ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌: ದೇವರ ಹೆಸರಿನಲ್ಲಿ ಲೂಟಿ ಮಾಡಿದವರಿಗೆ ಶಿಕ್ಷೆ– ತಂಗಡಗಿ

ಪರಶುರಾಮ ಥೀಂ ಪಾರ್ಕ್‌ ಅವ್ಯವಹಾರ ಪ್ರಕರಣದ ಚರ್ಚೆ ಗದ್ದಲ
Published 13 ಫೆಬ್ರುವರಿ 2024, 16:15 IST
Last Updated 13 ಫೆಬ್ರುವರಿ 2024, 16:15 IST
ಅಕ್ಷರ ಗಾತ್ರ

ಬೆಂಗಳೂರು: ಉಡುಪಿ ಜಿಲ್ಲೆಯ ಪರಶುರಾಮ ಥೀಂ ಪಾರ್ಕ್‌ ಅವ್ಯವಹಾರ ಪ್ರಕರಣ ಕುರಿತು ಸರ್ಕಾರದ ವಿರುದ್ಧವೇ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್‌ ಮಾಡಿದ ಆರೋಪಕ್ಕೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ನಕ್ಕಿದ್ದು ಬಿಜೆಪಿ ಸದಸ್ಯರನ್ನು ಕೆರಳಿಸಿತು. ಪರಿಷತ್‌ನಲ್ಲಿ ಗದ್ದಲಕ್ಕೆ ನಾಂದಿ ಹಾಡಿತು.

‘ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರ ನೀಡಿದ ತಂಗಡಗಿ, ಉಡುಪಿಯ ಎರ್ಲಪಾಡಿ ಗ್ರಾಮ ಪಂಚಾಯಿತಿಯ ಬೈಲೂರು ಉಮಿಕಲ್‌ ಬೆಟ್ಟದಲ್ಲಿ ಥೀಂ ಪಾರ್ಕ್‌ ನಿರ್ಮಾಣವಾಗಿದ್ದು ಬಿಜೆಪಿ ಅವಧಿಯಲ್ಲಿ. ದೈವ ಭಕ್ತಿಗೆ, ದೇಗುಲಗಳಿಗೆ ಹೆಸರಾದ, ದೇವರನ್ನು ತಲೆಯ ಮೇಲೆ ಹೊತ್ತುಕೊಳ್ಳುವ ಜನರಿರುವ ಜಿಲ್ಲೆಯಲ್ಲೇ ದೇವರ ಹೆಸರಿನಲ್ಲಿ ವಂಚನೆ ನಡೆದಿದೆ. ಪರಶುರಾಮನ ಅರ್ಧ ಮೂರ್ತಿಯನ್ನು ಸಮುದ್ರಕ್ಕೆ ಎಸೆಯಲಾಗಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗ ತನಿಖೆ ನಡೆಸಿದೆ. ಶೀಘ್ರ ವರದಿ ನೀಡಲಿದೆ. ಸಿಐಡಿಯೂ ಪ್ರತ್ಯೇಕ ತನಿಖೆ ಆರಂಭಿಸಿದೆ. ದೇವರ ಹೆಸರಲ್ಲೂ ಲೂಟಿ ಮಾಡಿವರಿಗೆ ಶಿಕ್ಷೆಯಾಗಲಿದೆ’ ಎಂದರು.

‘ದೇವರನ್ನು ತಲೆಯ ಮೇಲೆ ಹೊತ್ತುಕೊಳ್ಳುವ ಬಗ್ಗೆ ನೀವು ಹೇಳುವ ಅಗತ್ಯವಿಲ್ಲ. ನೀವು ತೀರ್ಪು ನೀಡಬೇಡಿ, ಮೊದಲು ತನಿಖೆ ಮಾಡಿಸಿ’ ಎಂದು ಬಿಜೆಪಿಯ ಭಾರತಿ ಶೆಟ್ಟಿ, ಕೇಶವ ಪ್ರಸಾದ್, ಪ್ರತಾಪಸಿಂಹ ನಾಯಕ್, ಜೆಡಿಎಸ್‌ನ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.

‘ಕುಂಬಳ ಕಾಯಿ ಕಳ್ಳ ಎಂದರೆ ನೀವೇಕೆ ಹೆಗಲು ಮುಟ್ಟಿಕೊಳ್ಳುವಿರಿ. ದೇವರ ಹೆಸರಲ್ಲಿ ಲೂಟಿ ಮಾಡಿದವರು ಅನುಭವಿಸುತ್ತಾರೆ ಬಿಡಿ’ ಎಂದು ತಂಗಡಗಿ ಕಾಲೆಳೆದರು. ಸಭಾಪತಿ ಬಸವರಾಜ್‌ ಹೊರಟ್ಟಿ ಮಧ್ಯ ಪ್ರವೇಶಿಸಿ, ಚರ್ಚೆಯನ್ನು ಮುಕ್ತಾಯಗೊಳಿಸಿದರು.

ಹೊರಟ್ಟಿಗೆ ಸದನದ ಗೌರವ:

ಒಂದೇ ಕ್ಷೇತ್ರದಿಂದ ಸತತವಾಗಿ ಎಂಟು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾದ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಹೆಸರು ಲಿಮ್ಕಾ ವಿಶ್ವ ದಾಖಲೆ ಪುಸ್ತಕಕ್ಕೆ ಸೇರಿರುವುದಕ್ಕೆ ಎಲ್ಲ ಸದಸ್ಯರು ನುಡಿ ಗೌರವ ಸಲ್ಲಿಸಿದರು. ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಮಂಡಿಸಿದ ವಿಷಯ ಕುರಿತು ಎರಡೂವರೆ ಗಂಟೆ ಚರ್ಚೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT