ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಟ್ಟೇನಹಳ್ಳಿ ಕೆರೆ: ಕಾಮಗಾರಿಗೆ ಎನ್‌ಜಿಟಿ ತಡೆ

Published 19 ಜೂನ್ 2024, 15:20 IST
Last Updated 19 ಜೂನ್ 2024, 15:20 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷಿ ಸಂರಕ್ಷಣಾ ಪ್ರದೇಶವೆಂದು ಘೋಷಿಸಲಾಗಿರುವ ಯಲಹಂಕದ ಪುಟ್ಟೇನಹಳ್ಳಿ ಕೆರೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ನಿಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಬಿಬಿಎಂಪಿಗೆ ಸೂಚಿಸಿದೆ. ಸಂಬಂಧಿಸಿದ ಪ್ರಾಧಿಕಾರಿಗಳಿಂದ ಅಗತ್ಯ ಅನುಮತಿ ಪಡೆದ ಬಳಿಕವೇ ಕೆರೆಯಂಗಳದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. 

ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಯಲು ಬಿಬಿಎಂಪಿಯು ಕಾಮಗಾರಿ ಕೈಗೆತ್ತಿಕೊಂಡಿತ್ತು. ಈ ಕಾಮಗಾರಿ ಪೂರ್ಣವಾಗಿರಲಿಲ್ಲ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಲಕ್ಷಾಂತರ ಲೀಟರ್‌ ಕೊಳಚೆ ನೀರು ಜಲಕಾಯಕ್ಕೆ ಸೇರಿತ್ತು. ಆ ಬಳಿಕ ಪುಟ್ಟೇನಹಳ್ಳಿ ಕೆರೆ ಹಾಗೂ ಪಕ್ಷಿ ಸಂರಕ್ಷಣಾ ಟ್ರಸ್ಟ್‌ ಎನ್‌ಜಿಟಿಯ ದಕ್ಷಿಣ ವಲಯ ಪೀಠ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್‌ ಕುಮಾರ್ ತ್ಯಾಗಿ, ಸತ್ಯಗೋಪಾಲ್‌ ಕೊರ್ಲಪಾಟಿ ಹಾಗೂ ಎ.ಸೆಂಥಿಲ್ ವೇಲ್ ಅವರನ್ನು ಒಳಗೊಂಡ ಪೀಠವು ಬುಧವಾರ ಈ ನಿರ್ದೇಶನ ನೀಡಿದೆ. 

1972ರ ವನ್ಯಜೀವಿ (ಸಂರಕ್ಷಣೆ) ಕಾಯ್ದೆಯಡಿ ಬಿಬಿಎಂಪಿಯು ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಷ್ ಕೆ. ಮಾಳಖೇಡೆ ಅವರು ವಿಚಾರಣೆಯ ವೇಳೆ ನ್ಯಾಯಪೀಠಕ್ಕೆ ತಿಳಿಸಿದರು. ಕಾನೂನು ಪ್ರಕಾರ ಬಿಬಿಎಂಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಿಬಿಎಂಪಿಯ ಪ್ರಧಾನ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್, ‘ಮೇ 22ರಂದು ಸುರಿದ ಭಾರಿ ಮಳೆಯಿಂದಾಗಿ ಮಳೆ ನೀರಿನೊಂದಿಗೆ ಕೊಳಚೆ ನೀರು ಸೇರ್ಪಡೆಯಾಗಿ ಕೆರೆಗೆ ನುಗ್ಗಿದೆ. ಬಿಬಿಎಂಪಿ, ಜಲಮಂಡಳಿ ಹಾಗೂ ಇತರೆ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ಪರಿಶೀಲನೆ ನಡೆಸಿದೆ. ಚರಂಡಿ ನೀರನ್ನು ಕೆರೆಯ ಕೆಳಭಾಗಕ್ಕೆ ಸಾಗಿಸಲು ಪ್ರತ್ಯೇಕ ಕಾಲುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಕೆರೆಗೆ ಕೊಳಚೆ ನೀರು ಸೇರದಂತೆ ಕ್ರಮ ವಹಿಸಲಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT