ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ, ಜೋಡಿ ರೈಲು ‌ಮಾರ್ಗಕ್ಕೆ ವೇಗ: ಸೋಮಣ್ಣ–ಎಂ.ಬಿ. ಪಾಟೀಲ ಸಭೆ

ರಾಜ್ಯದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ: ಸೋಮಣ್ಣ–ಎಂ.ಬಿ. ಪಾಟೀಲ ಸಭೆ
Published : 9 ಸೆಪ್ಟೆಂಬರ್ 2024, 15:28 IST
Last Updated : 9 ಸೆಪ್ಟೆಂಬರ್ 2024, 15:28 IST
ಫಾಲೋ ಮಾಡಿ
Comments

ಬೆಂಗಳೂರು: ‘ಹುಬ್ಬಳ್ಳಿ- ಅಂಕೋಲಾ, ಬೆಂಗಳೂರು- ಮಂಗಳೂರು ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ, ಚಿತ್ರದುರ್ಗ- ಹೊಸಪೇಟೆ- ಆಲಮಟ್ಟಿ ನಡುವೆ ಹೊಸ ರೈಲು ಮಾರ್ಗ ಯೋಜನೆ ಕೈಗೆತ್ತಿಕೊಳ್ಳಬೇಕು’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಮುಂದೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಬೇಡಿಕೆ ಇಟ್ಟರು.

ಸೋಮಣ್ಣ ಜೊತೆ ಸೋಮವಾರ ನಡೆದ ಸಭೆಯಲ್ಲಿ ರಾಜ್ಯದ ಹಲವು ರೈಲ್ವೆ ಯೋಜನೆಗಳ ವಸ್ತುಸ್ಥಿತಿಯ ಕುರಿತು ಪಾಟೀಲ ಅವರು ಪ್ರಸ್ತಾಪಿಸಿದರು.

ಮಂಗಳೂರಿಗೆ ಜೋಡಿ ರೈಲು ಮಾರ್ಗ ಇಲ್ಲದಿರುವುದರಿಂದ ಸರಕು ಸಾಗಣೆಯೂ ಸೇರಿದಂತೆ ಆ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆ ಕುಂಠಿತವಾಗಿದೆ. ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಮೂಲಕ ಅಲ್ಲಿನ ಬಂದರನ್ನು ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ. ಇದರಿಂದ ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಅನುಕೂಲ ಆಗಲಿದೆ. ಅಲ್ಲದೆ, ಸಕಲೇಶಪುರ- ಸುಬ್ರಹ್ಮಣ್ಯ ನಡುವೆ ಸುರಂಗ ರೈಲ್ವೆ ‌ಮಾರ್ಗ ನಿರ್ಮಾಣದ ಸಾಧ್ಯತೆಯ ಬಗ್ಗೆಯೂ ಗಮನ ನೀಡಬೇಕು ಎಂದು ಪಾಟೀಲ ಮನವಿ ಮಾಡಿದರು.

‘ಚಿತ್ರದುರ್ಗ- ಹೊಸಪೇಟೆ- ಕೊಪ್ಪಳ- ಆಲಮಟ್ಟಿ- ವಿಜಯಪುರ ಮಾರ್ಗದ ಹೊಸ ರೈಲ್ವೆ ಯೋಜನೆಗೆ ಒಪ್ಪಿಗೆ ನೀಡಬೇಕು. ಇದರಿಂದ ಬೆಂಗಳೂರು- ವಿಜಯಪುರ ಮತ್ತು ಸೊಲ್ಲಾಪುರ ನಡುವೆ ಪ್ರಯಾಣ ಅವಧಿ ಕಡಿಮೆ ಆಗಲಿದೆ’ ಎಂಬ ಬೇಡಿಕೆಗೆ ಸ್ಪಂದಿಸಿದ ಸೋಮಣ್ಣ, ‘ಈ ಮಾರ್ಗದ ಸಮೀಕ್ಷೆ ನಡೆಯುತ್ತಿದೆ’ ಎಂದರು.

‘ಧಾರವಾಡ- ಕಿತ್ತೂರು- ಬೆಳಗಾವಿ ನಡುವಿನ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಸಮಸ್ಯೆಯಿದೆ. ಈ ಸಮಸ್ಯೆ ಬಗೆಹರಿಸಲು ಸ್ಥಳೀಯ ಜನಪ್ರತಿನಿಧಿಗಳ ಜತೆ ಶೀಘ್ರ ಸಭೆ ನಡೆಸಲಾಗುವುದು’ ಎಂದು ಪಾಟೀಲ ಹೇಳಿದರು.

‘ತುಮಕೂರು- ದಾವಣಗೆರೆ ಮತ್ತು ತುಮಕೂರು- ರಾಯದುರ್ಗ ಯೋಜನೆಗಳನ್ನು ನಿಗದಿಗಿಂತ‌ ಮೊದಲೇ ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ನನೆಗುದಿಗೆ ಬಿದ್ದಿರುವ ಬಿಡದಿ- ಕನಕಪುರ- ಚಾಮರಾಜನಗರ ರೈಲ್ವೆ ಯೋಜನೆಗೆ ಕಾಯಕಲ್ಪ ನೀಡಬೇಕು’ ಎಂಬ ಮನವಿಗೂ ಸ್ಪಂದಿಸಿದ ಸೋಮಣ್ಣ, ಸದ್ಯದಲ್ಲೇ ಈ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದರು.

ವಿಜಯಪುರಕ್ಕೆ ‘ವಂದೇ ಭಾರತ್‌’?: ‘ಸದ್ಯದಲ್ಲಿ ಇನ್ನೂ 10 ‘ವಂದೇ ಭಾರತ್’ ರೈಲುಗಳ ಸಂಚಾರಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಅದರಲ್ಲಿ ಒಂದು ಕರ್ನಾಟಕಕ್ಕೂ ಬರಲಿದೆ. ಅದು ಯಾವ ಮಾರ್ಗದಲ್ಲಿ ಸಂಚರಿಸಲಿದೆ ಎನ್ನುವುದು ಗೊತ್ತಿಲ್ಲ. ಮೂಲಸೌಕರ್ಯ ಅಭಿವೃದ್ಧಿ ಸಚಿವರ ಜಿಲ್ಲೆ ವಿಜಯಪುರಕ್ಕೆ ಈ ರೈಲು ಬಂದರೂ ಅಚ್ಚರಿ ಇಲ್ಲ’ ಎಂದು ಸೋಮಣ್ಣ ಹೇಳಿದರು.

‘ರೈಲು ಪ್ರಯಾಣ ನಾಲ್ಕು ಗಂಟೆ ಉಳಿತಾಯ’

‘ಬೆಂಗಳೂರು- ವಿಜಯಪುರ ನಡುವೆ ರೈಲು ಪ್ರಯಾಣಕ್ಕೆ ಸದ್ಯ 14 ಗಂಟೆ ಬೇಕಿದೆ. ವಿಜಯಪುರ ಕಡೆಗೆ ಹೋಗುವ ರೈಲುಗಳನ್ನು ಹುಬ್ಬಳ್ಳಿ ದಕ್ಷಿಣ ರೈಲು ನಿಲ್ದಾಣದಿಂದ ನೇರವಾಗಿ ಗದಗ ಕಡೆ ಅಲ್ಲಿಂದ ಬೈಪಾಸ್ ಮೂಲಕ ವಿಜಯಪುರಕ್ಕೆ ಹೋಗುವಂತೆ ಮಾಡಿದರೆ ನಾಲ್ಕು ಗಂಟೆ ಉಳಿತಾಯ ಮಾಡಬಹುದು’ ಎಂದು ಎಂ.ಬಿ. ಪಾಟೀಲ ಸಲಹೆ ನೀಡಿದರು. ಈ ಸಲಹೆಯನ್ನು ಪರಿಶೀಲಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೋಮಣ್ಣ ಸೂಚಿಸಿದರು. ‘ಗದಗ ಬೈಪಾಸ್‌ ಮೂಲಕ ರೈಲು ಹಾದು ಹೋಗುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ಹೇಳಿದಾಗ ‘ಹೊಸ ರೈಲು ಆರಂಭಿಸಿದರೆ ಈ ಸಮಸ್ಯೆ ಇರುವುದಿಲ್ಲ’ ಎಂದು ಪಾಟೀಲ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT