ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಂಗ್ರೆಸ್ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸದೇ ‘ಆತ್ಮಹತ್ಯೆ ಗ್ಯಾರಂಟಿ’ ನೀಡಿದೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಕಿಡಿಕಾರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದಿಂದ ರಾಜ್ಯದ ರೈತರು ತತ್ತರಿಸಿ ಹೋಗಿದ್ದಾರೆ. ಬೆಳೆ ನಷ್ಟವಾಗಿದೆ. ಆದರೆ, ಒಬ್ಬನೇ ಒಬ್ಬ ಸಚಿವ ರೈತರ ಹೊಲದ ಬಳಿ ಹೋಗಿ ಅವರ ಸಂಕಷ್ಟ ಆಲಿಸುವ ಕೆಲಸ ಮಾಡಿಲ್ಲ ಎಂದರು.
ಕಾಂಗ್ರೆಸ್ ನೀತಿಯ ಕಾರಣಗಳಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೀಗಾಗಿ ಕಾಂಗ್ರೆಸ್ ಆಡಳಿತದಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆಯೂ ಹೆಚ್ಚು. 2015–16 ರಲ್ಲಿ 1,525, 2016–17 ರಲ್ಲಿ 1203, 2017–18 ರಲ್ಲಿ 1320 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬಳಿಕ ಬಿಜೆಪಿ ಸರ್ಕಾರ ಬಂದ ಮೇಲೆ ಆತ್ಮಹತ್ಯೆ ಪ್ರಮಾಣ ಕಡಿಮೆ ಆಯಿತು. 2019–20 ರಲ್ಲಿ 1,091, 2020–21 ರಲ್ಲಿ 855, 2021–22 ರಲ್ಲಿ 963 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಿದ್ದರಾಮಯ್ಯ ಅವಧಿಯಲ್ಲಿ 9 ತಿಂಗಳಲ್ಲಿ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಾಟೀಲ ಹೇಳಿದರು.
ಬೆಳೆ ನಷ್ಟ, ಪರಿಹಾರವಿಲ್ಲ:
ಬರದಿಂದಾಗಿ ಈವರೆಗೆ 11,18,527 ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ. ಆದರೆ, ಸರ್ಕಾರವು ಒಬ್ಬನೇ ಒಬ್ಬ ರೈತನಿಗೂ ಒಂದು ಪೈಸೆ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಅತಿವೃಷ್ಟಿಯಿಂದ 39,74,741 ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಷ್ಟವಾಗಿತ್ತು. ಆಗ ನಾವು ಕೇಂದ್ರದ ನೆರವಿಗೆ ಕಾಯದೇ ಒಂದು ಹೆಕ್ಟೇರ್‌ಗೆ ₹6,800 ರ ಬದಲಿಗೆ ₹13,600 ರಂತೆ ನಿಯಮಕ್ಕಿಂತ ಎರಡು ಪಟ್ಟು ಹೆಚ್ಚು ಪರಿಹಾರ ನೀಡಿದ್ದೆವು. ತೋಟಗಾರಿಕೆ ಬೆಳೆಗೆ ₹13,000 ದ ಬದಲು ₹25,000, ನೀರಾವರಿ ಬೆಳೆಗೆ ₹18,000 ಬದಲು ₹28,000 ಪರಿಹಾರ ನೀಡಿದ್ದೆವು. ಇವರು ಗ್ಯಾರಂಟಿಗೆ ಹಣ ಖಾಲಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ದಿವಾಳಿ ಆಗಿದೆ. ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಇದ್ದ ಬದ್ದ ಹಣವನ್ನು ಗ್ಯಾರಂಟಿ ಮತ್ತು ಭಾಗ್ಯಗಳಿಗೆ ಹಂಚುತ್ತಿದ್ದಾರೆ. ಇದರಿಂದ ರೈತರಿಗೆ ಕೊಡಲು ಸರ್ಕಾರದ ಹಣವೇ ಇಲ್ಲ. ಪಡಿತರ ಅಕ್ಕಿಯ ಬದಲಿಗೆ ಹಣವನ್ನು ಒಂದು ತಿಂಗಳು ಮಾತ್ರ ಕೊಟ್ಟಿದ್ದು, ಎರಡನೇ ತಿಂಗಳು ಅರ್ಧಂಬರ್ಧ ಜನರಿಗೆ ಮಾತ್ರ ಕೊಟ್ಟಿದ್ದಾರೆ. ಸರ್ವರ್ ಬಂದ್ ಮಾಡಿರುವುದರಿಂದ ಯಾರಿಗೂ ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಕೆ.ರಾಮಮೂರ್ತಿ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.