ಬೀದರ್: ‘ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸಾಮಾನ್ಯ ಸಿದ್ದರಾಮಯ್ಯರಾಗಿ ಮುಡಾ ಪ್ರಕರಣದ ತನಿಖೆ ಎದುರಿಸಬೇಕು’ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
‘ಪ್ರಕರಣದ ಆರೋಪ ಹೊತ್ತು ನ್ಯಾಯಾಲಯದಲ್ಲಿ ಆರೋಪಿ ಎಂಬ ತೀರ್ಪು ಬಂದರೂ ಅಧಿಕಾರಕ್ಕೆ ಅಂಟಿಕೊಂಡು ಭಂಡ ಮುಖ್ಯಮಂತ್ರಿ ಎಂಬ ಕಪ್ಪು ಚುಕ್ಕೆ ಅಂಟಿಸಿಕೊಳ್ಳಬಾರದು. ಮುಖ್ಯಮಂತ್ರಿಯಾಗಿದ್ದುಕೊಂಡು ಮುಂದುವರೆದರೆ ರಾಜ್ಯದ ಜನರಿಗೆ ಅವಮಾನ ಮಾಡಿದಂತೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
‘ಸಿದ್ದರಾಮಯ್ಯನವರು ಮೊದಲ ಸಲ ಮುಖ್ಯಮಂತ್ರಿಯಾದಾಗ ಅವರ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ತನಿಖೆಗೆ ಹೆದರಿಕೊಂಡು ಲೋಕಾಯುಕ್ತವನ್ನೇ ಬಂದ್ ಮಾಡಿದ್ದರು. ಎಸಿಬಿ ರಚಿಸಿ ತಮ್ಮ ವಿರುದ್ಧದ ಪ್ರಕರಣಗಳಿಂದ ಪಾರಾಗಿದ್ದರು. ಆದರೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೈಸೂರು ಮುಡಾ ಅಕ್ರಮದ ಪ್ರಕರಣದ ತನಿಖೆ ನಡೆಸುವಂತೆ ಮೈಸೂರು ಲೋಕಾಯುಕ್ತಕ್ಕೆ ಸೂಚಿಸಿದೆ. ಇದಕ್ಕೆ ಹೇಳುವುದು ಕಾಲಕ್ಕಿಂತ ದೊಡ್ಡದು ಮತ್ತೊಂದಿಲ್ಲ’ ಎಂದಿದ್ದಾರೆ.
‘ಅನ್ಯಾಯ, ಮೋಸ, ವಂಚನೆ ಮತ್ತು ತಪ್ಪು ಮಾಡಿದವರಿಗೆ ಕಾಲ ಸೂಕ್ತ ಸಮಯಕ್ಕೆ ಉತ್ತರ ನೀಡುತ್ತದೆ. ಕಾಲ ತನ್ನ ಶಕ್ತಿ ತೋರಿಸಲು ಪ್ರಾರಂಭಿಸಿದಾಗ ಹಗ್ಗ ಕೂಡ ಹಾವಾಗಿ ಕಾಣುತ್ತದೆ. ಅದಕ್ಕೆ ಮೋಸ, ಅನ್ಯಾಯ ಮತ್ತು ಉಂಡ ಮನೆಗೆ ಎರಡು ಬಗೆಯುವ ಮುನ್ನ ಒಂದು ಬಾರಿ ಈ ವಿಚಾರ ನೆನೆಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಹೇಳಿದ್ದಾರೆ.
‘ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ಅವರನ್ನು ಪಕ್ಷಪಾತಿಗಳೆಂದು ಜರಿದಿದ್ದೀರಿ. ಅದಕ್ಕೆ ಈಗ ಹೈಕೋರ್ಟ್ ಉತ್ತರ ಕೊಟ್ಟಿದೆ. ಮುಖ್ಯಮಂತ್ರಿಗಳ ಮೇಲಿನ ಆರೋಪದಲ್ಲಿ ಹುರುಳಿದೆ ಎಂದೂ ಹೇಳಿದೆ. ಇದರಿಂದ ನೀವು ತಪ್ಪಿತಸ್ಥರೆಂಬ ಭಾವನೆ ರಾಜ್ಯದ ಜನತೆಯಲ್ಲಿ ಮೂಡಿದೆ’ ಎಂದು ತಿಳಿಸಿದ್ದಾರೆ.