ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಯು: ಕನ್ನಡ ಮಾಧ್ಯಮದಲ್ಲಿ ‘ಪಿಸಿಎಂಬಿ’ ಪುಸ್ತಕ, 1,500 ಪ್ರತಿಗಳ ಮುದ್ರಣ

650 ಸರ್ಕಾರಿ ವಿಜ್ಞಾನ ಕಾಲೇಜುಗಳಿಗೆ ರವಾನೆ
Last Updated 8 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಕಲಬುರಗಿ: ವಿಜ್ಞಾನ ಸಂಯೋಜನೆ ಹೊಂದಿದ ರಾಜ್ಯದ 650 ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ವಿಜ್ಞಾನ ಕೋರ್ಸ್‌ನ ಕನ್ನಡ ಮಾಧ್ಯಮದ ಪಠ್ಯ ಪುಸ್ತಕಗಳ ಒಂದು ಸೆಟ್ ರವಾನಿಸಲಾಗಿದೆ.

ಇದೇ ಮೊದಲ ಬಾರಿಗೆ ಪ್ರಥಮ ಮತ್ತು ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ಜೀವವಿಜ್ಞಾನದ (ಪಿಸಿಎಂಬಿ) ಪುಸ್ತಕಗಳು ಕಾಲೇಜಿನ ಗ್ರಂಥಾಲಯ ಸೇರಿವೆ.

ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಅಭ್ಯಾಸ ಮಾಡಿ ವಿಜ್ಞಾನ ವಿಭಾಗ ಸೇರಿಕೊಂಡ ವಿದ್ಯಾರ್ಥಿಗಳಿಗೆ ಪಿಸಿಎಂಬಿ ವಿಷಯಗಳನ್ನು ಇಂಗ್ಲಿಷ್‌ನಲ್ಲಿ ಓದಲು ತೊಂದರೆ ಆಗುತ್ತಿತ್ತು. ಈ ಸಮಸ್ಯೆ ನಿವಾರಿಸಲು ‍ಪದವಿ ಪೂರ್ವ ಶಿಕ್ಷಣ ಇಲಾಖೆಯು 2015ರಿಂದ ಕನ್ನಡ ಮಾಧ್ಯಮಕ್ಕೆ ಪಠ್ಯಪುಸ್ತಕಗಳ ಅನುವಾದ ಕಾರ್ಯ ಕೈಗೊಂಡಿತ್ತು.

ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಮತ್ತು ಜೀವವಿಜ್ಞಾನ ವಿಷಯಗಳಿಗೆ ತಜ್ಞರ ಸಮಿತಿ ರಚಿಸಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಪಠ್ಯವನ್ನು ಸಂಪೂರ್ಣವಾಗಿ ಕನ್ನಡಕ್ಕೆ ಭಾಷಾಂತರಿಸಿದೆ.

‘ಅನುವಾದ ಕಾರ್ಯಕ್ಕೆ ನಾಲ್ಕು ವಿಷಯಗಳಿಗೆ ಆಸಕ್ತರು, ಭಾಷಾ ತಜ್ಞರನ್ನು ಒಳಗೊಂಡ ತಲಾ ಒಂದೊಂದು ಸಮಿತಿ ರಚಿಸಲಾಯಿತು. ದ್ವಿತೀಯ ವರ್ಷದ ಪುಸ್ತಕಗಳನ್ನು ಮುದ್ರಿಸಿ ಕಾಲೇಜಿಗೆ ಕಳುಹಿಸಿ, ಪ್ರಥಮ ವರ್ಷದ ಅನುವಾದ ಆರಂಭಿಸುವ ವೇಳೆಗೆ ಎನ್‌ಸಿಇಆರ್‌ಟಿ ಪಠ್ಯ ಬದಲಾವಣೆ ಮತ್ತು ಕೋವಿಡ್ ಕಾರಣದಿಂದ ಮುದ್ರಣಕ್ಕೆ ಹಿನ್ನಡೆಯಾಯಿತು’ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಸಂಯೋಜಕ ಅಧಿಕಾರಿ ವೆಂಕಟೇಶ ತಿಳಿಸಿದರು.

‘ಉಪನ್ಯಾಸಕರ ಅವಲೋಕನಕ್ಕೆ ಪ್ರತಿ ಕಾಲೇಜಿಗೆ ತಲಾ ಒಂದೊಂದು ಸೆಟ್ ಪುಸ್ತಕಗಳನ್ನು ಕಳುಹಿಸಲಾಗಿದೆ. ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳ ಗ್ರಂಥಾಲಯಗಳಿಗೆ ಹಾಗೂ ಆಸಕ್ತರಿಗೆ ಸರ್ಕಾರಿ ಮುದ್ರಣಾಲಯದಲ್ಲಿ ಪುಸ್ತಕಗಳ ಖರೀದಿಗೆ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಹಲವು ಅಡೆತಡೆಗಳ ನಡುವೆ ಪ್ರಥಮ ಮತ್ತು ದ್ವಿತೀಯ ವರ್ಷದ ಪುಸ್ತಕಗಳು ಸರ್ಕಾರಿ ಪಿಯು ಕಾಲೇಜುಗಳಿಗೆ ತಲುಪಿವೆ. ಮುದ್ರಿತವಾದ ಒಟ್ಟು 1,500 ಪ್ರತಿಗಳ ಪೈಕಿ 650 ಪ್ರತಿಗಳನ್ನು ಸರ್ಕಾರಿ ಕಾಲೇಜಿಗಳಿಗೆ ನೀಡಲಾಗಿದ್ದು, ಉಳಿದವುಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಪ್ರಥಮ ವರ್ಷದ ಒಂದು ಸೆಟ್‌ ದರ ₹1,370 ಹಾಗೂ ದ್ವಿತೀಯ ವರ್ಷದ ಸೆಟ್‌ಗೆ ₹1,690 ನಿಗದಿಪಡಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮುದ್ರಣವಾದರೆ ಈಗಿನ ಬೆಲೆಯೂ ಇಳಿಕೆಯಾಗಲಿದೆ’ ಎಂದು ವಿವರಿಸಿದರು.

‘ಕನ್ನಡ ಮಾಧ್ಯಮದ ಪುಸ್ತಕಗಳನ್ನು ಖರೀದಿಸಲು ಇಚ್ಛಿಸುವವರು ತಮ್ಮ ವ್ಯಾಪ್ತಿಯ ಪಿಯು ವಿಭಾಗೀಯ ಕಚೇರಿ ಅಧಿಕಾರಿಯ ಗಮನಕ್ಕೆ ತರಬಹುದು. ನಮ್ಮ ಬಳಿಯಿರುವ ‘ರೆಡಿ ಟು ಪ್ರಿಂಟ್‌’ ಸಿಡಿ ಕಾಪಿಯ ಮೂಲಕ ಸರ್ಕಾರಿ ಮುದ್ರಣಾಲಯದಲ್ಲಿ ಪುಸ್ತಕಗಳನ್ನು ಮುದ್ರಿಸಿ ಅವರಿಗೆ ರವಾನಿಸುತ್ತೇವೆ’ ಎಂದರು.

*
ರಾಜ್ಯದ ಎಲ್ಲಾ ಸರ್ಕಾರಿ ಪಿಯು ವಿಜ್ಞಾನ ಕಾಲೇಜುಗಳಿಗೆ ಕನ್ನಡ ಮಾಧ್ಯಮದ ಪಿಸಿಎಂಬಿ ಪುಸ್ತಕಗಳನ್ನು ಕಳುಹಿಸಲಾಗಿದೆ. ಮುಂದಿನ ವರ್ಷ ಪಠ್ಯಪುಸ್ತಕ ಕಳುಹಿಸುವ ಬಗ್ಗೆ ಈಗಲೇ ಹೇಳಲು ಆಗುವುದಿಲ್ಲ
–ರಾಮಚಂದ್ರನ್‌ ಆರ್, ನಿರ್ದೇಶಕ, ಪದವಿ ಪೂರ್ವಶಿಕ್ಷಣ ಇಲಾಖೆ

*
ಮಾತೃ ಭಾಷೆಯಲ್ಲೇ ವಿಜ್ಞಾನದ ವಿಷಯ ಬೋಧಿಸುವುದರಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ವಿಷಯಗಳನ್ನು ಬೇಗನೇ ಅರ್ಥೈಸಿಕೊಳ್ಳುವರು.
–ಮಲ್ಲೇಶ ನಾಟೇಕರ್, ಪ್ರಾಂಶುಪಾಲ, ಸರ್ಕಾರಿ ಪಿಯು ಕಾಲೇಜು, ಕಲಬುರಗಿ

*
ಎನ್‌ಸಿಇಆರ್‌ಟಿ ಪಠ್ಯ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಇರುವುದರಿಂದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿ ಬರುತ್ತಿದೆ. ಕನ್ನಡ ಮಾಧ್ಯಮದಲ್ಲಿ ಪಿಸಿಎಂಬಿ ಪಠ್ಯದ ಲಭ್ಯತೆಯಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಫಲಿತಾಂಶ ಇನ್ನಷ್ಟು ಸುಧಾರಿಸಲಿದೆ.
–ಸಂಗೀತಾ ಕಟ್ಟಿಮನಿ, ನಿವೃತ್ತ ಉಪನ್ಯಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT