ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಧಿಕಾರ ಧೋರಣೆಯ ಸರ್ಕಾರದ ವಿರುದ್ಧ ಜಾತ್ಯತೀತ ಶಕ್ತಿಗಳು ಒಗ್ಗೂಡಲಿ: ಯೆಚೂರಿ

Last Updated 28 ಜೂನ್ 2021, 21:41 IST
ಅಕ್ಷರ ಗಾತ್ರ

ಬೆಂಗಳೂರು: ‘ಆರ್.ಎಸ್.ಎಸ್ ನೇತೃತ್ವದ ಪ್ರಧಾನಿ ನರೇಂದ್ರ ಮೋದಿಯವರ ಸರ್ವಾಧಿಕಾರ ಸರ್ಕಾರವು ದೇಶವನ್ನು ಕತ್ತಲೆಯೆಡೆಗೆ ಕೊಂಡೊಯ್ಯಲು ನಡೆಸಿರುವ ಪ್ರಯತ್ನವನ್ನು ಸೋಲಿಸಿ ಬೆಳಕಿನ ಭಾರತವನ್ನು ಕಟ್ಟುವ ಕೆಲಸವನ್ನು ಎಲ್ಲ ಜಾತ್ಯತೀತ, ಪ್ರಗತಿಪರ ಶಕ್ತಿಗಳು ಒಗ್ಗೂಡಿ ಮಾಡಬೇಕು’ ಎಂದು ಸಿಪಿಎಂ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸಲಹೆ ನೀಡಿದರು.

ಸಿಪಿಎಂ (ಎಂ) ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ಅಂದು ಮತ್ತು ಇಂದು’ ವಿಷಯ ಕುರಿತು ಸೋಮವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಅಂದು ತನ್ನ ನಿರಂತರ ಸೋಲು, ನ್ಯಾಯಾಂಗದಿಂದ ಆದ ಹಿನ್ನಡೆ ಮತ್ತು ಭ್ರಷ್ಟಾಚಾರ ವಿರುದ್ದ ಬೆಳೆದು ಬಂದ ತೀವ್ರ ಹೋರಾಟಗಳಿಗೆ ಹೆದರಿ ಪ್ರಧಾನಿ ಇಂದಿರಾಗಾಂಧಿಯವರು ದೇಶದಲ್ಲಿ ಆಂತರಿಕ ತುರ್ತುಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಿ ದ್ದರು. ಆದರೆ, ಇಂದು ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಸಂವಿಧಾನಾತ್ಮಕ ಹಕ್ಕುಗಳನ್ನು ನಾಶಪಡಿಸುವ ಮೂಲಕ ಅಘೋಷಿತ ತುರ್ತುಪರಿಸ್ಥಿತಿಯನ್ನು ದೇಶದ ಮೇಲೆ ಹೇರಿದೆ’ ಎಂದು ಆರೋಪಿಸಿದರು.

‘ಬಿಜೆಪಿ ನೇತೃತ್ವದ ಸರ್ಕಾರವು ಸಂವಿಧಾನದ ಆಧಾರ ಸ್ತಂಭಗಳಾದ ಆರ್ಥಿಕ ಸಾರ್ವಭೌಮತ್ವ, ಜಾತ್ಯತೀತ ಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಒಕ್ಕೂಟ ವ್ಯವಸ್ಥೆಯನ್ನು, ಅದರೊಂದಿಗೆ ಜನತೆಗೆ ಸಿಕ್ಕಿರುವ ಹಕ್ಕುಗಳನ್ನು ಕೂಡ ಸಂಪೂರ್ಣ ನಾಶಪಡಿಸುತ್ತಿದೆ’ ಎಂದರು.

‘ನಮ್ಮ ಸ್ವಾತಂತ್ರ್ಯ ಚಳವಳಿಯ‌ ಆಶೋತ್ತರಗಳ ಭಾಗವಾಗಿ ನಮ್ಮ ಸಂವಿಧಾನ ಬೆಳೆದು ಬಂದಿದೆ. ಅದರಲ್ಲಿ ಬಸವಣ್ಣನಿಂದ ಹಿಡಿದು ಶಂಕರಾಚಾರ್ಯರ ತತ್ವಗಳಿಗೂ ಅವಕಾಶ ಕಲ್ಪಿಸಿದೆ. ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿ ಪ್ರತಿಯೊಂದನ್ನು ಪ್ರಶ್ನಿಸುವ ಅವಕಾಶವನ್ನು ನೀಡಿದೆ. ಆದರೆ ಮೋದಿ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ರೂಪಿಸಿ ಅವೈಚಾರಿಕ, ಅವೈಜ್ಞಾನಿಕ ಅಂಶಗಳನ್ನು ಅದರಲ್ಲಿ ಸೇರಿಸಿ ಜನತೆಯನ್ನು ಮತ್ತು ದೇಶವನ್ನು ಮನುಸ್ಮೃತಿ ಕಾಲದತ್ತ ತಳ್ಳುವ ಹುನ್ನಾರ ನಡೆಸಿದೆ. ಇದು ಭವಿಷ್ಯದ ಭಾರತವನ್ನೇ ನಾಶಪಡಿಸುವ ಸಂಘಪರಿವಾರದ ಕಾರ್ಯತಂತ್ರವೇ ಆಗಿದೆ’ ಎಂದು ಅವರು ಆರೋಪಿಸಿದರು.

‘34 ತಿಂಗಳುಗಳಿಂದ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಹಲವಾರು ಜನರನ್ನು ಬಂಧಿಸಲಾಗಿದೆ. ಆ ಪ್ರಕರಣ ದಲ್ಲಿ ಬಂಧಿತರಾದವರ ಮೇಲೆ ಇದುವರೆಗೆ ಒಂದೂ ಪ್ರಕರಣಗಳು ಸಾಬೀತಾಗಿಲ್ಲ. ಅಲ್ಲದೆ ತುರ್ತು ಪರಿಸ್ಥಿತಿಯನ್ನು ಸಂಘ ಪರಿವಾರವೇ ಬೆಂಬಲಿಸಿದ ಇತಿಹಾಸ ಇರುವಾಗ ನರೇಂದ್ರ ಮೋದಿ ಅವರಿಗೆ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿ ಭಾಷಣ ಮಾಡುವ ನೈತಿಕತೆ ಇದೆಯೇ’ ಎಂದು ಯೆಚೂರಿ ಪ್ರಶ್ನಿಸಿದರು.

ಸಮಿತಿಯ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಉಪ ಸಮಿತಿ ಸಂಚಾಲಕ ಡಾ. ಕೆ.ಪ್ರಕಾಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT