ಬೆಂಗಳೂರು: ‘ಕೇಂದ್ರ ಸರ್ಕಾರ ಎಂಬುದು ಅಸಂವಿಧಾನಿಕ ಪರಿಕಲ್ಪನೆ. ಅದು ಎಲ್ಲ ರಾಜ್ಯಗಳ ಪ್ರತಿನಿಧಿಯೇ ಹೊರತು, ರಾಜ್ಯಗಳ ಯಜಮಾನ ಅಲ್ಲ. ಅದನ್ನು ಭಾರತ ಸರ್ಕಾರ ಎಂದಷ್ಟೇ ಕರೆಯಬೇಕು’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಹೇಳಿದರು.
‘ಒಕ್ಕೂಟ ಉಳಿಸಿ ಆಂದೋಲನ’ವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಆಂದೋಲನ ಚಾಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಅಧಿಕಾರ ವಿಕೇಂದ್ರೀಕರಣ, ಸಮಾನತೆ ಮತ್ತು ಜಾತ್ಯತೀತ ಪರಿಕಲ್ಪನೆಗಳು ಸಂವಿಧಾನ ಮೂಲರಚನೆಯ ಭಾಗ ಮತ್ತು ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ಈಗಿನ ಭಾರತ ಸರ್ಕಾರ ಅದನ್ನು ಬದಲಿಸಲು ಹೊರಟಿದೆ’ ಎಂದು ಆರೋಪಿಸಿದರು.
‘ಭಾರತ ಸರ್ಕಾರವು ತನ್ನ ಅಧಿಕಾರದ ವ್ಯಾಪ್ತಿಯಲ್ಲಿ ಇಲ್ಲದೇ ಇದ್ದರೂ ಕೃಷಿ ಕಾನೂನುಗಳನ್ನು ರಚಿಸಿತ್ತು. ಶಿಕ್ಷಣ ನೀತಿಯನ್ನು ಬದಲಿಸಿತು. ಈ ಮೂಲಕ ರಾಜ್ಯಗಳ ಅಧಿಕಾರವನ್ನು ಕಸಿದುಕೊಂಡಿದೆ. ಒಕ್ಕೂಟ ವ್ಯವಸ್ಥೆಯ ಮೇಲೆ ನಡೆಸುತ್ತಿರುವ ದಾಳಿ ಇದು’ ಎಂದರು.
ಅಂಕಣಕಾರ ಎ.ನಾರಾಯಣ ಮಾತನಾಡಿ, ‘ಒಕ್ಕೂಟ ವ್ಯವಸ್ಥೆಯ ಪ್ರಧಾನ ಪಾಲುದಾರರಾದ ರಾಜ್ಯಗಳ ಮೇಲೆ ಕೇಂದ್ರ ನಡೆಸುತ್ತಿರುವ ಈ ದಾಳಿಯನ್ನು ಯುದ್ಧ ಎಂದೇ ಪರಿಭಾವಿಸಬೇಕಾಗುತ್ತದೆ. ಹಾಗೆ ಅಂದುಕೊಂಡರಷ್ಟೇ ಕೇಂದ್ರದ ವಿರುದ್ಧ ಪ್ರಬಲ ಹೋರಾಟ ಸಂಘಟಿಸಲು ಸಾಧ್ಯ’ ಎಂದರು.
ಸಭೆಯಲ್ಲಿ ರೈತ ಸಂಘ, ಕರ್ನಾಟಕ ಜನಶಕ್ತಿ, ಗೌರಿ ಲಂಕೇಶ್ ಟ್ರಸ್ಟ್‌ನ ಸದಸ್ಯರು, ಚಿಂತಕಿ ಬಿ.ಟಿ.ಲಲಿತಾ ನಾಯಕ್, ಸಾಹಿತಿಗಳಾದ ಬಂಜಗೆರೆ ಜಯಪ್ರಕಾಶ, ಎಸ್.ಜಿ.ಸಿದ್ದರಾಮಯ್ಯ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
‘ಮೋದಿ ನೇತೃತ್ವದ ಈಗಿನ ಸರ್ಕಾರ ಇಡೀ ಒಕ್ಕೂಟ ವ್ಯವಸ್ಥೆಯನ್ನೇ ನಾಶಮಾಡಲು ಹೊರಟಿದೆ. ಇದಕ್ಕಾಗಿ ರಾಜ್ಯಗಳ ಮೇಲೆ ಸಾಂಸ್ಕೃತಿಕ ದಬ್ಬಾಳಿಕೆ ನಡೆಸಲಾಗುತ್ತಿದೆ. ರಾಜ್ಯಗಳ ತೆರಿಗೆ ಪಾಲನ್ನು ತಡೆಹಿಡಿದು ಅವುಗಳ ಆರ್ಥಿಕತೆಯ ಕತ್ತುಹಿಸುಕಲಾಗುತ್ತಿದೆ. ರಾಜಭವನ ಮತ್ತು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಪ್ರಬಲ ಪ್ರತಿರೋಧ ಒಡ್ಡಬೇಕಿದೆ’ ಎಂದು ಕವಯತ್ರಿ ಕೆ.ಷರೀಫಾ ಅವರು ಸಭೆಯ ನಿರ್ಣಯವನ್ನು ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.