ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾರಾಲಯ ಆಧುನೀಕರಣಕ್ಕೆ ಪ್ರಸ್ತಾವನೆ: ಸಚಿವರ ಸೂಚನೆ

Published 17 ಆಗಸ್ಟ್ 2024, 0:00 IST
Last Updated 17 ಆಗಸ್ಟ್ 2024, 0:00 IST
ಅಕ್ಷರ ಗಾತ್ರ

ಬೆಂಗಳೂರು: ಜವಾಹರಲಾಲ್‌ ನೆಹರು ತಾರಾಲಯದಲ್ಲಿ ತಾಂತ್ರಿಕ ಆಧುನೀಕರಣಕ್ಕೆ ಅಗತ್ಯವಿರುವ ಪ್ರಸ್ತಾವನೆ ಸಲ್ಲಿಸುವಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾರಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಸ್ಮಾರ್ಟ್‌ ಸಿಟಿ ಯೋಜನೆಯಡಿ ನಡೆಸುತ್ತಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ತಾರಾಲಯದಲ್ಲಿ ಈಗ ಇರುವ ಅನಲಾಗ್‌ ಪ್ರೊಜೆಕ್ಟರ್‌ಗಳ ತಾಂತ್ರಿಕ ಉಪಕರಣಗಳು ಬಹಳ ಹಳೆಯದು. ಇವುಗಳನ್ನು ಬದಲಿಸುವ ಮೂಲಕ ನೂತನ ತಂತ್ರಜ್ಞಾನದ ಎಲ್‌ಇಡಿ ಪ್ರೊಜೆಕ್ಟರ್‌ಗಳನ್ನು ಅಳವಡಿಸುವುದು ಬಹಳ ಮುಖ್ಯ ಎಂದು ತಾರಾಲಯ ನಿರ್ದೇಶಕ ಬಿ.ಆರ್‌.ಗುರುಪ್ರಸಾದ್‌ ಅವರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. 

ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಬಿಬಿಎಂಪಿ ವತಿಯಿಂದ ತಾರಾಲಯದ ಆವರಣದಲ್ಲಿ ಆಧುನಿಕ ಸಭಾಂಗಣ, ಕ್ಲಾಸ್‌ರೂಂ ಸೇರಿ ಹಲವು ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಈ ಕಟ್ಟಡದ ಕಾಮಗಾರಿ ಸೆ.15 ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಆಗಸ್ಟ್‌ 22 ರಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಒಳಗೊಂಡ ಸಭೆ ಆಯೋಜಿಸುವಂತೆ ಅವರು ಸೂಚಿಸಿದರು.

ಟೆಲಿಸ್ಕೋಪ್‌ ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿ:

ಈ ಬಾರಿಯ ಆಯವ್ಯಯದಲ್ಲಿ 883 ವಸತಿ ಶಾಲೆಗಳಿಗೆ ಟೆಲಿಸ್ಕೋಪ್‌ ಒದಗಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಟೆಲಿಸ್ಕೋಪ್‌ಗಳನ್ನು ಖರೀದಿಸಲು ಈಗಾಗಲೇ ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಆದಷ್ಟು ಶೀಘ್ರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ತಾರಾಲಯದ ಸಹಯೋಗದಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವುದು. ಆಯಾ ವಲಯವಾರು ತರಬೇತಿ ಶಿಬಿರಗಳಲ್ಲಿ ಟೆಲಿಸ್ಕೋಪ್‌ ಬಳಕೆ, ಅದರ ಮೂಲಕ ಅಧ್ಯಯನ ಮತ್ತು ಬೋಧನೆ ಹಾಗೂ ಅದನ್ನು ಸುಸ್ಥಿತಿಯಲ್ಲಿ ಇಡುವ ಬಗ್ಗೆ ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್‌, ತಾರಾಲಯ ನಿರ್ದೇಶಕ ಬಿ.ಆರ್.ಗುರುಪ್ರಸಾದ್‌ ಮತ್ತು ಅಧಿಕಾರಿಗಳು ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT