ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ, ದದ್ದಲ್‌ಗೆ ಇ.ಡಿ ಬಲೆ

Published 10 ಜುಲೈ 2024, 4:04 IST
Last Updated 10 ಜುಲೈ 2024, 17:45 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ₹94 ಕೋಟಿ ವರ್ಗಾವಣೆ ಮಾಡಿರುವ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ, ನಿಗಮದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಶಾಸಕ ಬಸನಗೌಡ ದದ್ದಲ್‌ ಮನೆಗಳೂ ಸೇರಿದಂತೆ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಧಾನ ಕಚೇರಿ, ನಿಗಮದ ಹಿಂದಿನ ಅಧಿಕಾರಿಗಳ ಮನೆಗಳು, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮೂವರು ಅಧಿಕಾರಿಗಳ ಮನೆಗಳು, ನಾಗೇಂದ್ರ ಮತ್ತು ಬಸನಗೌಡ ದದ್ದಲ್‌ ಅವರ ಹಾಲಿ ಹಾಗೂ ಮಾಜಿ ಆಪ್ತ ಸಹಾಯಕರ ಮನೆಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಗರಣದಲ್ಲಿ ಹಣ ವರ್ಗಾವಣೆಯಲ್ಲಿ ಭಾಗಿಯಾದ ಇತರ ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಶೋಧ ನಡೆದಿದೆ. ಕೆಲವೆಡೆ ಶೋಧ ಮುಂದುವರಿದಿದೆ.

ಬೆಂಗಳೂರು, ಬಳ್ಳಾರಿ, ರಾಯಚೂರು, ಹೈದರಾಬಾದ್‌, ತಮಿಳುನಾಡು, ಮುಂಬೈ ಸೇರಿದಂತೆ ಹಲವೆಡೆ ಬುಧವಾರ ನಸುಕಿನಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ನಾಗೇಂದ್ರ ಅವರ ಮನೆ, ಬಿಇಎಲ್‌ ರಸ್ತೆಯಲ್ಲಿರುವ ಫ್ಲ್ಯಾಟ್‌, ಯಲಹಂಕ ಸಮೀಪದ ಶ್ರೀನಿವಾಸ‍ಪುರದಲ್ಲಿರುವ ಬಸನಗೌಡ ದದ್ದಲ್‌ ಮನೆ, ಶಾಸಕರ ಭವನದಲ್ಲಿ ಅವರಿಗೆ ಹಂಚಿಕೆ ಮಾಡಲಾಗಿದ್ದ ಕೊಠಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಕಚೇರಿಯ ಮೇಲೂ ದಾಳಿ ನಡೆದಿದೆ. ರಾಯಚೂರಿನಲ್ಲಿ ಬಸನಗೌಡ ಮನೆ ಸೇರಿದಂತೆ ಎರಡು ಸ್ಥಳಗಳಲ್ಲಿ ಹಾಗೂ ಬಳ್ಳಾರಿಯಲ್ಲಿ ನಾಗೇಂದ್ರ ಮನೆಯಲ್ಲಿ ಶೋಧ ನಡೆಸಲಾಗಿದೆ.

ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಬಿ. ಪದ್ಮನಾಭ್, ಹಿಂದಿನ ಲೆಕ್ಕಾಧಿಕಾರಿ ಪರಶುರಾಮ್ ದುರ್ಗಣ್ಣನವರ ಅವರ ಮನೆಗಳಲ್ಲೂ ಶೋಧ ನಡೆಸಿದ್ದು, ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿನ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಹಗರಣದ ಕುರಿತು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಮತ್ತು ಸಿಬಿಐ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ, ಎಸ್‌ಐಟಿ ಬಂಧಿಸಿರುವ ಆರೋಪಿಗಳಲ್ಲಿ ಕೆಲವರನ್ನು ನ್ಯಾಯಾಂಗ ಬಂಧನದ ಅವಧಿಯಲ್ಲೇ ವಿಚಾರಣೆ ನಡೆಸಿತ್ತು.

ನಾಗೇಂದ್ರ ಮತ್ತು ಬಸನಗೌಡ ದದ್ದಲ್‌ ಮಂಗಳವಾರ ಎಸ್‌ಐಟಿ ವಿಚಾರಣೆ ಎದುರಿಸಿದ್ದರು. ಬುಧವಾರವೂ ವಿಚಾರಣೆಗೆ ಹಾಜರಾಗಬೇಕಿತ್ತು. ನಸುಕಿನ ಜಾವದಲ್ಲೇ ಅವರ ಮನೆಯ ಬಾಗಿಲು ಬಡಿದ ಇ.ಡಿ ಅಧಿಕಾರಿಗಳು, ದಿನವಿಡೀ ಶೋಧ ನಡೆಸಿದರು. ನಾಗೇಂದ್ರ ಡಾಲರ್ಸ್‌ ಕಾಲೊನಿಯ ಮನೆಯಲ್ಲಿದ್ದರೆ, ದದ್ದಲ್‌ ಶ್ರೀನಿವಾಸಪುರದ ವಿಲ್ಲಾದಲ್ಲಿದ್ದರು. ರಾತ್ರಿಯವರೆಗೂ ಇಬ್ಬರನ್ನು ಮನೆಯಲ್ಲೇ ಇರಿಸಿಕೊಂಡ ಇ.ಡಿ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲಕಾಲ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿಗಮದ ಕಚೇರಿಯಲ್ಲೂ ಶೋಧ: ವಸಂತನಗರದಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಧಾನ ಕಚೇರಿಯಲ್ಲೂ ಇ.ಡಿ ಅಧಿಕಾರಿಗಳು ಶೋಧ ನಡೆಸಿದರು. ಕಾರ್ಯಾಚರಣೆಯ ಮಧ್ಯೆಯೇ ನಿಗಮದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್‌ ಅವರನ್ನು ಕಚೇರಿಗೆ ಕರೆಸಿಕೊಂಡ ತನಿಖಾ ತಂಡ, ಕೆಲವು ಕಾಲ ಅವರಿಂದ ಮಾಹಿತಿ ಸಂಗ್ರಹಿಸಿದೆ.

ಇ.ಡಿ ಅಧಿಕಾರಿಗಳ ತಂಡವೊಂದು ಯೂನಿಯನ್‌ ಬ್ಯಾಂಕ್‌ನ ಎಂ.ಜಿ. ರಸ್ತೆ ಶಾಖೆ ಮೇಲೂ ದಾಳಿಮಾಡಿ, ಶೋಧ ನಡೆಸಿತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ವಹಿವಾಟಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಬ್ಯಾಂಕ್‌ನಿಂದ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ. ಕಾರ್ಯಾಚರಣೆ ವೇಳೆ ಭದ್ರತೆ ಒದಗಿಸಲಾಗಿತ್ತು.

ನಿಗಮದ ಲೂಟಿಯಲ್ಲಿ ಇನ್ನೂ ಮೂವರು ಸಚಿವರು ಶಾಮೀಲಾಗಿದ್ದಾರೆ. ಈ ಸಚಿವರು ಹೋಟೆಲ್‌ನಲ್ಲಿ ಸಭೆ ಸೇರಿದ ಬಗ್ಗೆ ನಿಗಮದ ಅಧ್ಯಕ್ಷರೇ ಹೇಳಿದ್ದಾರೆ
ಆರ್‌.ಅಶೋಕ, ವಿಧಾನಸಭೆ ವಿರೋಧಪಕ್ಷದ ನಾಯಕ

ನಾಗೇಂದ್ರ ಪಿ.ಎ ವಶಕ್ಕೆ ಪಡೆದು ವಿಚಾರಣೆ

ಬಿ. ನಾಗೇಂದ್ರ ಅವರ ಆಪ್ತ ಸಹಾಯಕರಾಗಿದ್ದ ಹರೀಶ್‌ ಕುಮಾರ್‌ ಎಂಬವರನ್ನು ವಶಕ್ಕೆ ಪಡೆದಿದ್ದ ಜಾರಿ ನಿರ್ದೇಶ
ನಾಲಯದ ಅಧಿಕಾರಿಗಳು, ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದರು.

ತಡರಾತ್ರಿಯವರೆಗೂ ಹರೀಶ್‌ ವಿಚಾರಣೆ ನಡೆಸಿದ ಅಧಿಕಾರಿಗಳು, ಪುನಃ ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಬಿಟ್ಟು ಕಳುಹಿಸಿದರು.

ಬಳ್ಳಾರಿಯಲ್ಲಿ ನಾಗೇಂದ್ರ ಅವರ ಆಪ್ತ ಸಹಾಯಕ ಚೇತನ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಸಚಿವರಾಗಿದ್ದ ಅವಧಿಯಲ್ಲಿ ನಾಗೇಂದ್ರ ಅವರ ನಿಕವರ್ತಿಯಾಗಿದ್ದ ವಿಜಯಕುಮಾರ್‌ ಮತ್ತು ಮಾಧ್ಯಮ ಸಂಯೋಜಕರಾಗಿದ್ದ ನಾಗರಾಜ್‌ ಎಂಬವರನ್ನೂ ವಿಚಾರಣೆ ನಡೆಸಲಾಗಿದೆ. ಬಸನಗೌಡ ದದ್ದಲ್‌ ಅವರ ಮಾಜಿ ಆಪ್ತ ಸಹಾಯಕ ಪಂಪಣ್ಣ ಮನೆಯ ಮೇಲೂ ದಾಳಿ ಮಾಡಿದ್ದು, ಅವರ ವಿಚಾರಣೆ ನಡೆಸಲಾಗಿದೆ.

20ಕ್ಕೂ ಹೆಚ್ಚು ಮೊಬೈಲ್‌ ವಶ

ಕಾರ್ಯಾಚರಣೆ ವೇಳೆ ಇ.ಡಿ ಅಧಿಕಾರಿಗಳು 20ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಹಗರಣಕ್ಕೆ ಸಂಬಂಧಿಸಿದ ಮಾಹಿತಿ ಮೊಬೈಲ್‌
ನಲ್ಲಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಮೂಲಗಳು ಹೇಳಿವೆ.

‘ಹೈದರಾಬಾದ್‌ನಲ್ಲಿ ಸಹಕಾರ ಬ್ಯಾಂಕ್‌ನ ಕೆಲವರು ಹಾಗೂ ಮುಂಬೈ ಸೇರಿದಂತೆ ವಿವಿಧೆಡೆ ಹವಾಲಾ ದಂಧೆಯಲ್ಲಿ ತೊಡಗಿರುವವರನ್ನು ಬಳಸಿಕೊಂಡು ಹಣ ವರ್ಗಾವಣೆ ಮಾಡಿರುವುದನ್ನು ಇ.ಡಿ ಪತ್ತೆಹಚ್ಚಿದೆ. ಆ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವುದಕ್ಕಾಗಿಯೇ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮೂಲಗಳು ಹೇಳಿವೆ.

ಬ್ಯಾಂಕ್‌ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು, ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ತನಿಖಾ ತಂಡ ವಶಕ್ಕೆ ಪಡೆದಿದೆ.

ಬ್ಯಾಂಕ್‌ ಅಧಿಕಾರಿಯ ಮನೆ ಜಪ್ತಿ

ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಯೂನಿಯನ್‌ ಬ್ಯಾಂಕ್‌ನ ಎಂ.ಜಿ. ರಸ್ತೆ ಶಾಖೆಯ ಉಪ ಮುಖ್ಯಸ್ಥೆ ದೀಪಾ ಅವರ ಬೆಂಗಳೂರಿನ ಮನೆಯನ್ನು ಸಿಬಿಐ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT