ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಕಾಲುವೆ: ಮೇಲ್ವಿಚಾರಣಾ ಸಮಿತಿ ರಚನೆಗೆ ನಿರ್ದೇಶನ

Published 8 ಡಿಸೆಂಬರ್ 2023, 16:07 IST
Last Updated 8 ಡಿಸೆಂಬರ್ 2023, 16:07 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಳೆ ನೀರು ಕಾಲುವೆಗಳ ಸಮರ್ಪಕ ನಿರ್ವಹಣೆ ಮತ್ತು ಇವುಗಳ ಮೇಲ್ವಿಚಾರಣೆಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ‘ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದೆ.

ಈ ಸಂಬಂಧ  ‘ಡಿ-ಮಾರ್ಟ್‌’ ನಡೆಸುತ್ತಿರುವ ‘ಅವೆನ್ಯೂ ಸೂಪರ್‌ ಮಾರ್ಟ್‌ ಲಿಮಿಟೆಡ್‌ ಕಂಪನಿ‘ ಸಲ್ಲಿಸಿರುವ ರಿಟ್‌ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ನಿರ್ದೇಶಿಸಿದೆ.

‘ಮಳೆ ನೀರು ಕಾಲುವೆ ನಿರ್ವಹಣೆಯ ಮೇಲ್ವಿಚಾರಣೆಗೆ ಸೂಕ್ತ ವ್ಯವಸ್ಥೆಯೊಂದರ ಅಗತ್ಯವಿದೆ. ಇದಕ್ಕಾಗಿ ಮೇಲ್ವಿಚಾರಣಾ ಸಮಿತಿ ರಚಿಸಬೇಕಿದೆ. ಈ ಸಮಿತಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಇರಬೇಕು‘ ಎಂದು ನ್ಯಾಯಪೀಠ ಸೂಚಿಸಿದ್ದು, ಈ ಕುರಿತಂತೆ ಅನುಪಾಲನಾ ವರದಿಯನ್ನು 2024ರ ಜನವರಿ 25ಕ್ಕೆ ಸಲ್ಲಿಸಿ‘ ಎಂದು ನಿರ್ದೇಶಿಸಿದೆ.

‘ಬಿಬಿಎಂಪಿ ನಡೆಸಿದ ಜಲ ವಿಜ್ಞಾನದ (ಹೈಡ್ರೋಲಾಜಿಕಲ್‌ ಸರ್ವೇ) ಸಮೀಕ್ಷೆಯ ಆಧಾರದ ಮೇಲೆ ನಗರದಲ್ಲಿ ಯಾವುದೇ ಹೊಸ ಮಳೆನೀರು ಕಾಲುವೆ ನಿರ್ಮಿಸುವ ಅಗತ್ಯತೆ ಎದುರಾದಾಗ ರಾಜ್ಯ ಸರ್ಕಾರದ ಮೂಲಕ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮತ್ತು ನಾಗರಿಕರ ಅನುಕೂಲಕ್ಕಾಗಿ ಮಳೆನೀರು ಕಾಲುವೆ ನಿರ್ಮಿಸುವ ಸಂದರ್ಭದಲ್ಲಿ ಈ ಸಮಿತಿಯ ಸಲಹೆ ಪಡೆಯಬಹುದಾಗಿದೆ‘ ಎಂದು ನ್ಯಾಯಪೀಠ ಹೇಳಿದೆ. 

ಆಕ್ಷೇಪಣೆ ಏನು?: ‘ರಾಜಕಾಲುವೆ ಮತ್ತು ಮಳೆನೀರು ಕಾಲುವೆಗಳ ಒತ್ತುವರಿ ಹಿನ್ನೆಲೆಯಲ್ಲಿ ನಮ್ಮ ಕಟ್ಟಡದ ನಕ್ಷೆ ಮಂಜೂರಾತಿ ರದ್ದುಪಡಿಸಲು ಬಿಬಿಎಂಪಿ ಷೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ. ಅಂತೆಯೇ, ಭೂ ಸ್ವಾಧೀನಾನುಭವ ಪತ್ರ ಕೋರಿ ನಾವು ಸಲ್ಲಿಸಿದ್ದ ಅರ್ಜಿಯನ್ನು ಬಿಬಿಎಂಪಿ ಪರಿಗಣಿಸಿಲ್ಲ‘ ಎಂಬುದು ಅರ್ಜಿದಾರರ ಆಕ್ಷೇಪ.

ಅರ್ಜಿದಾರರಿಗೆ ನೀಡಿದ್ದ ನೋಟಿಸ್‌ ರದ್ದು:

ಅರ್ಜಿದಾರರಿಗೆ ನೀಡಿರುವ ನೋಟಿಸ್‌ ರದ್ದುಪಡಿಸಿರುವ ನ್ಯಾಯಪೀಠ ‘ಅರ್ಜಿದಾರರಿಗೆ ನೀಡಲಾದ ನೋಟಿಸ್‌ಗಳು ಹದ್ದಿಗಿಡದ ಹಳ್ಳಕ್ಕೆ ಸೇರಿದ (ರಾಜಕಾಲುವೆ) ಯಾವುದೇ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂಬುದನ್ನು ಉಲ್ಲೇಖಿಸಿಲ್ಲ. ಕೇವಲ ರಾಜಕಾಲುವೆ ಜಾಗ ಅತಿಕ್ರಮಿಸಲಾಗಿದೆ ಎಂದಷ್ಟೇ ಉಲ್ಲೇಖಿಸಲಾಗಿದೆ. ಹಾಗಾಗಿ ಮಳೆನೀರು ಕಾಲುವೆಯ ಜಾಗವನ್ನು ಅತಿಕ್ರಮಣವನ್ನು ಅಗತ್ಯ ದಾಖಲೆಗಳೊಂದಿಗೆ ಸಾಬೀತುಪಡಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ‘ ಎಂದು ಅಭಿಪ್ರಾಯಪಟ್ಟಿದೆ. ‘ಈ ಪ್ರಕರಣದಲ್ಲಿ ಬಿಬಿಎಂಪಿ ಅರ್ಜಿದಾರರ ಮೇಲೆ ಸಳ್ಳು ಆರೋಪ ಹೊರಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತದೆ. ಹೀಗಾಗಿ ಸ್ವಾಧೀನಾನುಭವ ಪತ್ರ ಮಂಜೂರಾತಿ ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಬೇಕು. ಒಂದೊಮ್ಮೆ ಕಟ್ಟಡ ನಿರ್ಮಾಣದಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿರುವುದು ಕಂಡು ಬಂದಲ್ಲಿ ಸ್ವಾಧೀನಾನುಭವ ಪತ್ರ ತಿರಸ್ಕರಿಸುವ ಸ್ವಾತಂತ್ರ್ಯವನ್ನು ಬಿಬಿಎಂಪಿ ಹೊಂದಿರುತ್ತದೆ‘ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಬಿಬಿಎಂಪಿ ವಾದ ಏನಿತ್ತು?: ‘ಅರ್ಜಿದಾರರು ಹದ್ದಿನ ಹಳ್ಳದ 9 ಗುಂಟೆ ಜಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದಾರೆ. ಇದರಿಂದ ಮಳೆ ನೀರು ಹರಿಯುವಿಕೆಗೆ ಅಡಚಣೆಯಾಗಿದೆ‘ ಎಂದು ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿದ್ದರು. ಇದನ್ನು ಅಲ್ಲಗಳೆದಿದ್ದ ಅರ್ಜಿದಾರರ ಪರ ವಕೀಲರು ‘ಪರಿಷ್ಕೃತ ಮಾಸ್ಟರ್‌ ಪ್ಲಾನ್‌ನಲ್ಲಿ  ವಿವಾದಿತ ಜಾಗವನ್ನು ರಾಜಕಾಲುವೆ ಎಂಬುದಾಗಿ ತೋರಿಸಿಲ್ಲ. ಹೀಗಾಗಿ ನಮ್ಮ ಕಕ್ಷಿದಾರರ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ‘ ಎಂದು ಪ್ರತಿಪಾದಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ‘ನೀರಿನ ಹರಿವಿಗೆ ಅಡಚಣೆಗೆ ನಿಜವಾದ ಕಾರಣ ಏನೆಂಬುದನ್ನು ತಿಳಿಯಲು ಬಿಬಿಎಂಪಿ ಪಯತ್ನಿಸಬೇಕು. ಇದಕ್ಕಾಗಿಯೇ ಕಾಲುವೆಗಳ ಸಾಮರ್ಥ್ಯ ಕಾಲುವೆಯಲ್ಲಿನ ಹೂಳು ರಾಜಕಾಲುವೆಗೆ ಸಂಬಂಧಿಸಿದ ಹೈಡ್ರೋಲಾಜಿಕ್‌ ಸಮೀಕ್ಷೆ ಸೇರಿದಂತೆ ಇನ್ನಿತರ ಕಾರಣಗಳನ್ನು ಶೋಧಿಸಬೇಕು. ವಿವಾದಿತ ಜಾಗದ ಸುತ್ತಮುತ್ತಲಿನ ಎಲ್ಲಾ ಮಳೆನೀರು ಕಾಲುವೆಗಳ ಸಮೀಕ್ಷೆ ನಡೆಸಬೇಕು‘ ಎಂದು ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT