ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುನಿರತ್ನ ದುಷ್ಕೃತ್ಯಕ್ಕೆ ಎಚ್‌ಡಿಕೆ, ಅಶೋಕ ಕುಮ್ಮಕ್ಕು: ಕೃಷ್ಣ ಬೈರೇಗೌಡ

'ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಖಂಡನಾ ನಿರ್ಣಯ ಸಭೆ ನಡೆಯಲಿ'
Published : 20 ಸೆಪ್ಟೆಂಬರ್ 2024, 13:17 IST
Last Updated : 20 ಸೆಪ್ಟೆಂಬರ್ 2024, 13:17 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಶಾಸಕ ಮುನಿರತ್ನ ಅವರ ದುಷ್ಕೃತ್ಯವನ್ನು ಖಂಡಿಸದೆ ಆರ್‌. ಅಶೋಕ, ಎಚ್‌.ಡಿ. ಕುಮಾರಸ್ವಾಮಿ ಸುಮ್ಮನೆ ಇದ್ದಾರೆ. ಇವರ ಕುಮ್ಮಕ್ಕು ಇಲ್ಲದೆ ಇಷ್ಟೆಲ್ಲ ನಡೆಯುತ್ತದೆಯೇ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಮಾಡಿದ್ದು ತಪ್ಪು ಎಂದು ಇವರು ಎಲ್ಲಿಯೂ ಮಾತನಾಡಿಲ್ಲ. ಮುನಿರತ್ನ ಭ್ರಷ್ಟಾಚಾರಿ, ಮನೆಯಲ್ಲಿಯೇ ಬಿಬಿಎಂಪಿ ಬಿಲ್ ಬರೆಯುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಆದರೆ ಈಗ ಹನಿಟ್ರ್ಯಾಪ್ ನಡೆಸುತ್ತಾರೆ ಎನ್ನುವ ಆಘಾತಕಾರಿ ಅಂಶ ತಿಳಿದು ಬಂದಿದೆ ಎಂದು ಹೇಳಿದರು.

ಅಧಿಕಾರಿಗಳು, ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ಇದಕ್ಕೆ ಏಡ್ಸ್ ಇರುವವರನ್ನೇ ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತೆಯೇ ದೂರು ನೀಡಿದ್ದಾರೆ. ಇಷ್ಟೆಲ್ಲ ಕಂಡು ಬಂದರೂ ಬಿಜೆಪಿಯವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ಇದ್ದಾಗ ತಪ್ಪು ಮಾಡಿದ್ದರೆ ಕೇಳಬೇಕಾಗಿತ್ತು. ಬಿಜೆಪಿಯಲ್ಲಿ ಇದ್ದಾಗ ಕೇಳಬಾರದು ಎನ್ನುವ ಮನಸ್ಥಿತಿ ಆರ್.ಅಶೋಕ ಅವರದ್ದು. ಅಶೋಕ್ ಮತ್ತು ಕುಮಾರಸ್ವಾಮಿಗೆ ಮನುಷ್ಯತ್ವ ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೇ 100ರಷ್ಟು ಸಾಚ ಯಾರೂ ಇಲ್ಲ. ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ ಮುನಿರತ್ನ ಮಾಡಿರುವುದು ಸರಿಯೇ ಎಂದು ಯೋಚಿಸಲಿ. ಇಷ್ಟೆಲ್ಲಾ ಹೊರ ಬಂದಿದ್ದರೂ ಬೆಂಬಲವಾಗಿ ನಿಂತವರೂ ಸಹ ಅಪರಾಧದ ಭಾಗವಾಗಿದ್ದಾರೆ ಎಂದು ಕಿಡಿಕಾರಿದರು.

ಮುನಿರತ್ನ ಒಕ್ಕಲಿಗ ಸಮಾಜದ ಅವಹೇಳನ ಮಾಡಿದ್ದಾರೆ. ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇವೆ. ಒಕ್ಕಲಿಗ ಸಮಾಜದ ಮೇಲೆ ದಾಳಿ ನಡೆದಾಗ ಸಮುದಾಯದ ಎಚ್ಚೆತ್ತುಕೊಂಡು ಒಂದು ಧ್ವನಿಯಲ್ಲಿ ಖಂಡಿಸಬೇಕು. ಸಮಾಜವು ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಗೌರವ ಕೊಡುತ್ತದೆ. ಅವರ ನೇತೃತ್ವದಲ್ಲಿ ಖಂಡನಾ ನಿರ್ಣಯ ಸಭೆ ಆಗಬೇಕು ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಸ್ವಾಮೀಜಿ ಅವರ ತೀರ್ಮಾನವೇ ಅಂತಿಮ ಎಂದು ಹೇಳಿದರು.

ರಾಜ್ಯದಲ್ಲಿ ಒಕ್ಕಲಿಗ ಸಮಾಜ ಗೌರವಯುತವಾಗಿ ನಡೆದುಕೊಂಡು ಬಂದಿದೆ. ವಿನಾಕಾರಣ ಅವಹೇಳನ ಮಾಡಬಹುದು ಎಂದರೆ ಸಮಾಜದ ಗೌರವಕ್ಕೆ ಚ್ಯುತಿ ಬರುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT