ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನ: ಬೋಧನಾನುಭವ ಇಲ್ಲದವರಿಗೂ ಮಣೆ

ತಿಂಗಳಿಗೊಂದರಂತೆ ಮೂರು ಪರೀಕ್ಷೆ ನಡೆಸುವ, ಫಲಿತಾಂಶ ನೀಡುವ ಒತ್ತಡ
Published 11 ಮಾರ್ಚ್ 2024, 23:49 IST
Last Updated 11 ಮಾರ್ಚ್ 2024, 23:49 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ಪರೀಕ್ಷೆಗಳನ್ನು ನಡೆಸುವ ಒತ್ತಡಕ್ಕೆ ಸಿಲುಕಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕನಿಷ್ಠ ಬೋಧನಾ ಅನುಭವವಿಲ್ಲದವರನ್ನೂ ಮೌಲ್ಯಮಾಪನ ಕಾರ್ಯಕ್ಕೆ ಬಳಸಿಕೊಳ್ಳಲು ಮುಂದಾಗಿದೆ.

ದ್ವಿತೀಯ ಪದವಿಪೂರ್ವ ಶಿಕ್ಷಣದ ಮೊದಲ ಮುಖ್ಯ ಪರೀಕ್ಷೆ ಇದೇ ಮಾರ್ಚ್ 22ಕ್ಕೆ ಮುಗಿಯಲಿದೆ. 26ರಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ. ಏಪ್ರಿಲ್‌ ಹಾಗೂ ಮೇ ನಲ್ಲೇ ಉಳಿದ ಎರಡು ಪರೀಕ್ಷೆಗಳನ್ನು ನಡೆಸಬೇಕಿದೆ. ಹಾಗಾಗಿ, ಮೊದಲ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ, ಏ.10ರ ಒಳಗೆ ಫಲಿತಾಂಶ ನೀಡಲು ಮಂಡಳಿ ಸಿದ್ಧತೆ ಮಾಡಿಕೊಂಡಿದೆ.

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಸಿಇಟಿಗೆ ಮುನ್ನ ಎರಡು ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದರೆ, ವಿದ್ಯಾರ್ಥಿಗಳು ಯಾವುದರಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೋ ಆ ಅಂಕಪಟ್ಟಿ ಪಡೆದು ಮುಂದಿನ ಶಿಕ್ಷಣಕ್ಕೆ ಅಗತ್ಯವಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ವಿದ್ಯಾರ್ಥಿ ಸ್ನೇಹಿ ಲೆಕ್ಕಾಚಾರವಿದೆ. ಆದರೆ, ಕಡಿಮೆ ಸಮಯದಲ್ಲಿ ಫಲಿತಾಂಶ ಕೊಡುವ ಭರದಲ್ಲಿ, ನಿಯಮದಂತೆ ಮೂರು ವರ್ಷಗಳ ಬೋಧನಾ ಅನುಭವ ಇಲ್ಲದವರಿಗೂ ಮಣೆ ಹಾಕುತ್ತಿರುವುದಕ್ಕೆ ಉಪನ್ಯಾಸಕರ ವಲಯದಲ್ಲೇ ಆಕ್ಷೇಪ ವ್ಯಕ್ತವಾಗಿದೆ. 

‘ಮೌಲ್ಯಮಾಪನ ಕಾರ್ಯದಲ್ಲಿ ಲೋಪ ಎಸಗಿದ ಉಪನ್ಯಾಸಕರ ವಿರುದ್ಧ ಕ್ರಮಕ್ಕೆ ಅವಕಾಶವಿದೆ. ಮೂರು ವೇತನ ಬಡ್ತಿಗಳನ್ನೂ ತಡೆಯಬಹುದು. ಇದು ಸರ್ಕಾರಿ, ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ಅನ್ವಯವಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಬಹುತೇಕ ಉಪನ್ಯಾಸಕರು ಒಂದೇ ಕಡೆ ಹೆಚ್ಚು ಸಮಯ ಕಾರ್ಯನಿರ್ವಹಿಸುವುದಿಲ್ಲ. ಅಂಥವರ ಮೇಲೆ ಸರ್ಕಾರಕ್ಕೆ ಹಿಡಿತವೂ ಇರುವುದಿಲ್ಲ. ಹಿಂದೆ ಆಯಾ ಕಾಲೇಜುಗಳ ಪ್ರಾಂಶುಪಾಲರ ಲಾಗಿನ್‌ ಮೂಲಕ ಮೌಲ್ಯಮಾಪನಕ್ಕೆ ಹೆಸರು ಶಿಫಾರಸು ಮಾಡಲಾಗುತ್ತಿತ್ತು. ಲೋಪಕ್ಕೆ ಕಾಲೇಜಗಳನ್ನೂ ಹೊಣೆ ಮಾಡಲಾಗುತ್ತಿತ್ತು. ಈಗ ಮಂಡಳಿಯಲ್ಲೇ ನೇರ ನೊಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಇದು ಸರಿಯಾದ ಕ್ರಮವಲ್ಲ’ ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲ ರಾಜಣ್ಣ ರೆಡ್ಡಿ. 

55 ಸಾವಿರಕ್ಕೂ ಹೆಚ್ಚು ನೋಂದಣಿ 

ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ಬಯಸುವ ಉಪನ್ಯಾಸಕರಿಗೆ ಮೌಲ್ಯನಿರ್ಣಯ ಮಂಡಳಿ ಇದೇ ಮೊದಲ ಬಾರಿ ನೋಂದಣಿ ಪ್ರಕ್ರಿಯೆ ಆರಂಭಿಸಿತ್ತು. 55 ಸಾವಿರಕ್ಕೂ ಹೆಚ್ಚು ಉಪನ್ಯಾಸಕರು ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಅವರಲ್ಲಿ 20 ಸಾವಿರಕ್ಕೂ ಹೆಚ್ಚು ಉಪನ್ಯಾಸಕರ ಸೇವಾ ಅನುಭವ ಮೂರು ವರ್ಷಕ್ಕಿಂತ ಕಡಿಮೆ ಇದೆ. 

‘ಪಿಯು ವಾರ್ಷಿಕ ಪರೀಕ್ಷೆಯ ನಂತರ ಒಂದು ಪೂರಕ ಪರೀಕ್ಷೆ ನಡೆಸಲಾಗುತ್ತಿತ್ತು. ಕನಿಷ್ಠ 12ದಿನಗಳಿಂದ 25 ದಿನ ಮೌಲ್ಯಮಾಪನ ನಡೆಯುತ್ತಿತ್ತು. ಸರ್ಕಾರಿ ಕಾಲೇಜಿನ ಎಂಟು ಸಾವಿರ ಸೇರಿದಂತೆ ಸುಮಾರು 25 ಸಾವಿರ ಉಪನ್ಯಾಸಕರು ಭಾಗಿಯಾಗುತ್ತಿದ್ದೆವು. 2023ರ ವಾರ್ಷಿಕ ಪರೀಕ್ಷೆಯ ನಂತರ ಎರಡು ಪೂರಕ ಪರೀಕ್ಷೆ ನಡೆಸಲಾಗಿತ್ತು. ಆಗಲೂ ಬೋಧನಾ ಅನುಭವ ಇಲ್ಲದವರಿಗೆ ಅವಕಾಶ ಕೊಡಲಾಗಿತ್ತು. ಈ ಬಾರಿ ಮೂರೂ ಮುಖ್ಯ ಪರೀಕ್ಷೆಗಳೇ. ಹಾಗಾಗಿ, ಹೆಚ್ಚಿನ ವಿದ್ಯಾರ್ಥಿಗಳು ಮರು ಮೌಲ್ಯಮಾಪನ, ಮರು ಎಣಿಕೆಗೆ ಆಸಕ್ತಿ ತೋರದೇ ಇರಬಹುದು. ಅನುಭವ ಇಲ್ಲದವರು ಸರಿಯಾಗಿ ಮೌಲ್ಯಮಾಪನ ಮಾಡದೇ ಹೋದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪಿಯು ಕಾಲೇಜಿನ ಉಪನ್ಯಾಸರೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT