರಿಗೆ (ಶೇ 30ರಷ್ಟು) 2019ರ ಏಪ್ರಿಲ್‌ ತಿಂಗಳಲ್ಲೇ ಸಂಗ್ರಹವಾಗಿತ್ತು.

2020–21ರಲ್ಲಿ ₹ 3500 ಕೋಟಿಯನ್ನು ಆಸ್ತಿ ತೆರಿಗೆ ರೂಪದಲ್ಲಿ ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT