ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಪೂರ್ವಭಾವಿಯಾಗಿ ಮತಪಟ್ಟಿಯಲ್ಲಿನ ಭಾವಚಿತ್ರ ಮತ್ತು ಅಕ್ಷರ ದೋಷಗಳನ್ನು ಗುರುತಿಸುವ, ದಾಖಲೆಗಳನ್ನು ಪರಿಶೀಲಿಸುವ ಕೆಲಸವನ್ನು ಚುನಾವಣಾ ಆಯೋಗ ಆರಂಭಿಸಿದೆ.

ಆದರೆ, ಈ ಪ್ರಕ್ರಿಯೆಗೆ 10 ದಿನವಷ್ಟೇ ನೀಡಿರುವುದರಿಂದ, ತರಾತುರಿಯಲ್ಲಿ ಪರಿಶೀಲನೆ ಮತ್ತು ಪರಿಷ್ಕರಣೆ ನಡೆಯುತ್ತಿದೆ.

ಮತದಾರರ ಚೀಟಿ ಮತ್ತು ಪಟ್ಟಿಯಲ್ಲಿ ಚಿತ್ರಗಳು ದೋಷಪೂರಿತವಾಗಿದ್ದರೆ ಹಾಗೂ ಅಕ್ಷರ ದೋಷಗಳು ಇದ್ದರೆ ಅವುಗಳನ್ನು ಗುರುತಿಸಬೇಕು ಎಂದು ಭಾರತೀಯ ಚುನಾವಣಾ ಆಯೋಗವು ಡಿಸೆಂಬರ್ 15ರಂದು ಆದೇಶಿಸಿತ್ತು. ಅದರಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಡಿಸೆಂಬರ್ 19ರಂದು ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿತ್ತು.

ಎಸ್ಐಆರ್ ಪೂರ್ವಭಾವಿಯ ಈ ಹಂತದಲ್ಲಿ ಮೊದಲಿಗೆ ಮತದಾರರ ಪಟ್ಟಿಯಲ್ಲಿ ಇರುವ ದೋಷಗಳನ್ನು ಗುರುತಿಸಬೇಕಿದೆ. ಚಿತ್ರಗಳು ಅಗತ್ಯ ಅಳತೆಗಿಂತ ಕಡಿಮೆ ಇದ್ದರೆ, ಸ್ಪಷ್ಟವಾಗಿ ಇಲ್ಲದೇ ಇದ್ದರೆ, ಹೆಸರು ಮತ್ತು ಲಿಂಗ ಸರಿಯಾಗಿ ಇಲ್ಲದಿದ್ದರೆ, ಜನ್ಮ ದಿನಾಂಕ ಮತ್ತು ವಯಸ್ಸು ಹೊಂದಾಣಿಕೆ ಆಗದೇ ಇದ್ದರೆ, ಅಂತಹ ಮತದಾರರ ಚೀಟಿಗಳ ವಿವರವನ್ನು ವರ್ಗೀಕರಿಸಬೇಕು.

ಈ ಉದ್ದೇಶಕ್ಕಾಗಿ ಮತದಾರರ ಪಟ್ಟಿಯನ್ನು ಬಹುಬಣ್ಣದಲ್ಲಿ ಮುದ್ರಿಸಬೇಕು. ಇದಕ್ಕಾಗಿ, ಚುನಾವಣಾ ಆಯೋಗವು ಡಿಸೆಂಬರ್ 22ರಿಂದ ಜನವರಿ 1ರವರೆಗೆ ಕಾಲಾವಕಾಶ ನೀಡಿತ್ತು. ಆಯ್ದ ಐದು ಕಂಪನಿಗಳ ಮೂಲಕವೇ ಮುದ್ರಿಸಬೇಕು ಎಂದು ಸೂಚಿಸಿತ್ತು. ಆದರೆ, ರಾಜ್ಯದ ಅಷ್ಟೂ ಮತಗಟ್ಟೆಗಳ ಮತದಾರರ ಪಟ್ಟಿಯನ್ನು ಕಾಲಮಿತಿಯಲ್ಲಿ ಮುದ್ರಿಸಿಕೊಡಲು ಈ ಕಂಪನಿಗಳಿಗೆ ಸಾಧ್ಯವಾಗಿಲ್ಲ.

‘ನಮ್ಮ ಕ್ಷೇತ್ರಕ್ಕೆ ನಿಗದಿ ಮಾಡಿದ್ದ ಮುದ್ರಕರಿಂದ ಮತದಾರರ ಪಟ್ಟಿಯ ಬಣ್ಣದ ಪ್ರತಿ ಇನ್ನೂ ಬಂದಿಲ್ಲ. ಆದರೆ ಕೆಲಸ ವಿಳಂಬವಾಗಬಾರದು ಎಂಬ ಕಾರಣಕ್ಕೆ, ಇತರೆಡೆ ನಮ್ಮ ಸ್ವಂತ ದುಡ್ಡಿನಲ್ಲಿ ಮತದಾರರ ಪಟ್ಟಿಯನ್ನು ಮುದ್ರಿಸಿಕೊಂಡಿದ್ದೇವೆ’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಸಹಾಯಕ ಮತದಾರರ ನೋಂದಣಾಧಿಕಾರಿ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನವರಿ 1ಕ್ಕೆ ಮುದ್ರಣ ಪ್ರಕ್ರಿಯೆ ಮುಗಿದು, ಬಣ್ಣದ ಮತದಾರರ ಪಟ್ಟಿಗಳನ್ನು ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್ಒ) ವಿತರಿಸಬೇಕಿತ್ತು. ಮುದ್ರಣದ ಸಮಸ್ಯೆ ಕಾರಣಕ್ಕೆ ಬಿಎಲ್ಒಗಳಿಗೆ ಮತದಾರರ ಪಟ್ಟಿಯ ಬಹುಬಣ್ಣದ ಪ್ರತಿಯನ್ನು ನಿಗದಿತ ದಿನದಂದು ವಿತರಿಸಲು ಸಾಧ್ಯವಾಗಿಲ್ಲ. ಆದರೆ, ಕೆಲಸದ ಪ್ರಗತಿಯ ಬಗ್ಗೆ ವರದಿ ನೀಡಿ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಸೂಚನೆ ಬರುತ್ತಲೇ ಇದೆ’ ಎಂದು ಅವರು ವಿವರಿಸಿದರು.

‘ಈಗಾಗಲೇ ಬಹುಬಣ್ಣದ ಪ್ರತಿ ದೊರೆತಿರುವ ಬಿಎಲ್ಒಗಳು ದೋಷಪೂರಿತ ಚಿತ್ರಗಳನ್ನು ಗುರುತಿಸುವ ಕೆಲಸ ಆರಂಭಿಸಿದ್ದಾರೆ. ಆದರೆ ಕಡಿಮೆ ಕಾಲಾವಕಾಶದ ಕಾರಣಕ್ಕೆ ಪರಿಷ್ಕರಣೆಯ ನಂತರವೂ ದೋಷಗಳು ಉಳಿಯುತ್ತಿವೆ. ಇನ್ನು ಕೆಲವರು ದಾಖಲೆಗಳನ್ನು ಪರಿಶೀಲಿಸದೆಯೇ ಪರಿಷ್ಕರಣೆ ಮಾಡಿರುವುದು, ಮೇಲ್ವಿಚಾರಕರ ಹಂತದ ಪರಿಶೀಲನೆಯಲ್ಲಿ ಪತ್ತೆಯಾಗಿದೆ’ ಎಂದು ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರೊಬ್ಬರು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರ ಮೊಬೈಲ್ಗೆ ಕರೆ ಮಾಡಲಾಗಿತ್ತು. ಅವರು ಕರೆ ಸ್ವೀಕರಿಸಲಿಲ್ಲ.

‘ತರಾತುರಿಯಿಂದ ತೊಡಕು’

ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಗುರುತಿಸಿದ ನಂತರ ಸಂಬಂಧಿತ ಮತದಾರರ ಮನೆಗೆ ಭೇಟಿ ನೀಡಿ ದಾಖಲೆ ಪರಿಶೀಲಿಸುವ ಕೆಲಸ ಜನವರಿ 4ರಿಂದ ಆರಂಭವಾಗಬೇಕಿತ್ತು. ಆದರೆ ರಾಜ್ಯದ ಎಲ್ಲೆಡೆ ಆ ಕೆಲಸ ಇನ್ನೂ ಆರಂಭವಾಗಿಲ್ಲ. ಮತದಾರರ ಪಟ್ಟಿಯೇ ದೊರೆಯದಿರುವ ಕಾರಣಕ್ಕೆ ದೋಷ ಗುರುತಿಸುವ ಕೆಲಸ ಆಗಿಲ್ಲ. ಆದರೆ ‘ದಾಖಲೆ ಪರಿಶೀಲಿಸಿ ಪರಿಷ್ಕರಣೆಗೆ ನಮೂನೆ–8ನ್ನು ಸಿದ್ಧಪಡಿಸುವ ಕೆಲಸ ಜನವರಿ 11ರ ಒಳಗೆ ಮುಗಿಯಬೇಕು. ಅಂದೇ ಅಂತಿಮ ವರದಿಯನ್ನೂ ನೀಡಬೇಕು’ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸೂಚಿಸಿದೆ. ‘ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸದೇ ಇರುವ ಮತ್ತು ಪಾಲಿಸಲು ಸಾಧ್ಯವೇ ಇಲ್ಲದಷ್ಟು ಕಡಿಮೆ ಕಾಲಾವಕಾಶ ನೀಡಿರುವ ಕಾರಣಕ್ಕೆ ಪರಿಷ್ಕರಣೆಯ ಉದ್ದೇಶವೇ ಈಡೇರುವುದಿಲ್ಲ. ಬಹಳಷ್ಟು ಬಿಎಲ್ಒಗಳು ದಾಖಲೆ ಪರಿಶೀಲನೆ ಸಾಧ್ಯವಾಗದೆ ವರದಿ ಸಲ್ಲಿಸುತ್ತಿದ್ದಾರೆ. ತರಾತುರಿಯಲ್ಲಿ ನಡೆಸುತ್ತಿರುವ ಕಾರಣಕ್ಕೆ ಪ್ರಕ್ರಿಯೆಯ ಉದ್ದೇಶವೇ ಈಡೇರದಂತಾಗುತ್ತಿದೆ’ ಎಂದು ಮತದಾರರ ನೋಂದಣಿ ಆಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದರು.