ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಬೆಳಿಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

Last Updated 16 ಜುಲೈ 2019, 10:37 IST
ಅಕ್ಷರ ಗಾತ್ರ

ರಾಜೀನಾಮೆ ಅಂಗೀಕರಿಸಲು ಕರ್ನಾಟಕ ವಿಧಾನಸಭೆಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕೆಂದುಕೋರಿ ಕಾಂಗ್ರೆಸ್‌–ಜೆಡಿಎಸ್‌ನ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಆ ಅರ್ಜಿಯ ಸಾಂವಿಧಾನಿಕ ಅಂಶಗಳ ಕುರಿತು ಇಂದು ಚರ್ಚೆ ನಡೆಯಲಿದೆ. ನ್ಯಾಯಾಲಯ ಇಂದು ನೀಡುವ ಯಾವುದೇ ಆದೇಶವೂ ಐತಿಹಾಸಿಕ ಎನಿಸಿಕೊಳ್ಳುತ್ತದೆ. ಹಾಗೇ ಕರ್ನಾಟಕದ ಮೈತ್ರಿ ಸರ್ಕಾರದ ಅಳಿವು ಉಳಿವನ್ನೂ ನಿರ್ಧಿರಿಸಲಿದೆ. ನ್ಯಾಯಾಲಯದಲ್ಲಿನ ಪ್ರಕ್ರಿಯೆಗಳು, ರಾಜಕೀಯ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿ ಸಿಗಲಿದೆ.‌

11.05: ಅತೃಪ್ತ ಶಾಸಕರ ಪರ ಮುಕುಲ್ ರೋಹಟಗಿ ವಾದ ಮಂಡನೆ

–ಸಂವಿಧಾನದ ವಿಧಿ 190ರ ಪ್ರಕಾರ ಮತ್ತು ಪರಿಚ್ಛೇದ 10ರ ಗಳಲ್ಲಿ ಸ್ಪೀಕರ್‌ ಅವರ ಪಾತ್ರದ ಬಗ್ಗೆ ವ್ಯತ್ಯಾಸಗಳಿವೆ

–10 ಮಂದಿ ಶಾಸಕರು ಜುಲೈ 10 ರಂದು ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಇಬ್ಬರ ವಿರುದ್ಧ ಅನರ್ಹತೆ ಅರ್ಜಿ ಇತ್ಯರ್ಥ ಬಾಕಿ ಇದೆ. ಮುಕುಲ್‌ ರೋಹಟಗಿ.

–ಅನರ್ಹತೆಯ ಅರ್ಜಿನ್ನು ತಳ್ಳಿ ಹಾಕಿ ಎಂದು ನಾವು ಕೇಳುತ್ತಿಲ್ಲ. ಅದರ ವಿಚಾರಣೆ ನಡೆಯಲಿ. ಆದರೆ, ನಮಗೆ ಶಾಸಕರಾಗಿ ಉಳಿಯುವ ಇಚ್ಛ ಇಲ್ಲ. ಪಕ್ಷಾಂತರ ಮಾಡಲೂ ಇಷ್ಟವಿಲ್ಲ. ನಾವು ಜನರ ಬಳಿಗೇ ಹೋಗುತ್ತೇವೆ. ಅವರ ತೀರ್ಮಾನದಂತೆ ನಡೆಯುತ್ತೇವೆ. ಶಾಸಕರು ಅನರ್ಹ ಮಾಡುವಂಥ ತಪ್ಪು ಏನು ಮಾಡಿದ್ದಾರೆ? ಪಕ್ಷಾಂತರ ನಮ್ಮ ಉದ್ದೇಶ ಅಲ್ಲ? ಸರ್ಕಾರದಿಂದ ಹೊರಬರುವುದೇ ನಮ್ಮ ಉದ್ದೇಶ

–ನನಗೆ ಅನಿಸಿದ್ದನ್ನು ಮಾಡಲು ನನಗೆ ಹಕ್ಕಿದೆ. ನನ್ನ ಹಕ್ಕನ್ನು ಸ್ಪೀಕರ್‌ ಉಲ್ಲಂಘಿಸುತ್ತಿದ್ದಾರೆ ಎಂದು ರೋಹಟಗಿ ಶಾಸಕರ ಪರ ವಾದ ಮಂಡಿಸಿದ್ದಾರೆ.

–ಸದನಕ್ಕೆ ಬರಲು ರಾಜೀನಾಮೆ ನೀಡಿರುವವರಿಗೆ ಇಷ್ಟವಿಲ್ಲ ಸಂವಿಧಾನದ 190ನೇ ಪರಿಚ್ಛೇದದ ಪ್ರಕಾರ ಸ್ಪೀಕರ್ ಕಾರ್ಯವ್ಯಾಪ್ತಿ ವಿವರಿಸುತ್ತಿರುವ ಮುಕುಲ್ ರೋಹಟಗಿ. ರಾಜೀನಾಮೆ ನೀಡಿರುವವರಿಗೆ ವಿಪ್ ಜಾರಿ ಮಾಡಲು ಕಾಂಗ್ರೆಸ್–ಜೆಡಿಎಸ್ ನಾಯಕರು ಮುಂದಾಗುತ್ತಿದ್ದಾರೆ. ವಿಶ್ವಾಸ ಮತ ಯಾಚನೆ ಇದೆ. ಸದನಕ್ಕೆ ಬರಲು ಶಾಸಕರಿಗೆ ಇಷ್ಟವಿಲ್ಲ. ಸದ್ಯದ ಲೆಕ್ಕದ ಪ್ರಕಾರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ರಾಜೀನಾಮೆ ಪ್ರಕರಣವನ್ನು ಇಂದೇ ಇತ್ಯರ್ಥ ಮಾಡುವುದು ಒಳಿತು ಎಂದು ಮುಕುಲ್ ರೋಹಟಗಿ ಅತೃಪ್ತರ ಪರ ವಾದ ಮಂಡಿಸಿದರು.

ಮುಖ್ಯನ್ಯಾಯಮೂರ್ತಿ ಮಧ್ಯಪ್ರವೇಶ

–ಯಾವ ನೆಲೆಗಟ್ಟಿನಲ್ಲಿ ಅನರ್ಹತೆ ವಿಚಾರಣೆ ನಡೆಯುತ್ತಿದೆ?

ಮುಕುಲ್‌ ರೋಹಟಗಿ

–ಆ ಪಕ್ಷದ ಅನುಸಾರವಾಗಿ ಶಾಸಕರು ನಡೆದುಕೊಳ್ಳದೇ ಇರುವ ಕಾರಣಕ್ಕೆ ಅನರ್ಹತೆ ಪ್ರಕ್ರಿಯೆ ನಡೆಯುತ್ತಿದೆ

–ಅನರ್ಹತೆಗೆ ಸೂಕ್ತ ಕಾರಣಗಳೇ ಇಲ್ಲ. ಅದಕ್ಕಾಗಿಯೇ ಪ್ರಕರಣದ ಇತ್ಯರ್ಥ ವಿಳಂಬವಾಗುತ್ತಿದೆ. ಅನರ್ಹತೆಯ ಅರ್ಜಿ ಇದ್ದಾಗ್ಯೂ ರಾಜೀನಾಮೆಯನ್ನು ತಳ್ಳಿಹಾಕುವಂತಿಲ್ಲ. ಅಂಗೀಕಾರವಾಗಲೇ ಬೇಕು.

–ರಾಜೀನಾಮೆಯನ್ನು ಅಂಗೀಕಾರವಾಗದಂತೆ ನೋಡಿಕೊಳ್ಳುವುದಷ್ಟೇ ಈ ಅನರ್ಹತೆಯ ಪ್ರಕ್ರಿಯೆ ಮೂಲ ಉದ್ದೇಶ.

ಸಿಜೆಐ ಗೊಗೊಯ್, ನ್ಯಾಯಮೂರ್ತಿ ಅನಿರುದ್ಧ ಬೋಸ್ ನಡುವೆ ಚರ್ಚೆ

ರಾಜೀನಾಮೆ ಮತ್ತು ಅನರ್ಹತೆ ಪರಿಣಾಮಗಳ ಬಗ್ಗೆ ಸಿಜೆಐ ಪ್ರಶ್ನೆ

–ಸ್ಪೀಕರ್ ಮೇಲೆ ಸಾಂವಿಧಾನಿಕ ಕಟ್ಟುಪಾಡುಗಳಿವೆಯೇ? ಇದು ನನ್ನ ಅಭಿಪ್ರಾಯ. ಇದು ನ್ಯಾಯಪೀಠದ ತೀರ್ಪು ಅಲ್ಲ

ರೋಹಟಗಿ ವಿವರಣೆ

–ರಾಜೀನಾಮೆ ಅಂಗೀಕಾರವಾದರೆ ಬೇರೆ ಪಕ್ಷ ಸೇರಿ, ಶಾಸಕರು ಉಪ ಚುನಾವಣೆಗೆ ನಿಲ್ಲಬಹುದು. ಮಂತ್ರಿಯಾಗಬಹುದು.

–ಸಂವಿಧಾನದ ವಿಧಿ 190ರ ಪ್ರಕಾರ ಯಾವುದೇ ಶಾಸಕ ಸ್ವತಃ ಕೈಬರಹದಲ್ಲಿ ರಾಜೀನಾಮೆ ನೀಡಿದಾಗ ಅದನ್ನು ಅಂಗೀಕರಿಸುವಲ್ಲಿ ವಿಳಂಬ ಮಾಡುವಂತೆಯೇ ಇಲ್ಲ. ಶೀಘ್ರವೇ ಅಂಗೀಕರಿಸಬೇಕು.

–ಈ ಶಾಸಕರು ತಾವು ರಾಜೀನಾಮೆ ನೀಡಿರುವುದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದಾರೆ. ಮಾಧ್ಯಮಗಳ ಎದುರು ಗೋಗೊರೆದಿದ್ದಾರೆ. ಆದರೂ ಇತ್ಯರ್ಥ ವಿಳಂಬವಾಗುತ್ತಿದೆ. ಇದು ಹಾಸ್ಯಾಸ್ಪದ.

ಮುಖ್ಯನ್ಯಾಯಮೂರ್ತಿ ಪ್ರಶ್ನೆ

–ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ನಾವು (ಕೋರ್ಟ್) ಹಸ್ತಕ್ಷೇಪ ಮಾಡಲು ಬರುವುದಿಲ್ಲ.

–ರಾಜೀನಾಮೆ ಅಥವಾ ಅನರ್ಹತೆಗೆ ಸೂಚನೆ ನೀಡಲು ಸಾಧ್ಯವಿಲ್ಲ

ರೋಹಟಗಿ ವಾದ

–ಕೈಬರಹದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ತ್ವರಿತ ನಿರ್ಧಾರ ತೆಗೆದುಕೊಳ್ಳಬಹುದಿತ್ತು.

ಮುಖ್ಯನ್ಯಾಯಮೂರ್ತಿ ಪ್ರಶ್ನೆ

–ರಾಜೀನಾಮೆಗೂ ಮುನ್ನ ಅನರ್ಹತೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಅವಕಾಶವಿದೆಯೇ?

ಮುಕುಲ್‌ ರೋಹಟಗಿ ವಾದ

–ಒಬ್ಬ ವ್ಯಕ್ತಿಗೆ ರಾಜೀನಾಮೆ ನೀಡಲು ಲಕ್ಷಾಂತರ ಕಾರಣಗಳಿರುತ್ತವೆ (ಮಿಲಿಯನ್). ರಾಜೀನಾಮೆ ನೀಡಿ ಬೇರೆ ವೃತ್ತಿಗೆ ಹೋಗಬಹುದು. ರಾಜಕೀಯ ನಿವೃತ್ತಿ ತೆಗೆದುಕೊಳ್ಳಬಹುದು.

–ಮಧ್ಯಪ್ರದೇಶ ಮತ್ತು ಗೋವಾಗಳಲ್ಲಿ ರಾಜೀನಾಮೆ ಶೀಘ್ರ ಅಂಗೀಕಾರವಾಗಿದೆ. ಪ್ರತಿವಾದಿಗಳ ವಾದವು ಸಂಪೂರ್ಣವಾಗಿ ರಾಜೀನಾಮೆಯ ಉದ್ದೇಶವನ್ನು ಅವಲಂಬಿಸಿದೆ. ಅದು ಈ ಪ್ರಕರಣದಲ್ಲಿ ಅಪ್ರಸ್ತುತ.

–ಅವರು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿಲ್ಲ ಎನ್ನಲು ಸ್ಪೀಕರ್ ಬಳಿ ಏನು ಸಾಕ್ಷಿಯಿದೆ? –ಮುಕುಲ್ ರೋಹಟಗಿ ಪ್ರಶ್ನೆ.
ಕೇರಳ ಶಾಸಕರ ಪ್ರಕರಣದಲ್ಲಿ ಅನರ್ಹತೆ ವಿಚಾರ ತೀರ್ಮಾನವಾಗುವ ಮೊದಲೇ ರಾಜೀನಾಮೆ ಅಂಗೀಕಾರ ಮಾಡಲಾಗಿತ್ತು. ಆ ಪ್ರಕರಣಕ್ಕೂ ಕರ್ನಾಟಕ ಪ್ರಕರಣಕ್ಕೂ ಸಾಮ್ಯತೆ ಇದೆ –ಮುಕುಲ್ ರೋಹಟಗಿ.

ಮುಖ್ಯನ್ಯಾಯಮೂರ್ತಿ ಪ್ರಶ್ನೆ

–ನಿಮ್ಮ ಬಳಿ ಪ್ರಬಲ ಸಾಕ್ಷಿಗಳಿವೆಯೇ?

ಮುಕುಲ್‌ ರೋಹಟಗಿ ವಾದ ಮಂಡನೆ

–ರಾಜೀನಾಮೆಯನ್ನು ಕಾಲಮಿತಿಯಲ್ಲಿ ಇತ್ಯರ್ಥ ಮಾಡಲು ಸೂಚನೆ ನೀಡಲು ಕೋರ್ಟ್‌ಗೆ ಯಾವುದೇ ಅಧಿಕಾರ ವ್ಯಾಪ್ತಿಯ ಸಂಕೋಲೆಗಳಿಲ್ಲ.

ಮುಖ್ಯನ್ಯಾಯಮೂರ್ತಿ ಪ್ರಶ್ನೆ

–ಹಾಗಿದ್ದರೆ ಯಾವ ರೀತಿಯ ಅದೇಶವನ್ನು ನೀವು ಬಯಸುತ್ತಿದ್ದೀರಿ?

ಮುಕುಲ್‌ ರೋಹಟಗಿ ವಾದ ಮಂಡನೆ

–ನೀವು ಮೊದಲ ದಿನವೇ ಆದೇಶ ನೀಡಿದಂತೆ, ಕಾಲಮಿತಿಯಲ್ಲಿ ರಾಜೀನಾಮೆ ಇತ್ಯರ್ಥ ಮಾಡಲು ಸ್ಪೀಕರ್‌ಗೆ ಸೂಚಸಬೇಕು

–ಇಂದು ಸಂಜೆಯೊಳಗೆ ರಾಜೀನಾಮೆ ಅಂಗೀಕರಿಸಲು ಸೂಚಿಸಬೇಕು

–2018ರ ಮೇನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ 24 ಗಂಟೆಗಳಲ್ಲಿ ವಿಶ್ವಾಸ ಮತ ಯಾಚನೆ ಮಾಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಅದರಂತೇ, ರಾಜೀನಾಮೆ ಇತ್ಯರ್ಥಕ್ಕೆ ಕೋರ್ಟ್‌ ಕಾಲಮಿತಿ ವಿಧಿಸಬೇಕು.

12.01: ಸ್ಪೀಕರ್‌ ಪರ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡನೆ

–ಶಾಸಕರ ಪರ ವಕೀಲರ ಮಾಹಿತಿಯಲ್ಲಿ ತಪ್ಪಿದೆ. ಶಾಸಕರ ವಿರುದ್ಧದ ಅನರ್ಹತೆ ದೂರು ರಾಜೀನಾಮೆಗೂ ಮೊದಲೇ ಸಲ್ಲಿಕೆಯಾಗಿತ್ತು.

–ಸ್ಪೀಕರ್ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ಆರಂಭಿಸಿದ್ದಾರೆ. ಕೆಲವರನ್ನು ವಿಚಾರಣೆಗೂ ಕರೆದಿದ್ದಾರೆ

–ರಾಜೀನಾಮೆ ಅಂಗೀಕಾರಕ್ಕೂ ಅನರ್ಹತೆಗೂ ಸಂಬಂಧ ಇಲ್ಲ ಎನ್ನುವುದು ತಪ್ಪು. ಎರಡಕ್ಕೂ ಪರಸ್ಪರ ಸಂಬಂಧವಿದೆ ಎಂದು ಹಳೇ ತೀರ್ಪುಗಳ ವಿವರಣೆ ಕೊಡಲು ಆರಂಭಿಸಿದ್ದಾರೆ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ

–ವಿಪ್‌ ಉಲ್ಲಂಘನೆಯ ಪರಿಣಾಮವೇ ಅನರ್ಹತೆ ಪ್ರಕ್ರಿಯೆ

–ರಾಜೀನಾಮೆ ಮತ್ತು ಅನರ್ಹತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ತೀರ್ಮಾನ ಸ್ಪೀಕರ್‌ಗೆ ಇದೆ.

–ವಿಪ್ ಉಲ್ಲಂಘನೆ ಅನರ್ಹತೆ ದಾರಿ. ಪಕ್ಷವಿರೋಧ ಚಟುವಟಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅದರ ಆಧಾರದ ಮೇಲೆ ಅನರ್ಹತೆಗೆ ಅವಕಾಶ ಕೊಡಬೇಕು.

–ತ್ವರಿತವಾಗಿ ರಾಜೀನಾಮೆ ಅಂಗೀಕಾರ ಸರಿಯಾದ ಕ್ರಮ ಅಲ್ಲ. ವಿಚಾರಣೆ ಪ್ರಕ್ರಿಯೆಗಳನ್ನು ಮಧ್ಯರಾತ್ರಿಯ ಒಳಗೆ ಮುಗಿಸಲು ಧ್ಯವಿಲ್ಲ.

–ಸದ್ಯ ಇರುವ ಕಾನೂನು ಕಟ್ಟಳೆಗಳ ಆಧಾರದಲ್ಲೇ ಸ್ಪೀಕರ್‌ ಕೂಡ ನ್ಯಾಯಪ್ರಕ್ರಿಯೆ ನಡೆಸಲಿದ್ದಾರೆ.

–ಸಂವಿಧಾನದ ವಿಧಿ 190ರ ಪ್ರಕಾರ ರಾಜೀನಾಮೆ ಇತ್ಯರ್ಥದ ಮೊದಲ ಹಂತವಾಗಿ ಶಾಸಕ ಖುದ್ದಾಗಿ ಸ್ಪೀಕರ್‌ ಎದುರುಹಾಜರಾಗಬೇಕು. ಈ ಪ್ರಕರಣದಲ್ಲಿ ಜುಲೈ 11ರಂದು ನಡೆದಿದೆ.

–15 ಶಾಸಕರ ಪೈಕಿ 11 ಶಾಸಕರು ಜುಲೈ 11ರಂದು ಖುದ್ದು ಸ್ಪೀಕರ್‌ ಎದುರು ಹಾಜರಾಗಿ ರಾಜೀನಾಮೆ ನೀಡಿದ್ದಾರೆ. ಆದರೆ, ನಾಲ್ವರು ಶಾಸಕರು ಈ ವರೆಗೆ ಹಾಜರಾಗಿಲ್ಲ.

–ಒಂದು ವೇಳೆ ನಾಳೆ ವಿಶ್ವಾಸಮತವಿದೆ ಎಂದಿಟ್ಟುಕೊಳ್ಳಿ. ಇಂದು ಶಾಸಕ ರಾಜೀನಾಮೆ ನೀಡಿದರೆ ಅದೂ ಕೂಡ ಅನರ್ಹತೆಗೆ ದಾರಿ ಮಾಡಿಕೊಡಲಿದೆ. ಯಾಕೆಂದರೆ ಅದು ಪಕ್ಷ ವಿರೋಧಿ ಚಟುವಟಿಕೆಯಾಗಲಿದೆ.

–ಹೀಗಾಗಿ ಈ ಪ್ರಕರಣ ಸ್ಪಷ್ಟವಾಗಿ ಅನರ್ಹತೆಯದ್ದಾಗಿದೆ.

–ನಿಮ್ಮ ಆದೇಶವು ಪ್ರಕರಣಕ್ಕೆ ವಿರುದ್ಧವಾಗಬಹುದು. ಅಲ್ಲದೆ, ಸ್ಪೀಕರ್‌ ವಿಚಾರದಲ್ಲಿ ನೀಡುವ ಆದೇಶ ನ್ಯಾಯಿಕ ಪರಾಮರ್ಶೆಗೆ ಒಳಪಡಬಹುದು.

ಮುಖ್ಯನ್ಯಾಯಮೂರ್ತಿ ಪ್ರಶ್ನೆ

–ಸ್ಪೀಕರ್‌ ಲಭ್ಯವಿಲ್ಲದ ಕಾರಣ ಶಾಸಕರು ಕೋರ್ಟ್‌ಗೆ ಬಂದಿದ್ದಾರೆ.

ಅಭಿಷೇಕ್‌ ಮನು ಸಿಂಘ್ವಿ ವಾದ

–ಈ ಮಾಹಿತಿ ತಪ್ಪು. ಶಾಸಕರು ಸ್ಪೀಕರ್‌ ಅವರ ಸಮಯವನ್ನೇ ಕೇಳಿರಲಿಲ್ಲ. ಈ ಬಗ್ಗೆ ಅಫಿಡವಿಟ್‌ ಸಲ್ಲಿಸಲಾಗಿದೆ.

–ಅವರನ್ನು ಅನರ್ಹಗೊಳಿಸಬೇಕು ಎಂದು ನಾನು ಬಲವಾಗಿ ವಾದಿಸುತ್ತೇನೆ. ಅನರ್ಹತೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ ಅವರು ರಾಜೀನಾಮೆ ನೀಡಲು ಹೇಗೆ ಸಾಧ್ಯ.

ನ್ಯಾಯಮೂರ್ತಿ ಅನಿರುದ್ಧ ಬೋಸ್‌ ಪ್ರಶ್ನೆ

– 10 ಶೆಡ್ಯುಲ್‌ ಮತ್ತು ಸಂವಿಧಾನದ 190 ವಿಧಿಯ ಪರಸ್ಪರ ಅವಲಂಭಿತವೇ?

ಅಭಿಷೇಕ್‌ ಮನು ಸಿಂಘ್ವಿ ವಾದ

–ಹೌದು

–ಅನರ್ಹತೆಯಿಂದ ತಪ್ಪಿಸಿಕೊಳ್ಳಲು ರಾಜೀನಾಮೆ ಮಾರ್ಗವಲ್ಲ.

–ನೀವು ನೀಡಬಹುದಾದ ಆದೇಶವು ಅನರ್ಹತೆ ಪ್ರಕರಣಕ್ಕೆ ವಿರುದ್ಧವಾಗಬಹುದು. ಅಲ್ಲದೆ, ಸ್ಪೀಕರ್‌ ವಿಚಾರದಲ್ಲಿ ನೀಡುವ ಆದೇಶ ನ್ಯಾಯಿಕ ಪರಾಮರ್ಶೆಗೆ ಒಳಪಡಬಹುದು.

ಮುಖ್ಯನ್ಯಾಯಮೂರ್ತಿ ಪ್ರಶ್ನೆ

–ನೀವೇಕೆ ರಾಜೀನಾಮೆಯನ್ನು ಇತ್ಯರ್ಥ ಮಾಡಬಾರದು?

ಅಭಿಷೇಕ್‌ ಮನು ಸಿಂಘ್ವಿ ವಾದ

–ರಾಜೀನಾಮೆ ಮತ್ತು ಅನರ್ಹತೆಯನ್ನು ನಾವು ಒಂದೇ ದೃಷ್ಟಿಯಲ್ಲಿ ನೋಡುತ್ತಿದ್ದೇವೆ. ನ್ಯಾಯಬದ್ಧವಾದ್ದನ್ನೇ ಮಾಡುತ್ತೇವೆ.
ಮುಖ್ಯನ್ಯಾಯಮೂರ್ತಿ ಅಭಿಪ್ರಾಯ

–ಹಾಗಿದ್ದರೆ ರಾಜೀನಾಮೆಯನ್ನು ಇತ್ಯರ್ಥ ಮಾಡಿ?

ಅಭಿಷೇಕ್‌ ಮನು ಸಿಂಘ್ವಿ ವಾದ

–ಕೋರ್ಟ್‌ ನೀಡುವ ಈರೀತಿಯ ಆದೇಶವು ಸ್ಪೀಕರ್‌ ಕಾರ್ಯವ್ಯಾಪ್ತಿಯಲ್ಲಿ ಮಾಡಿದ ಹಸ್ತಕ್ಷೇಪವಾಗಲಿದೆ.

ಮುಖ್ಯನಾಯಮೂರ್ತಿ ಮಧ್ಯಪ್ರವೇಶ

–ಕಳೆದ ವರ್ಷ 24 ಗಂಟೆಗಳಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸ ಮತ ನಡೆಯಲಿ ಎಂದು ಕೋರ್ಟ್‌ ಆದೇಶ ನೀಡಿತ್ತು. ಅದನ್ನು ನೀವು ಒಪ್ಪಿದ್ದಿರಿ. ಏಕೆಂದರೆ ಅದು ನಿಮಗೆ ಪೂರಕವಾಗಿತ್ತು.
ಅಭಿಷೇಕ್‌ ಮನು ಸಿಂಘ್ವಿ ವಾದ

–ಅದು ಸರ್ಕಾರ ರಚನೆಯ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿತ್ತು.

–ಪ್ರತಿವಾದಿಗಳು ನಿಮ್ಮ ಆದೇಶವನ್ನು ಎಲ್ಲ ಕಡೆಗೂ ಬಯಸುತ್ತಿದ್ದಾರೆ. ನಿಮ್ಮ ಆದೇಶದ ಪ್ರಕಾರವೇ ಸ್ಪೀಕರ್‌ ಕೆಲಸ ಮಾಡಬೇಕು ಎಂದು ಅವರು ನಿರೀಕ್ಷಿಸುತ್ತಿದ್ದಾರೆ.
–2018ರ ಕೋರ್ಟ್‌ ಆದೇಶವು ಸರ್ಕಾರ ರಚನೆಗೆ ಸಂಬಂಧಿಸಿದ್ದಾಗಿತ್ತು. ಆಗ ಸ್ಪೀಕರ್‌ಗೆ ಯಾವುದೇ ನಿರ್ದೇಶನವಿರಲಿಲ್ಲ. ವಿಶ್ವಾಸ ಮತ ಸಾಬೀತು ಮಾಡಲು ರಾಜ್ಯಪಾಲರು ಬಿಜೆಪಿಗೆ 15 ದಿನಗಳ ಅವಕಾಶ ನೀಡಿತ್ತು. ಅದು ಸರಿಯಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತ್ತು.

–ಈ ಪ್ರಕರಣದಲ್ಲಿ ರಾಜೀನಾಮೆ ಮತ್ತು ಅನರ್ಹತೆ ನಡುವೆ ನೇರ ಸಂಬಂಧವಿದೆ.

–ಶಾಸಕರ ರಾಜೀನಾಮೆ ಸಲ್ಲಿಕೆಯಾಗಿದ್ದು 11 ರಂದು. ಆದರೆ, ಅನರ್ಹತೆ ದೂರು ದಾಖಲಾಗಿದ್ದು ಅದಕ್ಕೂ ಮೊದಲು.

–2018ರಲ್ಲಿ ನ್ಯಾ.ಸಿಕ್ರಿ ಅವರು ಆದೇಶ ನೀಡಿದಾಗ ಸರ್ಕಾರವಾಗಲಿ, ಸ್ಪೀಕರ್‌ ಅವರಾಗಲಿ ಇರಲಿಲ್ಲ.

1.00: ಭೋಜನ ವಿರಾಮ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಿಗದಿ
2.00 ಭೋಜನ ವಿರಾಮದ ನಂತರ ವಿಚಾರಣೆ ಆರಂಭ

2.13: ಮುಖ್ಯನ್ಯಾಯಮೂರ್ತಿಗಳ ಅಭಿಪ್ರಾಯ

–ನೀವು (ಸಿಂಘ್ವಿ) ಹೇಳುತ್ತೀರಿ ಅನರ್ಹತೆಯಿಂದ ತಪ್ಪಿಸಿಕೊಳ್ಳಲು ರಾಜೀನಾಮೆ ನೀಡಲಾಗಿದೆ ಎಂದು. ರೋಹಟಗಿ ಹೇಳುತ್ತಾರೆ, ಶಾಸಕರ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದು. ಎರಡೂ ತೂಕದ ವಿಚಾರಗಳೇ. ನಾವು ಇದನ್ನು ಸರಿದೂಗಿಸಬೇಕಿದೆ.

2.25: ಮುಖ್ಯಮಂತ್ರಿ ಪರ ವಕೀಲ ರಾಜೀವ್‌ ದವನ್‌ ವಾದ ಮಂಡನೆ.

–ಅವರ ತಂತ್ರ ಏನು ಎಂಬುದು ಸ್ಪಷ್ಟವಾಗಿ ಬಹಿರಂಗವಾಗಿದೆ. ರಾಜೀನಾಮೆ ನಂತರ ಸಚಿವರಾಗುವುದಾಗಿ ಅವರೇ ಹೇಳಿದ್ದಾರೆ. ಆವರ ಉದ್ದೇಶದ ಕುರಿತೇ ಸ್ಪೀಕರ್‌ ಪರಿಶೀಲನೆ ನಡೆಸಲಿದ್ದಾರೆ.

ಶಾಸಕರ ಪರ ವಕೀಲ ಮುಕುಲ್‌ ರೋಹಟಗಿ ಮಧ್ಯಪ್ರವೇಶ

–ತಾವು ಸಚಿವರಾಗುವುದಾಗಿ ಶಾಸಕರು ಹೇಳೇ ಇಲ್ಲ

ರಾಜೀವ್‌ ದವನ್‌ ಪ್ರಶ್ನೆ

–ಶಾಸರು ರಾಜೀನಾಮೆ ನೀಡಿದ ನಂತರ ಸಚಿವರಾಗುತ್ತಾರೆಯೇ ಎಂಬ ಸಿಜೆಐ ಪ್ರಶ್ನೆಗೆ ಹೌದು ಎಂದು ನೀವೇ ಹೇಳಿದ್ದಿರಿ ಅಲ್ಲವೇ?

–ಶಾಸಕರೆಲ್ಲರೂ ಒಂದು ಗುಂಪಾಗಿದ್ದಾರೆ. ಸ್ಪೀಕರ್‌ರನ್ನು ಭೇಟಿ ಮಾಡಬೇಕಾದ ಸಂದರ್ಭದಲ್ಲಿ ಅವರು ಮುಂಬೈಗೆ ಹಾರಿದ್ದರು.

–10ನೇ ಶೆಡ್ಯೂಲ್‌ನ ಜೊತೆಗೇ ಪರಿಚ್ಛೇದ 190 ಅನ್ನೂ ಓದಿಕೊಳ್ಳಬೇಕಾದ ಅಗತ್ಯವಿದೆ.

–15 ಶಾಸಕರೂ ಗುಂಪಾಗಿರುವುದರ ಹಿಂದಿನ ಕಾರಣಗಳ ಬಗ್ಗೆ ಸ್ಪೀಕರ್‌ ವಿಚಾರಣೆ ಮಾಡಬೇಕಾಗಿದೆ.

–ಸ್ಪೀಕರ್ ವಿಚಾರಣೆ ನಡೆಸಲು ಅವಕಾಶ ಕೊಡಬೇಕು. ಶಾಸಕರು ನೀಡುವ ಕಾರಣಗಳು ತೃಪ್ತಿತರಬೇಕು. ಶಾಸಕರು ನೀಡಿರುವ ಕಾರಣಗಳು ಸರಿಯಿಲ್ಲ

–ನನಗೆ ತೃಪ್ತಿಯಾದರೆ, ಈ ರಾಜೀನಾಮೆಗಳು ನಿಯಮ ಬದ್ಧವಾಗಿವೆ ಎಂದರೆ ಅಂಗೀಕರಿಸುತ್ತೇನೆ ಎಂದು ಸ್ಪೀಕರ್ ಈಗಾಗಲೇ ಹೇಳಿದ್ದಾರೆ. ಅವರ ಅನುಮಾನಗಳು ಪರಿಹಾರವಾದರೆ ರಾಜೀನಾಮೆ ಅಂಗೀಕರಿಸಲಾಗುವುದು ಎಂದು ಸ್ಪೀಕರ್ ಹೇಳಿದ್ದಾರೆ.

–10ರಿಂದ 15 ಶಾಸಕರು ಸರ್ಕಾರವನ್ನು ಬೇಟೆಯಾಡಲು ಹೊರಟಿದ್ದಾರೆ. ರಾಜೀನಾಮೆ ಕೊಟ್ಟು ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಸರ್ಕಾರ ಉರುಳಿಸುವುದು ಅವರ ಉದ್ದೇಶ. ಅವರಿಗೆ ಅವಕಾಶ ಕೊಡಬೇಡಿ

–ರಾಜಕಾರಣದಲ್ಲಿ ನ್ಯಾಯಾಲಯ ದಾಳವಾಗುವುದು ಬೇಡ. ರಾಜೀನಾಮೆ ನೀಡಿರುವವರ ಅರ್ಜಿಯನ್ನು ಪುರಸ್ಕರಿಸಬೇಡಿ. ವಜಾಮಾಡಿ

–ಜುಲೈ6ರಿಂದ 11ರ ನಡುವೆ ಸ್ಪೀಕರ್ ರಾಜೀನಾಮೆಗಳನ್ನು ಪರಿಶೀಲನೆ ಮಾಡುತ್ತಿದ್ದರು. ಸ್ಪೀಕರ್‌ ಮೇಲೆ ಸುಪ್ರೀಂಕೋರ್ಟ್‌ ನಂಬಿಕೆ ಇರಿಸಬೇಕು. ಸ್ಪೀಕರ್ ತಪ್ಪು ನಿರ್ಧಾರ ತೆಗೆದುಕೊಂಡರೆ ತಾವು ಮಧ್ಯಪ್ರವೇಶಿಸಿ. ನ್ಯಾಯಾಲಯದ ವಿಮರ್ಶೆಯ ಅಧಿಕಾರವನ್ನು ನಾವು ಪ್ರಶ್ನಿಸುತ್ತಿಲ್ಲ.

–ಸ್ಪೀಕರ್ ಬಿರುಗಾಳಿ ವೇಗದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನೀವು ಬಯಸ್ತೀರಿ. ಅವರಿಗೆ ಅಷ್ಟು ವೇಗವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಅನವಶ್ಯಕವಾಗಿ ಸುಪ್ರೀಂಕೋರ್ಟ್‌ ಮಧ್ಯಪ್ರವೇಶ ಮಾಡುವುದು ಬೇಡ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬಾರದು

–ರಾಜೀನಾಮೆ ನೀಡಿದವರ ವಿಚಾರಣೆಯನ್ನು ಸ್ಪೀಕರ್ ಮಾಡುತ್ತಾರೆ. ಅವರ ಆದೇಶ ಕಾನೂನು ವ್ಯಾಪ್ತಿಯಲ್ಲಿ ಇಲ್ಲದಿದ್ದರೆ ತಾವು ವಿಮರ್ಶೆ ಮಾಡಿ. ಸ್ಪೀಕರ್ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆದರೆ ವಿಚಾರಣೆ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯವಿಲ್ಲ.

-ಶಾಸಕರ ರಾಜೀನಾಮೆಯ ವಿಚಾರವನ್ನು ಸ್ವಇಚ್ಛೆ ಮತ್ತು ಅವರು ಪ್ರಸ್ತಾಪಿಸಿರುವ ವಿಷಯಗಳ ನೈಜತೆ ಬಗ್ಗೆ ಸ್ಪೀಕರ್ ವಿಚಾರಣೆ ನಡೆಸಿ ಕಂಡುಕೊಳ್ಳಬೇಕು. ಅವರ ಕಾರ್ಯವೈಖರಿ ಬಗ್ಗೆ ಅನುಮಾನ ಬೇಡ. ಸ್ಪೀಕರ್ ಕಾನೂನುಬದ್ಧವಾಗಿಯೇ ಕೆಲಸ ಮಾಡುತ್ತಿದ್ದಾರೆ.

-ಪಕ್ಷಾಂತರ ನಿಷೇಧದ ಬಗ್ಗೆ ವಿವರಿಸುವ 10ನೇ ಪರಿಚ್ಛೇದದಡಿ ನಾವು ಬರುವುದಿಲ್ಲ ಎಂದು ಶಾಸಕರು ಹೇಳಲು ಆಗುವುದಿಲ್ಲ.

-10ನೇ ಪರಿಚ್ಛೇದದ ಪ್ರಕಾರ ಆಯ್ಕೆಯಾದ ನಂತರ ಶಾಸಕರಿಗೆ ಆಯ್ಕೆಯ ಸ್ವಾತಂತ್ರ್ಯ ಇಲ್ಲ

– ರಾಜೀನಾಮೆ ನೀಡಿರುವ ಶಾಸಕರಿಗೆ ಆಮಿಷ ಒಡ್ಡಲಾಗಿದೆ. ಮುಂಗಾರು ಅಧಿವೇಶನಕ್ಕೂ ಮುನ್ನ ಶಾಸಕರನ್ನು ಸೆಳೆದು ಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಯುತ್ತಿದೆ. ಸಂಖ್ಯಾಬಲ ಇಲ್ಲದಂತೆ ಮಾಡುವುದು ಅವರ ಉದ್ದೇಶ. ಸ್ಪೀಕರ್‌ ಪರಮಾಧಿಕಾರದ ಬಗ್ಗೆ ತಿಳಿದಿದ್ದರೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ.

– ಬಜೆಟ್ ಅಂಗೀಕಾರಕ್ಕೂ ಮೊದಲೇ ಸರ್ಕಾರ ಬೀಳಿಸುವುದು ರಾಜೀನಾಮೆ ನೀಡಿರುವವರ ಉದ್ದೇಶ. ವಿಧಾನಸಭೆಯಲ್ಲಿ ಹಣಕಾಸು ವಿಧೇಯಕ ಅಂಗೀಕಾರವಾಗಬೇಕಿದೆ. ಅದು ಅಂಗೀಕಾರವಾಗದಂತೆ ಮಾಡಿ ಸರ್ಕಾರ ಉರುಳಿಸುವುದು ಇವರ ಉದ್ದೇಶ. ಸ್ಪೀಕರ್ ಅಧಿಕಾರದ ಬಗ್ಗೆ ಪೂರ್ಣ ಚರ್ಚೆಯಾಗಬೇಕು. ಅಲ್ಲಿಯವರೆಗೆ ತೀರ್ಪು ಕೊಡುವುದು ಬೇಡ

– ಗುರುವಾರ ವಿಶ್ವಾಸಮತ ಕೋರಲು ಮುಖ್ಯಮಂತ್ರಿ ಒಪ್ಪಿದ್ದಾರೆ. ಹೀಗಾಗಿ ಅಲ್ಲಿಯವರೆಗೆ ತಾವು ಮಧ್ಯಪ್ರವೇಶ ಮಾಡುವುದು ಬೇಡ

ಮುಕುಲ್‌ ರೋಹಟಗಿ ವಾದ ಮಂಡನೆ

– ರಾಜೀನಾಮೆ ಶಾಸಕರ ಹಕ್ಕು. ಅದನ್ನು ಕಿತ್ತುಕೊಳ್ಳಬಾರದು. ಶಾಸಕರ ರಾಜೀನಾಮೆಯನ್ನು ಅನರ್ಹತೆಯೊಂದಿಗೆ ಸೇರಿಸಬಾರದು. ಅದನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. ಶಾಸಕರಿಗೆ ಅವರ ಇಚ್ಛೆಯಂತೆ ಬದುಕುವ ಹಕ್ಕು ಇದೆ. ವಿಧಾನಸಭೆಗೂ ಸಂವಿಧಾನದ 208ನೇ ಪರಿಚ್ಛೇದದ ವಿಧಿ ಪ್ರಕಾರ ತನ್ನದೇ ನಿಯಮಾವಳಿ ರೂಪಿಸಿಕೊಳ್ಳಲು ಅವಕಾಶವಿದೆ. ರಾಜೀನಾಮೆಯನ್ನು ಶೀಘ್ರ ಅಂಗೀಕರಿಸಬೇಕು. ಅವರ ಹಕ್ಕನ್ನು ಸ್ಪೀಕರ್ ಕಿತ್ತುಕೊಳ್ಳಬಾರದು

–ಅದನ್ನು ನೋಡಬೇಕು, ಇದನ್ನು ಪರಿಶೀಲಿಸಬೇಕು ಎಂದು ಸ್ಪೀಕರ್ ಕಾಲಹರಣ ಮಾಡುವಂತಿಲ್ಲ. 10ನೇ ಶೆಡ್ಯೂಲ್ ಪ್ರಕಾರ ರಾಜೀನಾಮೆ ಕೊಟ್ಟಿಲ್ಲ. ಯಾರ ಒತ್ತಡದಿಂದಲೂ ಶಾಸಕರು ರಾಜೀನಾಮೆ ಕೊಟ್ಟಿಲ್ಲ.
–hence, forhtwith (ತತ್‌ಕ್ಷಣ) ಪದಕ್ಕೆ ಅರ್ಥ ಹೇಳುತ್ತಿರುವ ಸಿಜೆಐ ರಂಜನ್ ಗೊಗೊಯ್

– ಒಂದು ವೇಳೆ ರಾಜೀನಾಮೆಯನ್ನು 4 ವರ್ಷ ಅಂಗೀಕಾರ ಮಾಡದಿದ್ದರೆ ಶಾಸಕರು ಮುಂದೆ ಏನು ಮಾಡಬೇಕು? ರಾಜೀನಾಮೆ ಸ್ವೀಕರಿಸದೆ ಒತ್ತಾಯಪೂರ್ವಕವಾಗಿ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಒತ್ತಡ ಹಾಕಲಾಗುತ್ತಿದೆ. ಶೆಡ್ಯೂಲ್ 10ರ ಪ್ರಕಾರ 7 ದಿನ ಮೊದಲ ನೋಟಿಸ್ ಕೊಟ್ಟು, ಅನಂತರ ಸಮಿತಿ ರಚಿಸಿ, ವಿಚಾರಣೆಗೆ ಒಳಪಡಿಸಿ ಅನರ್ಹತೆಯ ವಿಚಾರ ತೀರ್ಮಾನ ಮಾಡಬೇಕು. ಸರ್ಕಾರ ಉಳಿಸಲು ಸ್ಪೀಕರ್ ಪ್ರಯತ್ನ ಮಾಡುತ್ತಿದ್ದಾರೆ

–ಕರ್ನಾಟಕದ ರಾಜ್ಯ ಸರ್ಕಾರ ಬಹುಮತ ಕಳೆದುಕೊಂಡಿದೆ. ಅಲ್ಪಮತದ ಸರ್ಕಾರ ಉಳಿಸಲು ಸ್ಪೀಕರ್ ಪ್ರಯತ್ನಿಸುತ್ತಿದ್ದಾರೆ

3.30: ನ್ಯಾಯಪೀಠ
ನಾಳೆ ಬೆಳಿಗ್ಗೆ ನಮ್ಮ ಆದೇಶ ಪ್ರಕಟಿಸುತ್ತೇವೆ ಎಂದು ಹೇಳಿದ ಸುಪ್ರೀಂಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT