ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಯೋಜನೆ: ಶತದಿನದಲ್ಲಿ 62 ಕೋಟಿ ಮಹಿಳೆಯರ ಪ್ರಯಾಣ– ವಿಶೇಷ ವರದಿ

ಶಕ್ತಿ ಯೋಜನೆಯಡಿ ಒಟ್ಟು ಟಿಕೆಟ್‌ ಮೌಲ್ಯ ₹1,442 ಕೋಟಿ
Published 22 ಸೆಪ್ಟೆಂಬರ್ 2023, 0:46 IST
Last Updated 22 ಸೆಪ್ಟೆಂಬರ್ 2023, 0:46 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ ಯೋಜನೆ’ ನೂರು ದಿನ ಪೂರೈಸಿದ್ದು, ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಬರೋಬ್ಬರಿ 62 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.

ಜೂನ್‌ 11ರಿಂದ ಸೆಪ್ಟೆಂಬರ್‌ 18ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್‌.ಆರ್‌.ಟಿ.ಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ) ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಒಟ್ಟು ಟಿಕೆಟ್‌ ಮೌಲ್ಯ ₹1,442 ಕೋಟಿ.

ಜೂನ್‌ನಲ್ಲಿ 10.54 ಕೋಟಿ ಮಹಿಳಾ ಪ್ರಯಾಣಿಕರಿಂದ ₹248 ಕೋಟಿ, ಜುಲೈನಲ್ಲಿ 19.63 ಕೋಟಿ ಮಹಿಳಾ ಪ್ರಯಾಣಿಕರಿಂದ ₹453 ಕೋಟಿ ಮತ್ತು ಆಗಸ್ಟ್‌ನಲ್ಲಿ ₹20.03 ಕೋಟಿ ಮಹಿಳಾ ಪ್ರಯಾಣಿಕರಿಂದ ₹459 ಕೋಟಿ ಟಿಕೆಟ್‌ ಮೌಲ್ಯವನ್ನು ಅಂದಾಜಿಸಲಾಗಿದೆ.

ಪ್ರತಿದಿನ ₹73 ಲಕ್ಷ ಆದಾಯ

‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದಲ್ಲಿ ಶಕ್ತಿ ಯೋಜನೆಗೂ ಮುನ್ನ ಪ್ರತಿ ದಿನ ಸರಾಸರಿ ₹55 ಲಕ್ಷ ಬಂದರೆ, ಯೋಜನೆ ಜಾರಿಯಾದ ಬಳಿಕ ಸರಾಸರಿ ₹73 ಲಕ್ಷ ಆದಾಯ ಬರುತ್ತಿದೆ. ಸಮರ್ಪಕ ಸಾರಿಗೆಗಾಗಿ 13 ಅಂತರರಾಜ್ಯ ಬಸ್‌ ಮತ್ತು 24 ವೇಗದೂತ ಬಸ್‌ಗಳನ್ನು ಮರುಹೊಂದಾಣಿಕೆ ಮಾಡಿ 172 ಸರತಿಗಳನ್ನು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಪರಿಷ್ಕರಿಸಿ, ಅನುಕೂಲ ಕಲ್ಪಿಸಿದ್ದೇವೆ’ ಎಂದು ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ವಿ.ಎಂ ‘‍ಪ್ರಜಾವಾಣಿ’ಗೆ ತಿಳಿಸಿದರು.

₹384 ಕೋಟಿ ಬಾಕಿ

‘ಶಕ್ತಿ ಯೋಜನೆಯಡಿ ಜೂನ್‌ 23ರಿಂದ ಆಗಸ್ಟ್‌ 23ರವರೆಗೆ ನಾಲ್ಕು ಸಾರಿಗೆ ನಿಗಮಗಳಿಂದ ರಾಜ್ಯ ಸರ್ಕಾರಕ್ಕೆ  ₹1,168 ಕೋಟಿ ಮರುಪಾವತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈವರೆಗೆ ₹784 ಕೋಟಿ ಬಿಡುಗಡೆಯಾಗಿದ್ದು, ಬಾಕಿ ₹384 ಕೋಟಿ ಬರಬೇಕಿದೆ’ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ದುಡಿಮೆಗಾಗಿ ನಿತ್ಯ ಬಸ್‌ಗಳಲ್ಲಿ ಸಂಚರಿಸುವ ಕಾರ್ಮಿಕ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯದಿಂದ ಅನುಕೂಲವಾಗಿದೆ. ಮಹಿಳಾ ಸಬಲೀಕರಣಕ್ಕೆ ಈ ಯೋಜನೆ ‘ಶಕ್ತಿ’ ತುಂಬಿದೆ

– ನೀಲಾ ಮಠಪತಿ ಹಾವೇರಿ

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಪಯುಕ್ತವಾಗಿದೆ. ವಿರೋಧ ಪಕ್ಷಗಳ ಟೀಕೆಗಳನ್ನು ಮೀರಿ ಈ ಯೋಜನೆ ಯಶಸ್ವಿಯಾಗಿ ನೂರು ದಿನ ಪೂರೈಸಿದೆ.

– ರಾಮಲಿಂಗಾರೆಡ್ಡಿ ಸಾರಿಗೆ ಸಚಿವ

ನಿಗಮವಾರು ಮಹಿಳಾ ಪ್ರಯಾಣಿಕರು ಮತ್ತು ಟಿಕೆಟ್‌ ಮೌಲ್ಯ (ಜೂನ್‌ 11ರಿಂದ ಸೆಪ್ಟೆಂಬರ್ 18ರವರೆಗೆ–₹ಕೋಟಿಗಳಲ್ಲಿ) ನಿಗಮ;ಮಹಿಳಾ ಪ್ರಯಾಣಿಕರು;ಟಿಕೆಟ್‌ ಮೌಲ್ಯ ಕೆ.ಎಸ್‌.ಆರ್‌.ಟಿ.ಸಿ;18.47; ₹536 ಬಿ.ಎಂ.ಟಿ.ಸಿ;20.53;₹261 ವಾಯವ್ಯ ಕರ್ನಾಟಕ ಸಾರಿಗೆ;14.44;₹365 ಕಲ್ಯಾಣ ಕರ್ನಾಟಕ ಸಾರಿಗೆ;8.53;₹279

ಶಕ್ತಿ ಯೋಜನೆ: ಅನುದಾನದ ವಿವರ (ಜೂನ್‌ 23ರಿಂದ ಆಗಸ್ಟ್‌ 23ರವರೆಗೆ– ₹ ಕೋಟಿಗಳಲ್ಲಿ) ನಿಗಮ; ಸರ್ಕಾರಕ್ಕೆ ಬೇಡಿಕೆ ಮೊತ್ತ; ಬಿಡುಗೊಳಿಸಿದ ಮೊತ್ತ; ಒಟ್ಟಾರೆ ಕೊರತೆ ಕೆ.ಎಸ್‌.ಆರ್‌.ಟಿ.ಸಿ;442;294;148 ಬಿ.ಎಂ.ಟಿ.ಸಿ;211;140;71 ವಾಯವ್ಯ ಕರ್ನಾಟಕ ಸಾರಿಗೆ;292;201;91 ಕಲ್ಯಾಣ ಕರ್ನಾಟಕ ಸಾರಿಗೆ;223;149;74 ಒಟ್ಟು:1168;784;384

ಸಮಸ್ಯೆಗಳೆಲ್ಲ ನೀಗಿವೆ

ರಾಮಲಿಂಗಾರೆಡ್ಡಿ ಬೆಂಗಳೂರು: ‘ಈ ಯೋಜನೆ ಆರಂಭಿಸುವ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದವು. ಮುಖ್ಯವಾಗಿ ಚಾಲಕರು ಮತ್ತು ನಿರ್ವಾಹಕರ ಕೊರತೆ ಇತ್ತು. ಬಸ್ಸುಗಳ ಸಂಖ್ಯೆಯೂ ಕಡಿಮೆ ಇತ್ತು. ಈ ಸಮಸ್ಯೆಗಳನ್ನು ನಿಭಾಯಿಸಿಕೊಳ್ಳುವ ಮೂಲಕ ಯೋಜನೆಯನ್ನೂ ಯಶಸ್ವಿಗೊಳಿಸಿದ್ದೇವೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿವರಿಸಿದರು. ‘ಸಿಬ್ಬಂದಿ ಕೊರತೆ ನೀಗಿಸಲು ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. 5000 ಬಸ್ಸುಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಇವೆಲ್ಲದರ ಮಧ್ಯೆಯೂ ನಮ್ಮ ಸಾರಿಗೆ ಸಂಸ್ಥೆಗಳಿಗೆ 25 ಪ್ರಶಸ್ತಿಗಳು ಬಂದಿವೆ. ವಿರೋಧ ಪಕ್ಷಗಳೂ ಈ ಯೋಜನೆ ಯಶಸ್ವಿ ಆಗುವುದಿಲ್ಲ ಎಂದು ಕಾಲೆಳೆದಿದ್ದವು. ಈ ಯೋಜನೆಗಳನ್ನು ಬಳಸಿಕೊಂಡು ಮಹಿಳೆಯರು ಹಲವು ಧಾರ್ಮಿಕ ಮತ್ತು ಪ್ರವಾಸಿ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಸ್ರೀಸಬಲೀಕರಣಕ್ಕೆ ಇದೊಂದು ಉತ್ತಮ ಯೋಜನೆ’ ಎಂದು ಹೇಳಿದರು. ಬವಣೆಯೇ ಪ್ರೇರಕ ಶಕ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಎಕ್ಸ್‌’ ಮೂಲಕ 100 ದಿನಗಳು ತುಂಬಿದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ‘ಉಜ್ವಲ ಭವಿಷ್ಯದ ಕನಸುಕಟ್ಟಿಕೊಂಡು ಶಾಲೆಗೆ ಹೋಗುವ ಪ್ರತಿ ಹೆಣ್ಣು ಮಗಳು ಕುಟುಂಬದ ಹೊಣೆಯನ್ನು ತನ್ನ ಹೆಗಲ ಮೇಲೆ ಹೊತ್ತು ನಿತ್ಯದ ದುಡಿಮೆಗೆ ತೆರಳುವ ನಾಡಿನ ಅಕ್ಕ– ತಂಗಿಯರು ವೈದ್ಯಕೀಯ ಚಿಕಿತ್ಸೆಗಾಗಿ ಪ್ರಯಾಣ ಬೆಳೆಸುವ ಬಡ ತಾಯಂದಿರ ಬದುಕಿನ ಬವಣೆ ನಮ್ಮ ಶಕ್ತಿ ಯೋಜನೆಯ ಪ್ರೇರಕ ಶಕ್ತಿ’ ಎಂದು ಅವರು ಹೇಳಿದ್ದಾರೆ. ‘ಶಕ್ತಿ ಯೋಜನೆ ಜಾರಿಗೊಂಡ ಈ 100 ದಿನಗಳಲ್ಲಿ ಅಸಂಖ್ಯ ತಾಯಂದಿರಲ್ಲಿ ನೆಮ್ಮದಿಯ ನಿಟ್ಟುಸಿರಿಗೆ ಲಕ್ಷಾಂತರ ವಿದ್ಯಾರ್ಥಿನಿಯರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ ಎಂಬುದು ಯೋಜನೆ ಜಾರಿಗೆ ಕೊಟ್ಟ ನನಗೆ ಅತ್ಯಂತ ಖುಷಿಯ ಸಂಗತಿ’ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT