ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bitcoin Scam: ಸಂದೀಪ್‌ ಪಾಟೀಲ ವಿಚಾರಣೆ

ಎಸ್‌ಐಟಿ ಮುಖ್ಯಸ್ಥ ಮನೀಶ್ ಕರ್ಬಿಕರ್ ನೇತೃತ್ವದಲ್ಲಿ ತನಿಖೆ ಚುರುಕು
Published 22 ಫೆಬ್ರುವರಿ 2024, 0:30 IST
Last Updated 22 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಟ್‌ಕಾಯಿನ್‌ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿಯ ವಿಶೇಷ ತನಿಖಾದಳದ (ಎಸ್‌ಐಟಿ) ಅಧಿಕಾರಿಗಳು ಕೆಎಸ್ಆರ್‌ಪಿ ಐಜಿಪಿ ಸಂದೀಪ್‌ ಪಾಟೀಲ ಅವರನ್ನು ಬುಧವಾರ ತೀವ್ರ ವಿಚಾರಣೆಗೆ ಒಳಪಡಿಸಿದರು.

ಎಸ್‌ಐಟಿ ನೋಟಿಸ್‌ ಜಾರಿ ಮಾಡಿದ್ದರಿಂದ ಮಧ್ಯಾಹ್ನ 3.30ಕ್ಕೆ ಸಿಐಡಿ ಕಚೇರಿಗೆ ಬಂದಿದ್ದ ಸಂದೀಪ್‌ ಪಾಟೀಲ ಅವರನ್ನು ಸಂಜೆ 6.30ರವರೆಗೆ ವಿಚಾರಣೆಗೆ ಒಳಪಡಿಸಲಾಯಿತು ಎಂದು ಮೂಲಗಳು ಹೇಳಿವೆ.

ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಪ್ರಕರಣದ ಎಸ್‌ಐಟಿ ಮುಖ್ಯಸ್ಥ ಮನೀಶ್ ಕರ್ಬಿಕರ್ ಅವರ ನೇತೃತ್ವದಲ್ಲಿ ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗೆ ಸಂದೀಪ್‌ ಪಾಟೀಲ ಉತ್ತರಿಸಿದರು ಎಂದು ಗೊತ್ತಾಗಿದೆ.

ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಜೊತೆ ಸೇರಿ ಅಕ್ರಮ ಎಸಗಿದ್ದ ಹಾಗೂ ಸಾಕ್ಷ್ಯ ನಾಶಪಡಿಸಿರುವ ಆರೋಪದಡಿ ಸಿಸಿಬಿ ತಾಂತ್ರಿಕ ವಿಭಾಗದ ಇನ್‌ಸ್ಪೆಕ್ಟರ್ ಡಿ.ಎಂ.ಪ್ರಶಾಂತ್‌ಬಾಬು ಹಾಗೂ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಜಿಸಿಐಡಿ ಟೆಕ್ನಾಲಜೀಸ್ ಕಂಪನಿಯ ಕಾರ್ಯ ನಿರ್ವಾಹಕ ಅಧಿಕಾರಿ ಸಂತೋಷ್‌ಕುಮಾರ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಜನವರಿಯಲ್ಲಿ ಬಂಧಿಸಿ, ವಿಚಾರಣೆ ನಡೆಸಿದ್ದರು. ಬಂಧಿತರು ನೀಡಿದ ಮಾಹಿತಿ ಆಧರಿಸಿ, ಸಂದೀಪ್‌ ಪಾಟೀಲ ಸೇರಿದಂತೆ ಹಲವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಬಿಟ್‌ಕಾಯಿನ್‌ ಅಕ್ರಮ ನಡೆದಾಗ ಸಂದೀಪ್‌ ಪಾಟೀಲ ಸಿಸಿಬಿ ಮುಖ್ಯಸ್ಥರಾಗಿದ್ದರು.

‘ಕರ್ತವ್ಯ ಲೋಪದ ಮಾಹಿತಿ ಇರಲಿಲ್ಲ’:

‘ಬಿಟ್‌ಕಾಯಿನ್ ಪ್ರಕರಣದ ತನಿಖೆಯಲ್ಲಿ ಲೋಪದೋಷಗಳು ಆಗಿಲ್ಲ. ತಾಂತ್ರಿಕ ತೊಡಕೂ ಆಗಿಲ್ಲ. ಪ್ರಕರಣದ ಕಿಂಗ್‌ಪಿನ್ ಶ್ರೀಕಿ ಹೇಳಿಕೆ ಆಧರಿಸಿ ಬಿಟ್‌ಕಾಯಿನ್‌ಗಳನ್ನು ವಶಕ್ಕೆ ಪಡೆದುಕೊಂಡು, ಸರ್ಕಾರದ ಸುಪರ್ದಿಗೆ ಅಂದೇ ನೀಡಲಾಗಿತ್ತು. ಬಂಧಿತರಾದ ಪ್ರಶಾಂತ್ ಬಾಬು, ಸಂತೋಷ್ ಜತೆ ಸೇರಿ ಎಸಗಿರುವ ಕರ್ತವ್ಯಲೋಪದ ಬಗ್ಗೆ ಮಾಹಿತಿ ಇರಲಿಲ್ಲವೆಂದು ತನಿಖಾಧಿಕಾರಿಗಳಿಗೆ ಸಂದೀಪ್‌ ವಿವರಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

2020ರಲ್ಲಿ ಡ್ರಗ್ಸ್‌ ಪ್ರಕರಣದಲ್ಲಿ ಸುಜಯ್ ಎಂಬ ಆರೋಪಿಯನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದರು. ತನಿಖೆಯಲ್ಲಿ ಈತ ಡಾರ್ಕ್‌ನೆಟ್‌ನಲ್ಲಿ ಬಿಟ್‌ಕಾಯಿನ್ ಮೂಲಕ ಡ್ರಗ್ಸ್‌ ಖರೀದಿಸಿರುವುದು ಗೊತ್ತಾಗಿತ್ತು. ಪ್ರಕರಣದ ಮೂಲ ಪತ್ತೆ ಹಚ್ಚಲು ಹೋದಾಗ ಬಿಟ್ ಕಾಯಿನ್ ಹಗರಣದ ಸೂತ್ರಧಾರ ಶ್ರೀಕಿ ಸಿಕ್ಕಿ ಬಿದ್ದಿದ್ದ. ಶ್ರೀಕಿ ತನ್ನ ಸಹಚರರ ಜೊತೆ ಸೇರಿ ಸರ್ಕಾರಿ ವೆಬ್‌ಸೈಟ್ ಸೇರಿದಂತೆ ಆನ್‌ಲೈನ್ ಗೇಮಿಂಗ್ ಆ್ಯಪ್ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ದೋಚಿದ್ದು ತನಿಖೆಯಿಂದ ಗೊತ್ತಾಗಿತ್ತು. ಇದೇ ಪ್ರಕರಣದಲ್ಲಿ ಕಾಟನ್‌ಪೇಟೆ, ಅಶೋಕನಗರ ಹಾಗೂ ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರತ್ಯೇಕವಾಗಿ ಮೂರು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವು ಸಾಕಷ್ಟು ತಿರುವು ಪಡೆದುಕೊಂಡ ಕಾರಣಕ್ಕೆ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿತ್ತು.

‘ಇನ್ನೂ ಕೆಲವು ಹಿರಿಯ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳು ಭಾಗಿಯಾಗಿರುವ ಅನುಮಾನವಿದೆ. ಬಂಧಿತರ ವಿಚಾರಣೆಯಲ್ಲಿ ಸಾಕ್ಷ್ಯಗಳು ಲಭಿಸಿದ್ದು, ಅವರಿಗೂ ನೋಟಿಸ್‌ ನೀಡಿ ವಿಚಾರಣೆಗೆ ಕರೆಸಲಾಗುವುದು ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT