ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾತಿ ವಿವಾಹವಾಗಿದ್ದಕ್ಕೆ ಸಾಮಾಜಿಕ ಬಹಿಷ್ಕಾರ: ದೂರು ಕೊಟ್ಟರೂ ಕ್ರಮ ಇಲ್ಲ

ದೂರು ಕೊಟ್ಟು ನಾಲ್ಕು ದಿನವಾದರೂ ಕ್ರಮ ಕೈಗೊಳ್ಳದ ಪೊಲೀಸರು: ಆರೋಪ
Last Updated 5 ಮಾರ್ಚ್ 2023, 0:30 IST
ಅಕ್ಷರ ಗಾತ್ರ

ಚಾಮರಾಜನಗರ/ ಮಂಡ್ಯ: ಅಂತರ್ಜಾತಿ ವಿವಾಹವಾಗಿ 5 ವರ್ಷ ಕಳೆದ ನಂತರ ಗೋವಿಂದರಾಜು–ಶ್ವೇತಾ ದಂಪತಿಗೆ ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿಯ ಯಜಮಾನರು ₹ 6 ಲಕ್ಷ ದಂಡ ವಿಧಿಸಿ, ಸಾಮಾಜಿಕ ಬಹಿಷ್ಕಾರ ಹಾಕಿರುವ ಬಗ್ಗೆ ದೂರು ಸಲ್ಲಿಕೆಯಾಗಿದೆ.

‘ಈ ಕುರಿತು ಮಾರ್ಚ್‌ 1ರಂದೇ ಕೊಳ್ಳೇಗಾಲ ಡಿವೈಎಸ್‌ಪಿ ಕಚೇರಿಯಲ್ಲಿ ದೂರು ಸಲ್ಲಿಸಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ನಮಗೆ ಭಯ ಕಾಡುತ್ತಿದ್ದು ರಕ್ಷಣೆ ನೀಡಬೇಕು’ ಎಂದು ದಂಪತಿ ಆಗ್ರಹಿಸಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ವಿವರ: ಕುಣಗಳ್ಳಿಯ ಗೋವಿಂದರಾಜು ಉಪ್ಪಾರಶೆಟ್ಟಿ ಸಮುದಾಯದವರಾಗಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೂವಿನಕೊಪ್ಪಲು ಗ್ರಾಮದ ಪರಿಶಿಷ್ಟ ಜಾತಿಯ ಶ್ವೇತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. 2018ರ ಸೆ.19ರಂದು ಇಬ್ಬರ ಕುಟುಂಬಸ್ಥರ ಸಮ್ಮುಖದಲ್ಲಿ ಮಳವಳ್ಳಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಲಾಗಿತ್ತು.

ದಂಪತಿ ನಂತರ ಮಳವಳ್ಳಿಯಲ್ಲಿ ವಾಸವಾಗಿದ್ದು, ಕುಣಗಳ್ಳಿಗೆ ಆಗಾಗ ಭೇಟಿ ಕೊಡುತ್ತಿದ್ದರು. ತಿಂಗಳ ಹಿಂದೆ, ಕುಣಗಳ್ಳಿಯ ಮನೆಯ ಅಕ್ಕಪಕ್ಕದ ನಿವಾಸಿಗಳಿಗೆ ಅಂತರ್ಜಾತಿ ವಿವಾಹದ ಬಗ್ಗೆ ಗೊತ್ತಾಗಿ, ಪರಿಶಿಷ್ಟ ಜಾತಿ ಯುವತಿಯನ್ನು ಮದುವೆ ಆಗಿರುವುದನ್ನು ಯಜಮಾನರ ಗಮನಕ್ಕೆ ತಂದಿದ್ದರು.

ಯಜಮಾನರು ಫೆ.23ರಂದು ನ್ಯಾಯ ಪಂಚಾಯಿತಿ ಮಾಡಿ ಗೋವಿಂದರಾಜು ತಂದೆ ವೆಂಕಟಶೆಟ್ಟಿ, ತಾಯಿ ಸಂಗಮ್ಮ ಹಾಗೂ ದಂಪತಿಗೆ ₹ 3 ಲಕ್ಷ ದಂಡ ವಿಧಿಸಿ, ಮಾರ್ಚ್‌ 1ರೊಳಗೆ ಪಾವತಿಸುವಂತೆ ಸೂಚಿಸಿದ್ದರು.

‘ದಂಡ ಪಾವತಿಸದೆ, ಡಿವೈಎಸ್‌ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದರಿಂದ ದಂಡದ ಮೊತ್ತವನ್ನು ₹ 6 ಲಕ್ಷಕ್ಕೆ ಹೆಚ್ಚಿಸಿದ್ದಾರೆ. ಗ್ರಾಮಸ್ಥರ ಜೊತೆಮಾತನಾಡುವಂತಿಲ್ಲ, ಅಂಗಡಿಗಳಲ್ಲಿ ಧಾನ್ಯ, ತರಕಾರಿ, ಹಾಲು ಖರೀದಿಸುವಂತಿಲ್ಲ. ನೀರನ್ನೂ ತೆಗೆದುಕೊಳ್ಳುವಂತಿಲ್ಲ ಎಂದು ಸೂಚಿಸಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ದೂರಿನಲ್ಲಿ ಕುಣಗಳ್ಳಿಯ 13 ಮಂದಿಯ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.

ಇಂದು ವಿಚಾರಣೆ

‘ದೂರಿನ ಸಂಬಂಧ ಭಾನುವಾರ (ಮಾರ್ಚ್‌ 5)ರಂದು ವಿಚಾರಣೆಗೆ ಹಾಜರಾಗುವಂತೆ ಗ್ರಾಮದ ಯಜಮಾನರು, ಮುಖಂಡರಿಗೆ ಸೂಚಿಸಲಾಗಿದೆ’ ಎಂದು ಯಳಂದೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಮಾರ್ಚ್ 1ರಂದು ದಂಪತಿ ದೂರು ನೀಡಿದ್ದು, ನಾನು ಅಂದು ಕಚೇರಿಯಲ್ಲಿರಲಿಲ್ಲ. ದೂರು ಅರ್ಜಿ ಪರಿಶೀಲಿಸಿ, ತನಿಖೆ ನಡೆಸಿ, ಮಾಹಿತಿ ನೀಡುವಂತೆ ಯಳಂದೂರು ಸರ್ಕಲ್‌ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡಿದ್ದೇನೆ. ಬಹಿಷ್ಕಾರ ಹಾಕಿರುವುದು ನಿಜವಾಗಿದ್ದರೆ, ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಕೊಳ್ಳೇಗಾಲ ಡಿವೈಎಸ್‌ಪಿ ಸೋಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT