ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲೇ ಅತಿ ಎತ್ತರದ ರಾಜೀವ್‌ಗಾಂಧಿ ಪ್ರತಿಮೆ ಅನಾವರಣಕ್ಕೆ ಸಿದ್ಧ

ಶೇಷಾದ್ರಿಪುರ ಜಂಕ್ಷನ್‌ನಲ್ಲಿ ‘ರಾಜೀವ್‌ ಗಾಂಧಿ ಸ್ಕ್ವೇರ್‌’ ಅನಾವರಣಕ್ಕೆ ಸಜ್ಜು
Published 30 ಜನವರಿ 2024, 15:25 IST
Last Updated 30 ಜನವರಿ 2024, 23:26 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಅವರ 15 ಅಡಿ ಎತ್ತರದ ಕಂಚಿನ ಪ್ರತಿಮೆ ಶೇಷಾದ್ರಿಪುರದಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿದೆ.

ರಾಜ್ಯದಲ್ಲೇ ಅತಿ ಎತ್ತರದ ರಾಜೀವ್‌ ಗಾಂಧಿ ಪ್ರತಿಮೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಜಂಕ್ಷನ್‌ಗಳ ಅಭಿವೃದ್ಧಿ ಯೋಜನೆಯಡಿ ಬಿಬಿಎಂಪಿ ನಗರದಲ್ಲಿ 25 ಜಂಕ್ಷನ್‌ಗಳನ್ನು ಅಭಿವೃದ್ಧಿ ಮಾಡುತ್ತಿದ್ದು, ಶೇಷಾದ್ರಿಪುರ, ಪ್ಲಾಟ್‌ಫಾರ್ಮ್‌ ರಸ್ತೆ ಹಾಗೂ ಸಂಪಿಗೆ ರಸ್ತೆ ಸೇರುವ ಜಂಕ್ಷನ್‌ನಲ್ಲಿ ‘ರಾಜೀವ್‌ ಗಾಂಧಿ ಸ್ಕ್ವೇರ್‌’ ನಿರ್ಮಿಸಲಾಗುತ್ತಿದೆ. 

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. ಬಿಬಿಎಂಪಿ ವತಿಯಿಂದ ₹1.5 ಕೋಟಿ ವೆಚ್ಚದಲ್ಲಿ ಜಂಕ್ಷನ್‌ ಅಭಿವೃದ್ಧಿ ಮಾಡಲಾಗುತ್ತಿದೆ.  ₹1.25 ಕೋಟಿ ವೆಚ್ಚದಲ್ಲಿ ಸ್ಥಾಪನೆಗೆ ಡಿಸಿಎಂ ತಮ್ಮ ಅನುದಾನದಲ್ಲಿ ಹಣ ಬಿಡುಗಡೆ ಮಾಡಿದ್ದಾರೆ’ ಎಂದು ಬಿಬಿಎಂಪಿಯ ಸಂಚಾರ ಎಂಜಿನಿಯರಿಂಗ್‌ ಕೋಶದ (ಟಿಇಸಿ) ಎಂಜಿನಿಯರ್‌ಗಳು ತಿಳಿಸಿದರು.

<div class="paragraphs"><p></p></div>

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಗರ ಸುತ್ತಾಟದ ಸಂದರ್ಭದಲ್ಲಿ ಇಲ್ಲಿ ಕಳೆಗುಂದಿದ್ದ ರಾಜೀವ್‌ಗಾಂಧಿ ಪ್ರತಿಮೆಯನ್ನು ನೋಡಿದ್ದರು. ಕೂಡಲೇ ಅದನ್ನು ತೆರವುಗೊಳಿಸಿ, ಹೊಸದಾಗಿ ಪ್ರತಿಮೆ ಸ್ಥಾಪಿಸಲು ಸೂಚಿಸಿದ್ದರು. ಹೈದರಾಬಾದ್‌ನಲ್ಲಿ ಕಂಚಿನ ಪ್ರತಿಮೆಯನ್ನು ತಯಾರಿಸಲಾಗಿದ್ದು, ಅಲ್ಲಿಂದ ಟ್ರಕ್‌ ಮೂಲಕ ತಂದು, ಕ್ರೇನ್‌ ಸಹಾಯದಿಂದ ಅಳವಡಿಸಲಾಗಿದೆ. ಜಂಕ್ಷನ್‌ ಅಭಿವೃದ್ಧಿ ಕೆಲಸ ಒಂದೆರಡು ವಾರಗಳಲ್ಲಿ ಮುಗಿಯಲಿದ್ದು, ನಂತರ ಪ್ರತಿಮೆ ಅನಾವರಣಗೊಳಿಸಲಾಗುವುದು. ಮೆಟ್ಟಿಲು, ಪೀಠ ಸೇರಿ 25 ಅಡಿ ಎತ್ತರವಿರಲಿದ್ದು, ಇದು ರಾಜ್ಯದಲ್ಲೇ ಅತಿ ಎತ್ತರದ ರಾಜೀವ್‌ ಗಾಂಧಿ ಕಂಚಿನ ಪ್ರತಿಮೆಯಾಗಲಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿಮೆಯ ಸುತ್ತ ಘೋಷವಾಕ್ಯಗಳಿದ್ದು, ಅವುಗಳಿಗೆ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುತ್ತಿದೆ. ಇದು ಮುಕ್ತ ಜಂಕ್ಷನ್‌ ಆಗಿದ್ದು, ಮೆಟ್ಟಿಲುಗಳ ಮೇಲೆ ನಾಗರಿಕರು ವಿರಮಿಸಲು ಅವಕಾಶವಿರುತ್ತದೆ. ಸುತ್ತಲೂ ಗಿಡಮರಗಳು ಸೇರಿದಂತೆ ಆಲಂಕಾರಿಕ ಸೌಲಭ್ಯಗಳನ್ನೂ ಮಾಡಲಾಗುತ್ತದೆ’ ಎಂದು ಹೇಳಿದರು.

ಶೇಷಾದ್ರಿಪುರ ಜಂಕ್ಷನ್‌ನಲ್ಲಿ ಅನಾವರಣಕ್ಕೆ ಸಿದ್ಧವಾಗಿರುವ ರಾಜೀವ್‌ ಗಾಂಧಿ ಕಂಚಿನ ಪ್ರತಿಮೆ
ಶೇಷಾದ್ರಿಪುರ ಜಂಕ್ಷನ್‌ನಲ್ಲಿ ಅನಾವರಣಕ್ಕೆ ಸಿದ್ಧವಾಗಿರುವ ರಾಜೀವ್‌ ಗಾಂಧಿ ಕಂಚಿನ ಪ್ರತಿಮೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT