ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರೂರು ಗುಡ್ಡ ಕುಸಿತ; ಪತ್ತೆಯಾಗದ ಮೂವರು: ಸರ್ಕಾರ

Published 5 ಆಗಸ್ಟ್ 2024, 16:19 IST
Last Updated 5 ಆಗಸ್ಟ್ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ‘ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-66ರ ಅಂಚಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ಪ್ರಕರಣದಲ್ಲಿ; ಮಣ್ಣಿನಡಿ ಸಿಲುಕಿದ್ದ 11 ಜನರ ಪೈಕಿ 8 ಜನರ ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆಯಲಾಗಿದ್ದು, ಇನ್ನೂ ಮೂವರನ್ನು ಪತ್ತೆ ಮಾಡಬೇಕಿದೆ. ಶವಗಳ ಶೋಧವೂ ಸೇರಿದಂತೆ ಎಲ್ಲ ಬಗೆಯ ರಕ್ಷಣಾ ಕಾರ್ಯ ಮುಂದುವರಿದಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ ಹೈಕೋರ್ಟ್‌ ವಕೀಲ ಶಿಜಿ ಮಲಯಾಳಿ ಹಾಗೂ ನವದೆಹಲಿಯ ಕೆ.ಆರ್.ಸುಭಾಷ್‌ ಚಂದ್ರನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ (ಎಜಿ) ಕೆ.ಶಶಿಕಿರಣ ಶೆಟ್ಟಿ, ಜುಲೈ 16ರಿಂದ ಜುಲೈ 31ರವರೆಗೆ ಕೈಗೊಂಡ ರಕ್ಷಣಾ ಕಾರ್ಯಚರಣೆಯ ಪ್ರತಿದಿನದ ಮಾಹಿತಿಯನ್ನು ನ್ಯಾಯಪೀಠಕ್ಕೆ ಲಿಖಿತ ರೂಪದಲ್ಲಿ ಸಲ್ಲಿಸಿದರು.

‘ಎನ್‌ಡಿಆರ್‌ಎಫ್ ತಂಡದ 31, ಎಸ್‌ಡಿಆರ್‌ಎಫ್ ತಂಡದ 42, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ತಂಡದ 26, ನೌಕಾ ಪಡೆಯ 12, ಭಾರತೀಯ ಸೇನೆಯ ವಿಪತ್ತು ನಿರ್ವಹಣಾ ತಂಡದ 60 ಮಂದಿಯ ಜತೆ, ಭಾರತೀಯ ಕರಾವಳಿ ರಕ್ಷಣಾ ಪಡೆ ಕಾರ್ಯಚರಣೆಯಲ್ಲಿ ತೊಡಗಿಸಿದೆ’ ಎಂದು ಶಶಿಕಿರಣ ಶೆಟ್ಟಿ ತಿಳಿಸಿದರು.

ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್, ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ರಕ್ಷಣೆ ಮತ್ತು ಪರಿಹಾರ ಕಾರ್ಯ ಮುಂದುವರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಸಲ್ಲಿಸಿರುವ ವರದಿ ಸಮಾಧಾನ ತಂದಿಲ್ಲ ಎಂದಾದರೆ ಅದಕ್ಕೆ ಆಕ್ಷೇಪಣೆ ಸಲ್ಲಿಸಿ’ ಎಂದು ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT