ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಅಧಿಸೂಚನೆಗಳಿಗೆ ತಾತ್ಕಾಲಿಕ ತಡೆ

Last Updated 10 ಸೆಪ್ಟೆಂಬರ್ 2018, 17:38 IST
ಅಕ್ಷರ ಗಾತ್ರ

ಧಾರವಾಡ: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ನಿಗದಿಪಡಿಸಿ, ಸರ್ಕಾರ ಹೊರಡಿಸಿದ್ದ ಮೊದಲ ಹಾಗೂ ಪರಿಷ್ಕೃತ ಅಧಿಸೂಚನೆ ಎರಡರ ಅನ್ವಯವೂ ಇದೇ 20ರವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಇಲ್ಲಿನ ಹೈಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.

ಈ ಸಂಬಂಧ, ಸೆ.3ರಂದು ಸರ್ಕಾರ ಮೊದಲ ಅಧಿಸೂಚನೆ ಹೊರಡಿಸಿತ್ತು. ನಂತರ, ಕೆಲವು ಸ್ಥಳೀಯ ಸಂಸ್ಥೆಗಳ ಮೀಸಲಾತಿ ಬದಲಾವಣೆಯೊಂದಿಗೆ ಸೆ.6ರಂದು ಮತ್ತೊಮ್ಮೆ ಅಧಿಸೂಚನೆ ಹೊರಡಿಸಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ನಿಪ್ಪಾಣಿ, ಬಾಗಲಕೋಟೆ, ರಬಕವಿ, ಗಂಗಾವತಿ, ಬೀಳಗಿ ಸೇರಿದಂತೆ ಹಲವು ಸಂಸ್ಥೆಗಳ ಸದಸ್ಯರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಿಸಿದ್ದರು.

‘ಸರ್ಕಾರ ತನಗೆ ಅನುಕೂಲವಾಗುವಂತೆ ಮೀಸಲಾತಿ ಬದಲಾವಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಹೆಚ್ಚಿನ ಸಂಖ್ಯೆಯ ಸದಸ್ಯರಿದ್ದರೂ, ನಿರ್ದಿಷ್ಟ ಜಾತಿ ಸದಸ್ಯರೇ ಇಲ್ಲದ ಜಾತಿಗಳ ಸದಸ್ಯರನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ನಿಗದಿಪಡಿಸಲಾಗಿದೆ. ಹೀಗಾಗಿ ಅಧಿಸೂಚನೆ ಅನೂರ್ಜಿತಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್‌ ಅವರಿದ್ದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿ, ತಾತ್ಕಾಲಿಕ ತಡೆ ನೀಡಿತು. ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ ಪಾಟೀಲ, ಕೆ.ಎಸ್‌.ಪಾಟೀಲ, ಜಿ.ಕೆ.ಹಿರೇಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT