ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿಗಳ ಅನುಷ್ಠಾನಕ್ಕೆ ಹೋರಾಡಿ: ಜೆಡಿಎಸ್‌ ಮುಖಂಡರಿಗೆ ಎಚ್‌ಡಿಕೆ ಸೂಚನೆ

Published 26 ಮೇ 2023, 4:54 IST
Last Updated 26 ಮೇ 2023, 4:54 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಈಗ ಷರತ್ತು ವಿಧಿಸಲು ಹೊರಟಿದೆ. ಈಗ ನಾವು ಜನರ ಜತೆ ನಿಲ್ಲಬೇಕು. ಜನರೇ ಆಂದೋಲನಕ್ಕೆ ಧುಮುಕುವಂತೆ ಮಾಡಬೇಕು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪಕ್ಷದ ಮುಖಂಡರಿಗೆ ಸೂಚಿಸಿದರು.

ಈ ಚುನಾವಣೆಯಲ್ಲಿ ಜೆಡಿಎಸ್‌ ಸೋಲಿನ ಕುರಿತು ಪರಾಮರ್ಶೆ ನಡೆಸಲು ನಗರದ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು. ಜೆಡಿಎಸ್‌ನ ನೂತನ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಪರಾಜಿತ ಅಭ್ಯರ್ಥಿಗಳು ಮತ್ತು ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರು ಸಭೆಯಲ್ಲಿದ್ದರು.

‘ನನಗೂ ಉಚಿತ, ನಿನಗೂ ಉಚಿತ ಎಂದು ಕಾಂಗ್ರೆಸ್‌ ನಾಯಕರು ಚುನಾವಣಾ ಪ್ರಚಾರದಲ್ಲಿ ಭರವಸೆ ನೀಡುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಗ ಹೇಳಿದ್ದೇನು? ಈಗ ಮಾಡುತ್ತಿರುವುದೇನು? ಇದನ್ನೇ ನಾವು ಜನರ ಮುಂದಿಡಬೇಕು’ ಎಂದರು.

ಕಾಂಗ್ರೆಸ್‌ನಿಂದ ಕುತಂತ್ರ: ‘ಬಿಜೆಪಿಯಿಂದ ನಲುಗಿದ ಒಂದು ಸಮುದಾಯದ ಪರವಾಗಿ ನಾವು ಧ್ವನಿ ಎತ್ತಿದೆವು. ಅಚಲವಾಗಿ ಬೆಂಬಲ ಕೊಟ್ಟು, ಬಿಜೆಪಿ ಸರಕಾರ ತೊಂದರೆ ನೀಡಿದಾಗ ಹೆಜ್ಜೆ ಹೆಜ್ಜೆಗೂ ಧೈರ್ಯ ತುಂಬಿದ್ದೆವು. ಆದರೆ ಅವರು ನಮ್ಮ ಪಕ್ಷದ ಪರವಾಗಿ ನಿಲ್ಲಲ್ಲಿಲ್ಲ’ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪಕ್ಷದ ಅಭ್ಯರ್ಥಿಗಳಿಗೆ ಅಗತ್ಯ ಪ್ರಮಾಣದ ಆರ್ಥಿಕ ಶಕ್ತಿ ನೀಡಲು ಸಾಧ್ಯವಾಗಲಿಲ್ಲ. ಕೆಲವು ಜಿಲ್ಲಾ ಘಟಕಗಳ ಅಧ್ಯಕ್ಷರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಲಿಲ್ಲ. ಕೆಲವೆಡೆ ಅಭ್ಯರ್ಥಿಗಳೇ ನಾಮಪತ್ರ ಸಲ್ಲಿಸಿದ ಬಳಿಕ ಅನ್ಯ ಪಕ್ಷಗಳ ಅಭ್ಯರ್ಥಿಗಳ ಜತೆ ಶಾಮೀಲಾದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫಲಿತಾಂಶದಿಂದ ಧೈರ್ಯ ಕಳೆದುಕೊಳ್ಳಬೇಕಿಲ್ಲ. 1989ರಲ್ಲಿ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಎರಡು ಕ್ಷೇತ್ರಗಳಲ್ಲಿ ಸೋತಿದ್ದರು. ಆದರೆ, ನಂತರದ ಐದು ವರ್ಷಗಳಲ್ಲಿ ಅವರ ನೇತೃತ್ವದಲ್ಲೇ ಪೂರ್ಣ ಪ್ರಮಾಣದ ಸರ್ಕಾರ ಬಂತು. ಈಗಲೂ ಪಕ್ಷ ಬಲಪಡಿಸಲು ಸಾಧ್ಯವಿದೆ. ಮೈಮರೆಯದೆ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಸಭೆಯಲ್ಲಿದ್ದರು.

‘ಪಕ್ಷ ಉಳಿಸಲು ಬದ್ಧ‘

‘ಪಕ್ಷಕ್ಕಾಗಿ ಜೀವ ಸವೆಸಿದ್ದೇನೆ. ಕೊನೆಯ ಉಸಿರು ಇರುವವರೆಗೂ ಪಕ್ಷಕ್ಕಾಗಿ ಹೋರಾಡುತ್ತೇನೆ. ಈ ಪಕ್ಷವನ್ನು ಉಳಿಸಿಕೊಳ್ಳಲು ನಾನು ಬದ್ಧ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು. ‘ಸೋಲಿಗೆ ಕಾರಣಗಳನ್ನು ಹುಡುಕೋಣ. ಸೋತಾಗ ನಿರಾಶೆ ನೋವು ಸಹಜ. ನಾನು ಈ ಎಲ್ಲ ಹಂತಗಳನ್ನು ದಾಟಿಕೊಂಡು ಬಂದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT