‘ಎಲ್ಲರೂ ಹೋರಾಡುತ್ತಿದ್ದೇವೆ’
‘ಗೋದಾವರಿ–ಕಾವೇರಿ ಜೋಡಣೆ, ಕಳಸಾ–ಬಂಡೂರಿ–ಮಹದಾಯಿ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ ನಷ್ಟವಾಗಿದೆ. ಇದು ರಾಜ್ಯದ ಸಮಸ್ಯೆ. ಇದರಲ್ಲಿ ಜೆಡಿಎಸ್–ಬಿಜೆಪಿ ಸಂಸದರು ಮಾತ್ರವಲ್ಲ, ಕಾಂಗ್ರೆಸ್‌ನ ಸಂಸದರೂ ಹೋರಾಡುತ್ತಿದ್ದಾರೆ’ ಎಂದು ದೇವೇಗೌಡ ಹೇಳಿದರು.
‘ಮಹಾದಾಯಿಗೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿದೆ. ಸಿದ್ದರಾಮಯ್ಯ ಅವರ ಸರ್ಕಾರವೂ ಪ್ರಧಾನಿಗೆ ಪತ್ರ ಬರೆದಿದೆ. ವಿಷಯ ನ್ಯಾಯಾಲಯದಲ್ಲಿ ಇರುವ ಕಾರಣ ಪ್ರಧಾನಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ರಾಜ್ಯ ಸರ್ಕಾರದ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಬೇಕು. ಈ ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ನಮ್ಮ ಸಹಕಾರವಿದೆ’ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ ಮಂಜೂರು ಮಾಡಿಸುವಲ್ಲಿ ಜೆಡಿಎಸ್–ಬಿಜೆಪಿ ಸಂಸದರು ಏನೂ ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ಎಂದು ಸುದ್ದಿಗಾರರು ಪ್ರಸ್ತಾಪಿಸಿದಾಗ, ‘ಕಾಂಗ್ರೆಸ್ ಸರ್ಕಾರದವರು ಕೆಲವು ಯೋಜನೆಗಳನ್ನು ಮಾಡಿದ್ದಾರೆ. ಅವಕ್ಕೆ ಹಣ ಬೇಕಿದ್ದು, ನೀರಾವರಿಗೆ ಹಣ ಮೀಸಲಿಡಲು ಸಾಧ್ಯವಾಗಿಲ್ಲ. ಹೀಗಾಗಿ ಕೇಂದ್ರದ ಮೇಲೆ ಹೇಳುತ್ತಿದ್ದಾರೆ. ಆದರೆ ನಾನು ಅವನ್ನು ವಿರೋಧಿಸುವುದಿಲ್ಲ. ಅವರ ಯೋಜನೆಗಳನ್ನು ಅವರು ನಡೆಸಲಿ’ ಎಂದರು.