ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ ವರದಿ ಸ್ವೀಕಾರಕ್ಕೆ ಮಠಾಧೀಶರ ಆಗ್ರಹ

Published 6 ಜನವರಿ 2024, 16:19 IST
Last Updated 6 ಜನವರಿ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ (ಜಾತಿಗಣತಿ) ವರದಿಯನ್ನು ತ್ವರಿತವಾಗಿ ಸ್ವೀಕರಿಸುವಂತೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿತು.

ಒಕ್ಕೂಟದ ಅಧ್ಯಕ್ಷರೂ ಆಗಿರುವ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದ ನಿಯೋಗ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿ ಮಾಡಿತು. ನಿಯೋಗದಲ್ಲಿ ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ನಿಯೋಗದಲ್ಲಿದ್ದರು.

‘ಬಲಾಢ್ಯ ಜಾತಿಗಳ ನಾಯಕರು ಜಾತಿ ಜನಗಣತಿ ವರದಿ ಸಲ್ಲಿಕೆಯಾಗದಂತೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು. ಹಿಂದುಳಿದ ವರ್ಗಗಳ ಆಯೊಗದಿಂದ ವರದಿಯನ್ನು ಸ್ವೀಕರಿಸಿ, ಅದರಲ್ಲಿನ ಶಿಫಾರಸುಗಳನ್ನು ಆದಷ್ಟು ಬೇಗ ಅನುಷ್ಠಾನಕ್ಕೆ ತರಬೇಕು’ ಎಂದು ನಿಯೋಗ ಒತ್ತಾಯಿಸಿತು.

‘ಎಚ್‌. ಕಾಂತರಾಜ ನೇತೃತ್ವದ ಆಯೋಗ ನಡೆಸಿರುವ ಸಮೀಕ್ಷೆ ಸರಿ ಇದ್ದರೂ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಶೋಷಿತ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾದ ಸಾಮಾಜಿಕ ನ್ಯಾಯ ದೊರಕುತ್ತದೆ ಎಂಬ ಅಸೂಯೆ ಬಲಾಢ್ಯ ಸಮುದಾಯಗಳಲ್ಲಿರುವುದೇ ಇದಕ್ಕೆ ಕಾರಣ’ ಎಂದು ಮಠಾಧೀಶರು ದೂರಿದರು.

ಬೇಡಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗದ ಅವಧಿಯನ್ನು ವಿಸ್ತರಿಸಲಾಗಿದೆ. ಕಾಂತರಾಜ ನೇತೃತ್ವದ ಆಯೋಗದ ವರದಿಯನ್ನೇ ಈಗ ಸಲ್ಲಿಸಲಾಗದು ಎಂದು ಈಗಿನ ಆಯೋಗ ತಿಳಿಸಿದೆ. ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯಲಾಗುವುದು’ ಎಂದರು.

ಹಿಂದುಳಿದ ಮತ್ತು ದಲಿತ ಸಮುದಾಯಗಳ ಮಠಗಳಿಗೆ ಬೆಂಗಳೂರಿನಲ್ಲಿ ಜಮೀನು ಮಂಜೂರು ಮಾಡುವಂತೆ ಮಠಾಧೀಶರು ಮನವಿ ಮಾಡಿದರು. ಈ ಸಂಬಂಧ ತಹಶೀಲ್ದಾರ್‌ಗಳಿಂದ ವರದಿ ಪಡೆದು ಸಲ್ಲಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿಯವರು ದೂರವಾಣಿ ಮೂಲಕ ನಿರ್ದೇಶನ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ. ದಯಾನಂದ ಭೇಟಿ ವೇಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT