ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ ಪ್ರವೇಶಕ್ಕೆ SC ಅಸ್ತು: ನವರಾತ್ರಿಗೆ ಭೇಟಿ ಎಂದ ಗಾಲಿ ಜನಾರ್ಧನ ರೆಡ್ಡಿ

Published : 30 ಸೆಪ್ಟೆಂಬರ್ 2024, 10:20 IST
Last Updated : 30 ಸೆಪ್ಟೆಂಬರ್ 2024, 10:20 IST
ಫಾಲೋ ಮಾಡಿ
Comments

ಬೆಂಗಳೂರು: ‘ನವರಾತ್ರಿ ಅಕ್ಟೋಬರ್ 3ರಿಂದ ಆರಂಭವಾಗಲಿದೆ. ಅದೇ ದಿನ (ಗುರುವಾರ) ಬೆಳಿಗ್ಗೆ ಬಳ್ಳಾರಿಗೆ ಭೇಟಿ ಕೊಡಲಿದ್ದೇನೆ’ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.

ಬಳ್ಳಾರಿಗೆ ಭೇಟಿ ನೀಡಲು ಸುಪ್ರೀಂಕೋರ್ಟ್‌ ಅನುಮತಿ ನೀಡಿದ ಬೆನ್ನಲ್ಲೇ ಅವರು ಸುದ್ದಿಗಾರರ ಜತೆ ಮಾತನಾಡಿ, ‘14 ವರ್ಷಗಳ ನಂತರ ಬಳ್ಳಾರಿಗೆ ತೆರಳಲು ಅನುಮತಿ ನೀಡಿ ಸುಪ್ರೀಂ ಕೋರ್ಟ್ ಆದೇಶ ಬಂದಿದೆ. ಕೊನೆಯ ಉಸಿರು ಇರುವವರೆಗೂ ಬಳ್ಳಾರಿಯಲ್ಲಿ ಇರುತ್ತೇನೆ’ ಎಂದರು.

ಬಳ್ಳಾರಿಯಲ್ಲಿ ವಿವಿಧ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದರು.

‘ಜನ್ಮ ಸ್ಥಳ ಪ್ರತಿಯೊಬ್ಬರಿಗೂ ಮುಖ್ಯವಾಗುತ್ತದೆ. ಯಾವುದೇ ಊರಿಗಿಂತ ನಮ್ಮ ಹುಟ್ಟೂರು ನಮಗೆ ಮೇಲು ಎಂಬುದು ಹಿರಿಯರ ಮಾತು. ಮೊದಲು ಗಂಗಾವತಿಗೆ ತೆರಳಿ, ಹನುಮಂತನ ದರ್ಶನ ಪಡೆದು, ರಾಜಕೀಯ ಪುನರ್ ಜನ್ಮ ನೀಡಿದ ಜನರ ಜೊತೆ ಮಾತನಾಡುವೆ’ ಎಂದು ತಿಳಿಸಿದರು.

‘ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಮುಂದೆ ನಾನು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ. ಅದರಂತೆ ನಡೆದುಕೊಳ್ಳುವೆ’ ಎಂದು ಜನಾರ್ಧನ ರೆಡ್ಡಿ ಹೇಳಿದರು.

‘ಕಷ್ಟಗಳು ಬಂದಾಗ, ಶ್ರೀಮನ್ನಾರಾಯಣ, ಶ್ರೀ ರಾಮಚಂದ್ರನನ್ನು ನಾವು ನೆನೆಸಿಕೊಳ್ಳುತ್ತೇವೆ. ಅವರಿಗೇ ಸಂಕಷ್ಟಗಳು ತಪ್ಪಿಲ್ಲ ಎಂದ ಮೇಲೆ ನಾವು ಯಾವ ಲೆಕ್ಕಕ್ಕೆ ಅಂದುಕೊಳ್ಳುತ್ತೇವೆ’ ಎಂದರು.

‘ಬಳ್ಳಾರಿಗೆ ಅನೇಕ ಒಳ್ಳೆಯ ಕೆಲಸ ಮಾಡಿದ್ದು, ಅದು ಜನರಿಗೂ ಗೊತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ದೊಡ್ಡ ಪ್ರಮಾಣದ ಅಭಿವೃದ್ಧಿ ಕೆಲಸಗಳು ಆಗಿದ್ದವು. ಬಳ್ಳಾರಿಯ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಕನಸುಗಳಿವೆ. ಮುಂದಿನ ದಿನಗಳಲ್ಲಿ ಬಳ್ಳಾರಿ ಜನರ ಕನಸುಗಳನ್ನು ಈಡೇರಿಸಲು ಶ್ರಮಿಸುವೆ’ ಎಂದು ಜನಾರ್ದನ ರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT