ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್‌ಗೆ 3,667 ಎಕರೆ ಮಾರಾಟ!: ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಾಧ್ಯತೆ

ಬಳ್ಳಾರಿ ಜಿಲ್ಲೆಯ ಜಮೀನು
Last Updated 27 ಮೇ 2019, 4:11 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಭೂಮಿಯನ್ನು ಜೆ.ಎಸ್‌.ಡಬ್ಲ್ಯೂಸ್ಟೀಲ್‌ ಲಿಮಿಟೆಟ್‌ (ಜಿಂದಾಲ್‌) ಕಂಪನಿಗೆ ಶುದ್ಧ ಕ್ರಯ ಪತ್ರ (ಸೇಲ್ ಡೀಲ್‌) ಮಾಡಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ.

ತೋರಣಗಲ್, ಕರೇಗುಪ್ಪ ಗ್ರಾಮಗಳಲ್ಲಿ 2000.58 ಎಕರೆ ಮತ್ತು ಸಂಡೂರು ತಾಲ್ಲೂಕಿನ ಮುಸಿನಾಯಕನಹಳ್ಳಿ, ಎರಬನಹಳ್ಳಿ ಗ್ರಾಮಗಳಲ್ಲಿ 1,666.73 ಎಕರೆ ಭೂಮಿಯನ್ನು ಕಂಪನಿಗೆ ಮಾರಾಟ ಮಾಡುವ ಪ್ರಸ್ತಾವ ವನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಿದ್ಧಪಡಿಸಿದೆ.

ಆರ್ಥಿಕ, ಕಾನೂನು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಈಗಾಗಲೇ ಈ ಪ್ರಸ್ತಾವಕ್ಕೆ ಸಹಮತ ವ್ಯಕ್ತಪಡಿಸಿದೆ.

ಸೋಮವಾರ (ಮೇ 27) ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವ ಚರ್ಚೆಗೆ ಬರಲಿದ್ದು, ಅನುಮೋದನೆ ಸಿಗುವ ಸಾಧ್ಯತೆ ಇದೆ.

ಸುಮಾರು 14 ವರ್ಷಗಳ ಹಿಂದೆಯೇ ಈ ಭೂಮಿಯನ್ನು ಜಿಂದಾಲ್‌ ಕಂಪನಿಗೆ ಗುತ್ತಿಗೆ (ಲೀಸ್‌) ಆಧಾರದಲ್ಲಿ ನೀಡಲಾಗಿತ್ತು. ಆಗ ಮಾಡಿಕೊಂಡ ಒಡಂಬಡಿಕೆ ಪತ್ರದಲ್ಲಿರುವಂತೆ(ಎಂಒಯು) ಎಕರೆಗೆ ₹ 1.22 ಲಕ್ಷಮೊತ್ತಕ್ಕೆ ಇದೀಗ ಕ್ರಯ ಪತ್ರ ಮಾಡಿಕೊಡುವ ಪ್ರಸ್ತಾವ ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವದಲ್ಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಕೈಗಾರಿಕೆಗಳ ಸ್ಥಾಪನೆಗೆ 99 ವರ್ಷ ಅವಧಿಗೆ ಲೀಸ್‌ ಆಧಾರದಲ್ಲಿ ಜಾಗ ನೀಡುವ ಬಗ್ಗೆ ಹೊಸ ಕೈಗಾರಿಕಾ ನೀತಿಯಲ್ಲಿ (2014–19) ಪ್ರಸ್ತಾಪಿಸಲಾಗಿತ್ತು. ಆ ನೀತಿಗೆ ಅನ್ವಯ ಎಂಒಯು ಮಾಡಿಕೊಳ್ಳಲು ಕೈಗಾರಿಕೆಗಳು ಮುಂದೆ ಬರುತ್ತಿರಲಿಲ್ಲ. ಕೈಗಾರಿಕಾ ಸಂಘಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅದನ್ನು ಬದಲಿಸಿ 10 ವರ್ಷ ಅವಧಿಗೆ ಷರತ್ತು ವಿಧಿಸಿ ಲೀಸ್‌ ಕಂ ಸೇಲ್‌ ಆಧಾರದಲ್ಲಿ ಭೂಮಿ ನೀಡಲಾಗುತ್ತಿದೆ.

ಸರ್ಕಾರ ವಿಧಿಸಿದ ಷರತ್ತುಗಳನ್ನು ಪೂರೈಸಿದರೆ ಆ ಭೂಮಿಯನ್ನು ಕೈಗಾರಿಕೆ ಸ್ಥಾಪಿಸಿದ ಕಂಪನಿಗೆ ಕ್ರಯಪತ್ರ ಮಾಡಿಕೊಡಲಾಗುತ್ತದೆ. ಅದರಂತೆ, ‘ಸಿ‘ ಮತ್ತು‘ಡಿ’ ವೃಂದದ ಹುದ್ದೆಗಳಲ್ಲಿ ಶೇ 100ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು, ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ.

‘ಬಳ್ಳಾರಿ, ಸಂಡೂರು ತಾಲ್ಲೂಕುಗಳಲ್ಲಿ ಜಮೀನು ಪಡೆದು ಕೈಗಾರಿಕೆ ಸ್ಥಾಪಿಸಿರುವ ಜಿಂದಾಲ್‌ ಕಂಪನಿ ಶೇ 82ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ನೀಡಿರುವ ಬಗ್ಗೆ ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರ ನಿಗದಿಪಡಿಸಿದ ಮಾನದಂಡಕ್ಕೆ ಹೋಲಿಸಿದರೆ ಈ ಪ್ರಮಾಣ ಕಡಿಮೆ ಇದ್ದರೂ ಭೂಮಿಯನ್ನು ಶುದ್ಧ ಕ್ರಯಪತ್ರ ಮಾಡಿಕೊಡಬಹುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಶಿಫಾರಸು ಮಾಡಿದೆ’ ಎನ್ನಲಾಗಿದೆ.

**

ಹೊಸದಾಗಿ ಭೂಮಿ ಕೊಡುತ್ತಿಲ್ಲ. ಲೀಸ್‌ ಕಂ ಸೇಲ್‌ ಆಧಾರದಲ್ಲಿ ಜೆ.ಎಸ್‌.ಡಬ್ಲ್ಯೂ ಸ್ಟೀಲ್‌ ಲಿಮಿಟೆಟ್‌ ಕಂಪನಿಗೆ ಹಿಂದೆಯೇ ಭೂಮಿ ನೀಡಲಾಗಿತ್ತು. ಈಗ ಕ್ರಯ ಪತ್ರದ ಪ್ರಸ್ತಾವ ಇದೆ.
-ಗೌರವ್ ಗುಪ್ತಾ, ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT