ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಿ ವಿಜಯ್ ಮಿದುಳು ನಿಷ್ಕ್ರಿಯ

ಅಪಘಾತದಲ್ಲಿ ಗಾಯಗೊಂಡಿರುವ ನಟ: ಪರಿಸ್ಥಿತಿ ಗಂಭೀರ
Last Updated 14 ಜೂನ್ 2021, 20:56 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಟ ಸಂಚಾರಿ ವಿಜಯ್ (42) ಅವರ ಮಿದುಳು ನಿಷ್ಕ್ರಿಯವಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎಂಬ ವೈದ್ಯರ ಹೇಳಿಕೆ ಬೆನ್ನಲ್ಲೇ, ವಿಜಯ್ ಅವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

ಶನಿವಾರ ರಾತ್ರಿ (ಜೂನ್ 12) ಸಂಭವಿಸಿದ ಅಪಘಾತದಿಂದಾಗಿ ಮಿದುಳಿನ ಎರಡೂ ಭಾಗಕ್ಕೂ ತೀವ್ರ ಪೆಟ್ಟು ಬಿದ್ದು ರಕ್ತ ಹೆಪ್ಪುಗಟ್ಟಿತ್ತು. ವಿಜಯ್ ಕೋಮಾ ಸ್ಥಿತಿ ತಲುಪಿದ್ದರು. ಅಪೋಲೊ ಆಸ್ಪತ್ರೆ ವೈದ್ಯ ಅರುಣ್ ನಾಯಕ್ ನೇತೃತ್ವದ ತಂಡ, ಭಾನುವಾರ ಬೆಳಿಗ್ಗೆಯೇ ಮಿದುಳಿಗೆ ಶಸ್ತ್ರಚಿಕಿತ್ಸೆ ಮಾಡಿದೆ. ಆದರೆ, ಅದಕ್ಕೆ ವಿಜಯ್ ಸ್ಪಂದಿಸಿಲ್ಲ ಎನ್ನಲಾಗಿದೆ.

‘ವಿಜಯ್ ಅವರ ಕಿಡ್ನಿ, ಹೃದಯ, ಶ್ವಾಸಕೋಶ ಹಾಗೂ ಇತರೆ ಭಾಗಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಹೃದಯ ಬಡಿತ ಹಾಗೂ ರಕ್ತದೊತ್ತಡ ಸಾಧಾರಣವಾಗಿದೆ. ಆದರೆ, ಮಿದುಳು ಯಾವುದೇ ಕೆಲಸ ಮಾಡುತ್ತಿಲ್ಲ. ಸಂಪೂರ್ಣ ನಿಷ್ಕ್ರಿಯವಾಗಿದೆ. ಇಂಥ ಸ್ಥಿತಿಯಿಂದ ರೋಗಿ ಗುಣಮುಖವಾದ ಉದಾಹರಣೆಗಳೇ ಇಲ್ಲ’ ಎಂದು ವೈದ್ಯ ಅರುಣ್ ನಾಯಕ್ ಸುದ್ದಿಗಾರರಿಗೆ ಹೇಳಿದರು.

‘ಜೀವರಕ್ಷಕದ ನೆರವಿನಿಂದ ವಿಜಯ್ ಉಸಿರಾಡುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಮುಂದುವರಿಸಲಾಗಿದೆ. ಮಿದುಳು ನಿಷ್ಕ್ರಿಯವಾಗಿರುವ ಬಗ್ಗೆ ಕುಟುಂಬಸ್ಥರಿಗೆ ತಿಳಿಸಲಾಗಿದ್ದು, ಅಂಗಾಂಗ ದಾನ ಮಾಡಲು ಅವರು ಇಚ್ಛಿಸಿದ್ದಾರೆ. ನಿಯಮದ ಪ್ರಕಾರ ಮಿದುಳಿನ ಕೆಲ ಪರೀಕ್ಷೆ ಮಾಡುತ್ತಿದ್ದೇವೆ’ ಎಂದೂ ತಿಳಿಸಿದರು.

‘ಮಿದುಳು ನಿಷ್ಕ್ರಿಯವಾದರೆ ಸಾವುಎಂದು ತೀರ್ಮಾನಿಸಲಾಗದು. ಯಾವುದಾದರೂ ಅಂಗಾಂಗ ತೆಗೆದು ಬೇರೆಯವರಿಗೆ ಕಸಿ ಮಾಡಿದರೆ, ಅವಾಗಲೇ ಅದುಸಾವು ಎನ್ನಬಹುದು. ಆಕಸ್ಮಾತ್ ಅಂಗಾಂಗ ತೆಗೆಯದಿದ್ದರೆ, ವ್ಯಕ್ತಿ ಹಾಗೇ ಇರುತ್ತಾರೆ. ಹೃದಯ ಕೆಲಸ ನಿಂತ ನಂತರ ಸಾವು ಸಂಭವಿಸುತ್ತದೆ’ ಎಂದರು.

ಸಮಾಜಕ್ಕಾಗಿ ಅಂಗಾಂಗ ದಾನ: ‘ಅಣ್ಣನ ಮಿದುಳು ನಿಷ್ಕ್ರಿಯವಾಗಿದ್ದು, ಬದುಕುವುದು ಕಷ್ಟವೆಂದು ವೈದ್ಯರು ಹೇಳಿದ್ದಾರೆ. 12 ಗಂಟೆಗಳ ನಂತರ ಅಂಗಾಂಗಗಳನ್ನೂ ತೆಗೆದುಕೊಳ್ಳಲು ಬರುವುದಿಲ್ಲವೆಂದು ತಿಳಿಸಿದ್ದಾರೆ. ಸಮಾಜದ ಒಳಿತಿಗಾಗಿ ಅಣ್ಣ ದುಡಿಯುತ್ತಿದ್ದರು. ಹೀಗಾಗಿ, ಅಂಗಾಂಗ ದಾನಕ್ಕೆ ಒಪ್ಪಿದ್ದೇವೆ’ ಎಂದು ವಿಜಯ್ ತಮ್ಮ ಸಿದ್ದೇಶ್‌ ಕುಮಾರ್ ತಿಳಿಸಿದರು.

‘ಅಂಗಾಂಗಗಳನ್ನು 10 ಜನರಿಗೆ ಕಸಿ ಮಾಡಬಹುದು’

‘ನಟ ಸಂಚಾರಿ ವಿಜಯ್ ಮಿದುಳು ನಿಷ್ಕ್ರಿಯ ಖಾತ್ರಿಗೆ ಸೋಮವಾರ ಮಧ್ಯಾಹ್ನ 12.25 ಹಾಗೂ ರಾತ್ರಿ 7.50ಕ್ಕೆ ಅಪ್ನಿಯಾ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ನಿಷ್ಕ್ರಿಯ ಎಂದು ಪಾಸಿಟಿವ್ ಫಲಿತಾಂಶ ಬಂದಿದೆ. ಹೀಗಾಗಿ, ಅಂಗಾಂಗ ಕಸಿ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿದೆ’ ಎಂದು ವೈದ್ಯ ಅರುಣ್ ನಾಯಕ್ ತಿಳಿಸಿದ್ದಾರೆ.

‘ಅಂಗಾಂಗ ದಾನ ಪ್ರಕ್ರಿಯೆಗಾಗಿ ಜೀವ ಸಾರ್ಥಕತೆ ಸಮಿತಿ ಕೆಲಸ ಮಾಡುತ್ತಿದೆ. ಪರಿಣಿತ ವೈದ್ಯರು ಸಮಿತಿಯಲ್ಲಿ ಇದ್ದಾರೆ. ವಿಜಯ್ ಅವರ ಅಂಗಾಂಗಗಳನ್ನೂ ಅಗತ್ಯವಿರುವವರಿಗೆ ಕಸಿ ಮಾಡಲು ಸಮಿತಿ ಅನುಮತಿ ನೀಡಲಿದೆ. ವಿಜಯ್ ಅಂಗಾಂಗಗಳನ್ನು 8 ರಿಂದ 10 ಜನರಿಗೆ ಕಸಿ ಮಾಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT