ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹17,836 ಕೋಟಿ ಹೂಡಿಕೆ; 27,067 ಉದ್ಯೋಗ ಸೃಷ್ಟಿ:ಎಸ್‌ಎಚ್‌ಎಲ್‌ಸಿಸಿ ಸಭೆ ಒಪ್ಪಿಗೆ

*ಹಲವು ಯೋಜನೆಗಳಿಗೆ ಎಸ್‌ಎಚ್‌ಎಲ್‌ಸಿಸಿ ಸಭೆ ಒಪ್ಪಿಗೆ
Published 9 ಮಾರ್ಚ್ 2024, 0:30 IST
Last Updated 9 ಮಾರ್ಚ್ 2024, 1:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 27,067 ಉದ್ಯೋಗಗಳನ್ನು ಸೃಷ್ಟಿಸುವ ₹17,835.9 ಕೋಟಿ ಮೊತ್ತದ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಅನುಮೋದನಾ ಸಮಿತಿ (ಎಸ್‌ಎಚ್‌ಎಲ್‌ಸಿಸಿ) ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸಭೆಯ ಬಳಿಕ ವಿವರ ನೀಡಿದ ಸಿದ್ದರಾಮಯ್ಯ, ₹8,220.05 ಕೋಟಿ ಮೊತ್ತದ ಆರು ಹೊಸ ಯೋಜನೆಗಳು ಮತ್ತು ₹9,615.85 ಕೋಟಿ ಮೊತ್ತದ ಹೆಚ್ಚುವರಿ ಬಂಡವಾಳ ಹೂಡಿಕೆಯ ಎಂಟು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೊಸ ಹೂಡಿಕೆ ಮತ್ತು ಹೆಚ್ಚುವರಿ ಬಂಡವಾಳ ಹೂಡಿಕೆಯ ಎಂಟು ಯೋಜನೆಗಳಿಗೆ ದೊರೆತಿರುವ ಅನುಮತಿಗಳಿಂದ ಈ ಜಿಲ್ಲೆಗಳಲ್ಲಿ ಒಟ್ಟಾರೆ ₹10,433.72 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಆಗಲಿದೆ ಎಂದು ವಿವರಿಸಿದರು.

ವಿಸ್ಟ್ರಾನ್‌ ಇನ್ಫೋಕಾಂ ಮ್ಯಾನುಫ್ಯಾಕ್ಚರಿಂಗ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ₹2,095 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಪೋನ್‌ ತಯಾರಿಕಾ ಘಟಕ ಆರಂಭಿಸಲಿದೆ. ಇದರಿಂದ 21,723 ಜನರಿಗೆ ಉದ್ಯೋಗಗಳು ಲಭ್ಯವಾಗಲಿವೆ ಎಂದೂ ಅವರು ಹೇಳಿದರು.

ಸಭೆಯಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಸಚಿವ ಎಂ.ಬಿ.ಪಾಟೀಲ, ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ. ಅತೀಕ್ ಉಪಸ್ಥಿತರಿದ್ದರು.

ಹೊಸ ಹೂಡಿಕೆ ಪ್ರಸ್ತಾವನೆಗಳು

ಎಸ್‌ಟಿಟಿ ಗ್ಲೋಬಲ್‌ ಡೇಟಾ ಸೆಂಟರ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಇಂಡಿಯನ್‌ ಕೇನ್‌ ಪವರ್‌ ಲಿಮಿಟೆಡ್‌, ಐಟಿಸಿ ಸರ್ವೀಸ್ ಮ್ಯಾನೇಜ್‌ಮೆಂಟ್‌ ಸೊಲ್ಯೂಷನ್ಸ್‌ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌, ಶ್ರೀ ಬಾಲಾಜಿ ಶುಗರ್ಸ್‌ ಮತ್ತು ಕೆಮಿಕಲ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಏರ್‌ ಇಂಡಿಯಾ ಲಿಮಿಟೆಡ್‌. ಇವುಗಳ ಒಟ್ಟು ಹೂಡಿಕೆ ಮೊತ್ತ ₹8,220.05 ಕೋಟಿ.

ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು

ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳ ಸಾಮರ್ಥ್ಯ ವಿಸ್ತರಣೆ ಉದ್ದೇಶದ ಹೆಚ್ಚುವರಿ ಹೂಡಿಕೆಯ 8 ಪ್ರಸ್ತಾವನೆಗಳಿಗೂ ಸಭೆ ಒಪ್ಪಿಗೆ ನೀಡಿದೆ. ಅವುಗಳೆಂದರೆ, ಅಲ್ಟ್ರಾಟೆಕ್‌ ಸಿಮೆಂಟ್‌ ಲಿಮಿಟೆಡ್‌, ಆರ್‌ಬಿಎಸ್‌ಎಸ್‌ಎನ್‌ ಫೆರಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌, ಎಂವಿ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌, ಇಂಡಿಯನ್‌ ಕೇನ್‌ ಪವರ್‌ ಲಿಮಿಟೆಡ್‌(ಅಳಗವಾಡಿ ಬೀರೇಶ್ವರ ಷುಗರ್ಸ್‌ ಘಟಕ), ಗ್ರೀನ್ಕೊ ಕೆಎ01 ಐಆರ್‌ಇಪಿ ಪ್ರೈವೇಟ್‌ ಲಿಮಿಟೆಡ್‌, ಅಥಣಿ ಷುಗರ್ಸ್‌ ಲಿಮಿಟೆಡ್‌, ಉಕೆಮ್ ಅಗ್ರಿ ಇನ್‌ಫ್ರಾ ಲಿಮಿಟೆಡ್‌ ಮತ್ತು ಸ್ನೈಡರ್‌ ಎಲೆಕ್ಟ್ರಿಕ್‌ ಐಟಿ ಬಿಸಿನೆಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸೇರಿವೆ. ಇವುಗಳ ಹೂಡಿಕೆ ಮೊತ್ತ ₹9,615.85 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT