ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಐದು ವರ್ಷಗಳಿಗೆ ಎಸ್‌ಡಿಆರ್‌ಎಂಎಫ್‌ ಮೊತ್ತ ಗಣನೀಯವಾಗಿ ಹೆಚ್ಚಳ

Last Updated 19 ಫೆಬ್ರುವರಿ 2021, 17:04 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳಿಗೆ ಎಸ್‌ಡಿಆರ್‌ಎಂಎಫ್‌ (ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣಾ ನಿಧಿ) ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದೆ.

14 ನೇ ಹಣಕಾಸು ಆಯೋಗ ರಾಜ್ಯಕ್ಕೆ ₹300 ಕೋಟಿ ನಿಗದಿ ಮಾಡಿತ್ತು. 15ನೇ ಹಣಕಾಸು ಆಯೋಗ ಈ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ಶಿಫಾರಸು ಮಾಡಿದ್ದು, ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಅದರ ಅನ್ವಯ 2022ಕ್ಕೆ ₹1,054 ಕೋಟಿಗೆ ಹೆಚ್ಚಿಸಲಾಗಿದೆ. ಇದರಿಂದ ₹754 ಕೋಟಿ ಹೆಚ್ಚಾದಂತಾಗಿದೆ. 2023ಕ್ಕೆ ₹1,107 ಕೋಟಿ, 2024ಕ್ಕೆ ₹1,162 ಕೋಟಿ ಮತ್ತು 2025ಕ್ಕೆ ₹1,220 ಕೋಟಿ ಹಾಗೂ 2026 ಕ್ಕೆ ಆ ಮೊತ್ತ ₹1,281 ಕೋಟಿಗೆ ನಿಗದಿ ಮಾಡಲಾಗಿದೆ.

ಅಲ್ಲದೆ, ಎನ್‌ಡಿಆರ್‌ಎಫ್‌ ಅಡಿ ಸಾಮರ್ಥ್ಯವೃದ್ಧಿಗಾಗಿ ₹5,000 ಕೋಟಿ ಅನುದಾನ ನೀಡಲಾಗುವುದು. ಇದರಡಿ ರಾಜ್ಯದ ಅಗ್ನಿ ಶಾಮಕ ಸೇವೆಗಳನ್ನು ಆಧುನೀಕರಿಸಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಶೇ 10 ಹಣ ನೀಡಲು ಸೂಚಿಸಲಾಗಿದೆ.

ಎನ್‌ಡಿಆರ್‌ಎಫ್‌ ಮತ್ತು ಎನ್‌ಡಿಎಂಎಫ್‌ ಅಡಿ ನೀಡುವ ನೆರವಿಗೆ ರಾಜ್ಯ ಸರ್ಕಾರವೂ ಪಾಲನ್ನು ಸೇರಿಸಬೇಕು. ₹250 ಕೋಟಿವರೆಗೆ ನೆರವು ಪಡೆದರೆ ರಾಜ್ಯ ಶೇ 10, ₹500 ಕೋಟಿವರೆಗೆ ನೆರವು ಪಡೆದರೆ ಶೇ 20, ₹500 ಕೋಟಿ ಮತ್ತು ಮೇಲ್ಪಟ್ಟರೆ ರಾಜ್ಯ ಸರ್ಕಾರ ಶೇ 25 ರಷ್ಟು ಭರಿಸಬೇಕು. ರಾಜ್ಯಗಳು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದನ್ನು ತಡೆಯಲು ಮತ್ತು ಬೇಕಾಬಿಟ್ಟಿ ಬೇಡಿಕೆಗಳನ್ನು ಸಲ್ಲಿಸುವುದಕ್ಕೆ ಕಡಿವಾಣ ಹಾಕಲು ಈ ವಿಧಾನ ಅನುಸರಿಸಲು 15 ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಎರಡು ಹಂತಗಳ ನಷ್ಟ ಅಂದಾಜು:

ಕೇಂದ್ರ ಅಧಿಕಾರಿಗಳ ತಂಡ ಎರಡು ಬಾರಿ ನಷ್ಟ ಅಂದಾಜು ಮಾಡಲು ರಾಜ್ಯಗಳಿಗೆ ಭೇಟಿ ನೀಡುತ್ತವೆ. ನೈಸರ್ಗಿಕ ವಿಕೋಪದ ಸಂದರ್ಭ ಮತ್ತು ವಿಕೋಪದ ಬಳಿಕ ಪರಿಹಾರ ಕಾರ್ಯಕೈಗೊಳ್ಳುವ ಸಂದರ್ಭದಲ್ಲಿ ಭೇಟಿ ನೀಡಲಿದೆ. ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಮನವಿ ಸಲ್ಲಿಸುವುದಕ್ಕೆ ಮೊದಲು ವೀಕ್ಷಣೆ ನಡೆಸಲಾಗಿದೆ. ಎರಡನೇ ಬಾರಿ ಅಂದರೆ ಸರ್ಕಾರ ಮನವಿ ಸಲ್ಲಿಸಿದ ಬಳಿಕ ಸಮಗ್ರವಾಗಿ ನಷ್ಟವನ್ನು ಅಂದಾಜು ಮಾಡಲು ಭೇಟಿ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT