ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿದ್ದರೆ ನನ್ನ ಪ್ರಾಣ ಹೋಗಲೆಂದ ಪುನೀತ್‌ ಕೆರೆಹಳ್ಳಿ ವಿರುದ್ಧ ಮತ್ತೆ ಎರಡು FIR

ಕಾನೂನು ಸುವ್ಯವಸ್ಥೆಗೆ ಧಕ್ಕೆ, ಆತ್ಮಹತ್ಯೆಗೆ ಯತ್ನ ಆರೋಪದ ಅಡಿ ಪ್ರಕರಣ
Published 8 ಅಕ್ಟೋಬರ್ 2023, 12:59 IST
Last Updated 8 ಅಕ್ಟೋಬರ್ 2023, 12:59 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್ ಕುಮಾರ್‌ ಅಲಿಯಾಸ್‌ ಪುನೀತ್ ಕೆರೆಹಳ್ಳಿ ವಿರುದ್ಧ ಉಪ್ಪಾರಪೇಟೆ ಹಾಗೂ ವಿ.ವಿ ಪುರಂ ಪೊಲೀಸ್‌ ಠಾಣೆಯಲ್ಲಿ ಮತ್ತೆ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಉಪ್ಪಾರಪೇಟೆಯಲ್ಲಿ ಆತ್ಮಹತ್ಯೆಗೆ ಯತ್ನ ಆರೋಪದ ಅಡಿ ಪ್ರಕರಣ ದಾಖಲಾಗಿದ್ದರೆ, ವಿ.ವಿ ಪುರಂನಲ್ಲಿ ಕಾನೂನು ವ್ಯವಸ್ಥೆಗೆ ಧಕ್ಕೆ ಆರೋಪದ ಅಡಿ ಪ್ರಕರಣ ದಾಖಲಾಗಿದೆ.

ಪುನೀತ್‌ ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ, ವಿಜಯನಗರ ಜಿಲ್ಲೆಯ ಹಂಪಿ ಟೂರಿಸಂ ಪೊಲೀಸ್‌ ಠಾಣೆ, ರಾಮನಗರ ಜಿಲ್ಲೆಯ ಸಾತನೂರು ಸೇರಿ ರಾಜ್ಯದ ಹಲವು ಠಾಣೆಗಳಲ್ಲಿ ದೊಂಬಿ, ಕೊಲೆ, ಹಲ್ಲೆ, ಪ್ರಾಣ ಬೆದರಿಕೆ ಆರೋಪದ ಅಡಿ ಪ್ರಕರಣಗಳು ದಾಖಲಾಗಿದ್ದವು. ಚಾಮರಾಜಪೇಟೆ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ವರದಿ ಆಧರಿಸಿ, ಪುನೀತ್‌ ಕೆರೆಹಳ್ಳಿ ಹೆಸರನ್ನು ರೌಡಿಪಟ್ಟಿಗೆ ಈ ಹಿಂದೆ ಸೇರ್ಪಡೆ ಮಾಡಲಾಗಿತ್ತು. ಅದಾದ ಮೇಲೆ ಪುನೀತ್‌ ಬಂಧನವಾಗಿತ್ತು. ಜಾಮೀನನ ಮೇಲೆ ಅವರು ಇತ್ತೀಚೆಗೆ ಬಿಡುಗಡೆಯಾಗಿದ್ದರು.

‘ತಮ್ಮ ವಿರುದ್ಧ ರೌಡಿಪಟ್ಟಿ ತೆರೆದಿರುವುದಕ್ಕೆ ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆಹಾರ ಹಾಗೂ ನೀರು ಸೇವಿಸುವುದಿಲ್ಲ. ಸರ್ಕಾರ ಸ್ಪಷ್ಟನೆ ನೀಡುವ ತನಕ ಹೀಗೆಯೇ ಇರುತ್ತೇನೆ. ಬೇಕಿದ್ದರೆ ನನ್ನ ಪ್ರಾಣ ಹೋಗಲಿ ಎಂದು ಹೇಳುತ್ತಿದ್ದಾರೆ. ಚಿಕಿತ್ಸೆ ಸಹ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ, ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅ.7ರಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರ ಎದುರು ಸರ್ಕಾರಿ ಬಸ್‌ಗೆ ಬೆಂಕಿ ಹಚ್ಚುತ್ತೇನೆ. ವಿಧಾನಸೌಧಕ್ಕೆ ಕಲ್ಲು ಹೊಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದು ಅದನ್ನು ಆಧರಿಸಿ ವಿ.ವಿ ಪುರಂ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT