ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲಿಮಾರು ಪೀಠ: ಉತ್ತರಾಧಿಕಾರಿಯಾಗಿ ಶೈಲೇಶ ಉಪಾಧ್ಯಾಯ ಆಯ್ಕೆ 

Last Updated 27 ಮಾರ್ಚ್ 2019, 12:44 IST
ಅಕ್ಷರ ಗಾತ್ರ

ಉಡುಪಿ: ಅಷ್ಠಮಠಗಳ ಪೈಕಿ ಒಂದಾದ ಪರ್ಯಾಯ ಪಲಿಮಾರು ಪೀಠಕ್ಕೆ ಮುಂದಿನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗಿದೆ. ಶೈಲೇಶ ಉಪಾಧ್ಯಾಯ ಎಂಬ ವಟು ಮುಂದಿನ ಪಲಿಮಾರು ಮಠದ ಉತ್ತರಾಧಿಕಾರಿ ಎಂದು ಪಲಿಮಾರು ವಿದ್ಯಾಧೀಶ ಶ್ರೀಗಳು ಘೋಷಿಸಿದರು.

ಬುಧವಾರ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಪಲಿಮಾರು ಶ್ರೀಗಳು, ‘ಪಲಿಮಾರು ಮಠಕ್ಕೆ ಉತ್ತರಾಧಿಕಾರಿಯ ಅನ್ವೇಷಣೆಯಲ್ಲಿ ತೊಡಗಿದ್ದಾಗ ಯೋಗದೀಪಿಕ ವಿದ್ಯಾಪೀಠದಲ್ಲಿ ಹುಡುಗನೊಬ್ಬನ ಮೇಲೆ ದೃಷ್ಟಿ ಹರಿಯಿತು. ಕೂಡಲೇ ವಿದ್ಯಾರ್ಥಿಯ ಜಾತಕವನ್ನು ಪರಿಶೀಲನೆ ಮಾಡಲು ಮೂವರು ವಿದ್ವಾಂಸರಿಗೆ ಕಳುಹಿಸಿಕೊಡಲಾಯಿತು. ಜಾತಕ ಕೂಡಿಬಂದ ಹಿನ್ನೆಲೆಯಲ್ಲಿ ವಟುವಿನ ಹಾಗೂ ಪೋಷಕರ, ಸಂಬಂಧಿಗಳ ಒಪ್ಪಿಗೆ ಪಡೆದು ಮುಂದಿನ ಉತ್ತರಾಧಿಕಾರಿಯನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದರು.

ವೈಶಾಖ ಶುಕ್ಲ ದಶಮಿಯ ಮೇ 9ರಿಂದ12ರವರೆಗೆ ಸನ್ಯಾಸದ ಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ. 9ರಂದು ಪೂರ್ವಭಾವಿಯಾಗಿ ಪ್ರಾಯಶ್ಚಿತ್ತಗಳು, ವಿರಜಾ ಹೋಮ ಮತ್ತು ಆತ್ಮಶ್ರಾದ್ಧಗಳು ನಡೆಯಲಿವೆ. 10ರಂದು ವಟು ಪ್ರಣವಮಂತ್ರೋಪದೇಶ ಬೆಳಿಗ್ಗೆ 4.15ಕ್ಕೆ ಸಲ್ಲುವ ಬ್ರಾಹ್ಮಿ ಮುಹೂರ್ತದಲ್ಲಿ ವಿಧಿವಿಧಾನಗಳು ನಡೆಯಲಿವೆ ಎಂದರು.

11ರಂದು ಅಷ್ಟಮಹಾಮಂತ್ರಗಳ ಉಪದೇಶ 12ರಂದು ಶ್ರೀಹೃಷೀಕೇಶತೀರ್ಥಪೀಠವಾದ ಪಲಿಮಾರು ಮಠದ ಪೀಠಕ್ಕೆ ಉತ್ತರಾಧಿಕಾರಿಯ ಪಟ್ಟಾಭಿಷೇಕ ನಡೆಯಲಿದೆ. ಎಲ್ಲ ಕಾರ್ಯಕ್ರಮಗಳು ಸರ್ವಜ್ಞಸಿಂಹಾಸನದಲ್ಲಿಯೇ ನಡೆಯಲಿವೆ ಎಂದು ಪಲಿಮಾರು ಶ್ರೀಗಳು ಮಾಹಿತಿ ನೀಡಿದರು.

ಮಧ್ವರಿಂದ ಆರಂಭಗೊಂಡು ಹೃಷೀಕೇಶತೀರ್ಥರಿಂದ ಮುನ್ನಡೆದ ಪಲಿಮಾರು ಮಠಕ್ಕೆ 32ನೇ ಪೀಠಾಧಿಪತಿಯಾಗಿ ವಿದ್ಯಾಧೀಶ ಶ್ರೀಗಳು ನೇಮಕಗೊಂಡಿದ್ದರು. ಮುಂದೆ 33ನೇ ಪೀಠಾಧಿಪತಿಯಾಗಿ ಶೈಲೇಶ ಉಪಾಧ್ಯ ನೇಮಕವಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT