ಬೆಂಗಳೂರು: ‘ಸಿದ್ದರಾಮಯ್ಯ ಅವರನ್ನು ಖುಷಿಪಡಿಸಲು ಮುಡಾ ಅಧಿಕಾರಿಗಳೇ 50:50ರ ಅನುಪಾತದಲ್ಲಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ನಾಮಬಲದ ಮೇಲೇ ಇದೆಲ್ಲಾ ನಡೆದಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಕಾನೂನು ಪ್ರಕೋಷ್ಠದ ಸದಸ್ಯತ್ವ ಅಭಿಯಾನದ ಕಾರ್ಯಾಗಾರಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ಮಂಜೂರು ಮಾಡಲಾಗಿದೆ ಎಂದು ಅವರು ಆರೋಪಿಸುತ್ತಿದ್ದಾರೆ. ಆದರೆ 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಲು ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. ಅಧಿಕಾರಿಗಳೇ ಅಧಿಕಾರ ದುರುಪಯೋಗ ಮಾಡಿಕೊಂಡು, ನಿವೇಶನ ನೀಡಿದ್ದಾರೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ ದಿನ ಬೆಳಗಾದರೆ ಹಲವು ಹೋರಾಟಗಳು ನಡೆಯುತ್ತವೆ. ನಮ್ಮ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗುತ್ತಲೇ ಇರುತ್ತವೆ. ಕಾನೂನು ಪ್ರಕೋಷ್ಠದ ನೆರವು ಇಲ್ಲದೆ, ನಡೆದಾಡುವ ಸ್ಥಿತಿಯೂ ಇಲ್ಲ. ಹೀಗಾಗಿ ಕಾನೂನು ಪ್ರಕೋಷ್ಠ ಪ್ರಬಲವಾಗಿರುವ ಅವಶ್ಯಕತೆ ಇದೆ’ ಎಂದರು.
ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್, ‘ಶೇ 95 ಜಿಲ್ಲಾ ಸಂಚಾಲಕರ ನೇಮಕಾತಿ ನಡೆದಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಕಾನೂನು ಹೋರಾಟಕ್ಕೆ ಸಹಕರಿಸುತ್ತಿದ್ದೇವೆ. ಮುಡಾ ಹಗರಣದ ವಿರುದ್ಧ ಪಾದಯಾತ್ರೆಗೆ ಸಹಕಾರ ಕೊಡುವ ಜೊತೆಗೆ ಕಾನೂನು ಹೋರಾಟವನ್ನೂ ನಡೆಸುತ್ತಿದ್ದೇವೆ’ ಎಂದರು.
ಕಾಂಗ್ರೆಸ್ ಸರ್ಕಾರವು ಅತ್ಯಂತ ಕಡಿಮೆ ಅವಧಿಯಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ. ರಾಜ್ಯದಲ್ಲಿ ಸರ್ಕಾರ ಇದೆ ಎಂಬುದನ್ನು ಜನರು ಮರೆತುಹೋಗಿದ್ದಾರೆಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಆನ್‌ಲೈನ್ ಗೇಮ್ ಕಡಿವಾಣ: ಅಮಿತ್ ಶಾಗೆ ಪತ್ರ
ಆನ್‌ಲೈನ್ ಗೇಮ್‌ಗಳಿಗೆ ಕಡಿವಾಣ ಹಾಕಬೇಕು ಎಂದು ಕೇಂದ್ರ ಸಚಿವ ಅಮಿತ್ ಶಾಗೆ ಪತ್ರ ಬರೆದಿರುವ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ ಅವಕಾಶ ನೀಡುವಂತೆಯೂ ಮನವಿ ಮಾಡಿದ್ದಾರೆ. ‘ಆನ್‌ಲೈನ್ ಗೇಮ್‌ಗಳ ಜಾಲಕ್ಕೆ ಸಿಲುಕಿ ಮಕ್ಕಳು ಮತ್ತು ಯುವಕರು ಹಣ ಕಳೆದುಕೊಳ್ಳುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಿ. ಇಂತಹ ಆಟಗಳಲ್ಲಿ ಜೂಜಿಗೆ ಹಣ ಇಟ್ಟು ಹಲವು ಕುಟುಂಬಗಳು ಬೀದಿಗೆ ಬಂದಿವೆ. ಆದರೆ ಅಂತಹ ಗೇಮ್‌ಗಳು ಮತ್ತು ಆ್ಯಪ್‌ಗಳ ಮಾಲೀಕರು ಲಾಭ ಮಾಡಿಕೊಂಡು ಐಷಾರಾಮ ಜೀವನ ನಡೆಸುತ್ತಿದ್ದಾರೆ. ಇದನ್ನು ತಪ್ಪಿಸುವ ಅವಶ್ಯಕತೆ ಇದೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಜತೆಗೆ ‘ಈ ವಿಷಯ ಮಾತ್ರವಲ್ಲದೇ ರಾಜ್ಯದಲ್ಲಿನ ಈಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಬೇಕಿದೆ. ಹೀಗಾಗಿ ನಿಮ್ಮನ್ನು ಭೇಟಿಯಾಗಬೇಕಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.