ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ದುರ್ಬಳಕೆ ಆರೋಪದ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ನೆಕ್ಕುಂಟಿ ನಾಗರಾಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ಅರ್ಜಿದಾರರ ಪರ ಹೈಕೋರ್ಟ್ ನ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಮಂಡಿಸಿದ್ದ ವಾದವನ್ನು ನ್ಯಾಯಪೀಠ ಪರಿಗಣಿಸಿದೆ.
‘ನಿಗಮಕ್ಕೆ ಸಂಬಂಧಿಸಿದ ಹಣವನ್ನು ಅರ್ಜಿದಾರರ ಖಾತೆಗೆ ವರ್ಗಾವಣೆ ಮಾಡಲಾಗಿಲ್ಲ ಎಂಬುದು ನಿರ್ವಿವಾದ. ಅರ್ಜಿದಾರರ ವಿರುದ್ಧದ ಆರೋಪಕ್ಕೆ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಬಹುದಾಗಿದ್ದು, ಈಗಾಗಲೇ ಮಂಜೂರಾಗಿದ್ದ ಮಧ್ಯಂತರ ಜಾಮೀನು ಷರತ್ತುಗಳನ್ನು ಅವರು ಪಾಲನೆ ಮಾಡಿರುವ ಕಾರಣ ಅವರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ. ನಾಗರಾಜ್ ಪ್ರಕರಣದ 12ನೇ ಆರೋಪಿ.