‘ಅಧಿಕಾರದಲ್ಲಿದ್ದು ಹೋರಾಟ ಯಾಕೆ?’
‘ರಾಜ್ಯದ ನೆಲ ಜಲ ಹಿತಕ್ಕಾಗಿ ನಾವು ಬದ್ಧವಾಗಿದ್ದೇವೆ. ಅವರು ಅಧಿಕಾರದಲ್ಲಿ ಇರುವಾಗ ಹೋರಾಟ ಯಾಕೆ ಮಾಡಬೇಕು’ ಎಂದು ಎಚ್.ಡಿ. ದೇವೇಗೌಡರನ್ನು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್ ‘ಮೇಕೆದಾಟು ಯೋಜನೆಗೆ ಒಂದೇ ದಿನದಲ್ಲಿ ಸಹಿ ಹಾಕಿಸುವುದಾಗಿ ದೇವೇಗೌಡರು ಹೇಳಿದ್ದರು. ಮಹದಾಯಿ ವಿಚಾರವಾಗಿ ನಾವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು. ನೀರಾವರಿ ಯೋಜನೆಗಳ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ ನಮಗೆ ಅದರ ಅಗತ್ಯವಿಲ್ಲ. ಅವರಿಗೆ ರಾಜಕಾರಣ ಮಾಡಿ ರೂಢಿ ಇರಬಹುದು’ ಎಂದರು. ‘ಭದ್ರಾ ಮೇಲ್ದಂಡೆ ಯೋಜನೆಗೆ ₹ 5 ಸಾವಿರ ಕೋಟಿ ಘೋಷಣೆ ಮಾಡಿದ್ದೀರಿ. ಅದನ್ನು ಕೊಟ್ಟಿಲ್ಲ ಎಂದು ಸಂಸತ್ತಿನಲ್ಲಿ ಎಂದಾದರೂ ಪ್ರಶ್ನೆ ಮಾಡಿದ್ದಾರಾ? ದೇವೇಗೌಡರು ಕುಮಾರಸ್ವಾಮಿ ಕೇಂದ್ರ ಸಚಿವರು ಸಂಸದರು ಈ ಬಗ್ಗೆ ಧ್ವನಿ ಎತ್ತುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆ ಕೆಲಸದಲ್ಲೂ ವಿಫಲರಾಗಿದ್ದಾರೆ. ಮೊದಲು ಈ ಕೆಲಸ ಮಾಡಲಿ’ ಎಂದರು.