ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ತಗ್ಗಿದ ಮಳೆ ಅಬ್ಬರ: ಉಕ್ಕಿ ಹರಿಯುತ್ತಿರುವ ಕೃಷ್ಣೆ

Last Updated 17 ಜುಲೈ 2018, 19:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಮಲೆನಾಡು, ಘಟ್ಟ ಪ್ರದೇಶ ಹಾಗೂ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಕೆಲವು ಕಡೆ ಬಿಡುವು ಕೊಟ್ಟು ಸುರಿಯುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಮಳೆಯ ಅಬ್ಬರ ತುಸು ತಗ್ಗಿದೆ. ಎರಡು ದಿನಗಳಿಂದ ಜಿಲ್ಲೆಯ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಭಾಗಮಂಡಲ, ನಾಪೋಕ್ಲು, ತಲಕಾವೇರಿ, ಅಯ್ಯಂಗೇರಿ, ಕೊಟ್ಟಮುಡಿ, ಮೂರ್ನಾಡು ವ್ಯಾಪ್ತಿಯಲ್ಲಿ ಮಾತ್ರ ಮಧ್ಯಾಹ್ನದವರೆಗೂ ರಭಸವಾಗಿ ಮಳೆ ಸುರಿಯಿತು. ಇದರಿಂದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ರಸ್ತೆ ಸಂಪರ್ಕ ಕಡಿತವಾಗಿತ್ತು. ಮಳೆ ಬಿಡುವು ಕೊಟ್ಟ ಬಳಿಕ ನೀರಿನ ಮಟ್ಟ ಇಳಿದು ವಾಹನ ಸಂಚಾರ ಆರಂಭಗೊಂಡಿತು. ಗಾಳಿಯ ಅಬ್ಬರ ಸಹ ಕಡಿಮೆಯಾಗಿದೆ.

ಸೋಮವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಉಕ್ಕಿ ಹರಿದವು. ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ರಸ್ತೆಯ ಬದಿಯ ಸಣ್ಣ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿತ್ತು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಮಂಗಳವಾರ ಬೆಳಿಗ್ಗೆ ಬಿರುಸಿನ ಮಳೆ ಆಯಿತು. ಹೀಗಾಗಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ, ಕೆಲವೇ ತಾಸುಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಯಿತು.

ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ಕಳೆದ ಒಂದು ವಾರದಿಂದ ಆರ್ಭಟಿಸಿದ್ದ ಮಳೆ ಮಂಗಳವಾರ ತಗ್ಗಿದೆ. ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನಲ್ಲೂಸಾಧಾರಣ ಮಳೆಯಾಗಿದೆ.ಶಿವಮೊಗ್ಗ ನಗರ, ಸಾಗರ, ಶಿಕಾರಿಪುರ, ಸೊರಬ, ಭದ್ರಾವತಿ ತಾಲ್ಲೂಕಿನಲ್ಲಿ ಬೆಳಿಗ್ಗೆ ಸ್ವಲ್ಪ ಸಮಯ ಮಳೆಯಾಗಿತ್ತು. ಮಧ್ಯಾಹ್ನದ ನಂತರ ಬಿಸಿಲು ಇತ್ತು.

ಬೆಳಗಾವಿ ಹಾಗೂ ಖಾನಾಪುರದಲ್ಲಿ ಮಂಗಳವಾರವೂ ಧಾರಾಕಾರವಾಗಿ ಮಳೆ ಸುರಿದಿದೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಚಿಕ್ಕೋಡಿ ಮೂಲಕ 1.44 ಲಕ್ಷ ಕ್ಯುಸೆಕ್‌ ನೀರು ರಾಜ್ಯಕ್ಕೆ ಹರಿದುಬರುತ್ತಿದೆ. ಚಿಕ್ಕೋಡಿ ತಾಲ್ಲೂಕಿನ ನದಿದಂಡೆಯ ಗ್ರಾಮಗಳಾದ ಕಲ್ಲೋಳ, ಯಡೂರು, ಮಾಂಜರಿ ಹಾಗೂ ಯಡೂರವಾಡಿಗೆ ಉಪವಿಭಾಗಾಧಿಕಾರಿ ಗೀತಾ ಕೌಲಗಿ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.

ಮುಳುಗಡೆಯಾಗಿರುವ, ತಾಲ್ಲೂಕಿನ ಆರು ಸೇತುವೆಗಳು ಅದೇ ಸ್ಥಿತಿಯಲ್ಲಿವೆ. ರಾಯಬಾಗ ತಾಲ್ಲೂಕಿನ ಕುಡಚಿ– ಉಗಾರ ಸೇತುವೆ ಮೇಲೆ ಒಂದು ಅಡಿಯಷ್ಟು ನೀರು ಹರಿಯುತ್ತಿದೆ. ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಅಥಣಿ ಅಥವಾ ಅಂಕಲಿ ಪರ್ಯಾಯ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿವೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ ತಾಲ್ಲೂಕುಗಳಲ್ಲಿ ದಿನವಿಡೀ ಮಳೆಯಾಗಿದೆ. ಶಿರಸಿ ತಾಲ್ಲೂಕಿನ ಅಜ್ಜರಣಿ ಸೇತುವೆ ನಾಲ್ಕನೇ ದಿನವೂ ಜಲಾವೃತ ಸ್ಥಿತಿಯಲ್ಲೇ ಇದ್ದು, ವರದಾ ನದಿಯಲ್ಲಿ ಪ್ರವಾಹ ಸ್ಥಿತಿಮುಂದುವರಿದಿದೆ.

ನದಿಯಲ್ಲಿ ಕೊಚ್ಚಿ ಹೋದ ಯುವಕ

ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸಮೀಪ ಮಂಗಳವಾರ ಹೇಮಾವತಿ ನದಿಯಲ್ಲಿ ಈಜಲು ತೆರಳಿದ್ದ ಯುವಕ ನಾಪತ್ತೆಯಾಗಿದ್ದಾರೆ.

ಹರಿಹರಪುರ ಗ್ರಾಮದ ದಲಿತ ಕಾಲೊನಿ ಯುವಕ ಶಿವಕುಮಾರ್ (32) ನಾಪತ್ತೆಯಾಗಿದ್ದಾರೆ. ಜತೆಯಲ್ಲಿ ಈಜಲು ತೆರಳಿದ್ದ ಮತ್ತೊಬ್ಬ ಯುವಕ ಈಜಿ ದಡ ಸೇರಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿಆದ ಮಳೆ ಪ್ರಮಾಣ (ಮಿ.ಮೀ. ನಲ್ಲಿ)

ಭಾಗಮಂಡಲ ;138

ಸಂಪಾಜೆ ;124

ಶಾಂತಳ್ಳಿ ;119

ಮಡಿಕೇರಿ ;94

ಶ್ರೀಮಂಗಲ ;75

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT