ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಗುರುವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಅವರು ಸಂಸತ್ ಭವನದಲ್ಲಿ ಮೋದಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಸುಮಾರು 7 ನಿಮಿಷ ಮಾತುಕತೆ ನಡೆಸಿದರು. ಇದೊಂದು ಸೌಜನ್ಯದ ಭೇಟಿಯಾಗಿತ್ತು. ಬಳಿಕ ನಿರ್ಮಲಾ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಲು ರಾಜನಾಥ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯ ಅವರು ಗಡ್ಕರಿ ಅವರ ಗಮನ ಸೆಳೆದರು. ಹೆದ್ದಾರಿಯಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಿದರು. ಅಧಿಕಾರಿಗಳು ಹಾಗೂ ತಜ್ಞರ ತಂಡವೊಂದನ್ನು ಹೆದ್ದಾರಿ ವೀಕ್ಷಣೆಗೆ ಕಳುಹಿಸಿ ಲೋಪದೋಷ ಸರಿಪಡಿಸುವುದಾಗಿ ಗಡ್ಕರಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟ್‌ನಲ್ಲಿ 26 ಕಿ.ಮೀ. ಸುರಂಗ ನಿರ್ಮಾಣಕ್ಕೆ (ಮಾರನಹಳ್ಳಿಯಿಂದ ಅಡ್ಡಹೊಳೆ ವರೆಗೆ) ಅನುಮತಿ ನೀಡುವಂತೆ ಗಡ್ಕರಿ ಅವರಿಗೆ ಮನವಿ ಮಾಡಿದರು. ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
2023–24ನೇ ಆರ್ಥಿಕ ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲ ಕಾಮಗಾರಿಗಳ ಅನುದಾನವನ್ನು ₹10 ಸಾವಿರ ಕೋಟಿಗೆ ಹೆಚ್ಚಿಸಬೇಕು. ಪ್ರವಾಹ ಹಾನಿ ಕಾಮಗಾರಿಗಳಿಗೆ ₹250 ಕೋಟಿ ಅನುದಾನ ನೀಡಬೇಕು. ಹೆದ್ದಾರಿಗಳ ನಿರ್ವಹಣೆ ಹಾಗೂ ದುರಸ್ತಿ ಕಾಮಗಾರಿಗಳ ಅನುದಾನವನ್ನು ₹50 ಕೋಟಿಗೆ ಏರಿಸಬೇಕು. ರಾಜ್ಯ ರಸ್ತೆಗಳ ಸುಧಾರಣೆಗಾಗಿ ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಯಿಂದ ₹1 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಕೊಳ್ಳೆಗಾಲ, ಗುಂಡ್ಲುಪೇಟೆ, ನಂಜನಗೂಡು, ಮೈಸೂರು ಹೆದ್ದಾರಿಯನ್ನು (150 ಕಿ.ಮೀ) ಚತುಷ್ಪಥ/ ಆರು ಪಥದ ಹೆದ್ದಾರಿಯನ್ನಾಗಿ ಪರಿವರ್ತಿಸಬೇಕು. ಕನಕಪುರ ರಸ್ತೆಯಿಂದ ತಮಿಳುನಾಡು ಗಡಿ ವರೆಗಿನ ಹೆದ್ದಾರಿಯನ್ನು ವಿಸ್ತರಣೆ ಮಾಡಲು ಅನುಮೋದನೆ ನೀಡಬೇಕು ಎಂದೂ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.