ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ: 700ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗ?

Published 26 ಜೂನ್ 2024, 3:11 IST
Last Updated 26 ಜೂನ್ 2024, 3:11 IST
ಅಕ್ಷರ ಗಾತ್ರ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ ಎನ್ನಲಾದ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ನೂರಾರು ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದನ್ನು ಪತ್ತೆ ಹಚ್ಚಿದೆ.

ಹೈದರಾಬಾದ್‌ನ ‘ಫಸ್ಟ್‌ ಫೈನಾನ್ಸ್ ಕ್ರೆಡಿಟ್ ಕೋ– ಆಪರೇಟಿವ್‌ ಸೊಸೈಟಿ’ಯ (ಎಫ್‌ಎಫ್‌ಸಿಸಿಎಸ್‌ಎಲ್‌) ವಿವಿಧ ಖಾತೆಗಳಿಗೆ ವಾಲ್ಮೀಕಿ ನಿಗಮದ ಖಾತೆಯಿಂದ ₹94.73 ಕೋಟಿ ಹಣ ವರ್ಗಾವಣೆ ಆಗಿತ್ತು. ಈ ಸಂಬಂಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ.

ಬ್ಯಾಂಕ್‌ನಲ್ಲಿ ನಕಲಿ ಖಾತೆಗಳನ್ನು ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪದಡಿ ಹೈದರಾಬಾದ್‌ನಲ್ಲಿ ಸತ್ಯನಾರಾಯಣ ವರ್ಮಾ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಅವರ ಸಹಚರ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಾಯಿತೇಜ್‌ ಎಂಬುವರನ್ನು ಹೈದರಾಬಾದ್‌ನಲ್ಲಿ ಬಂಧಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಆತ್ಮಹತ್ಯೆಗೆ ಶರಣಾದ ನಿಗಮದ ಅಧಿಕಾರಿ ಚಂದ್ರಶೇಖರ್‌ ಅವರು ಬರೆದಿದ್ದ ಡೆತ್‌ನೋಟಿನಲ್ಲಿ ಸಾಯಿತೇಜ್‌ ಅವರ ಹೆಸರನ್ನು ಉಲ್ಲೇಖಿಸಿದ್ದರು. ಅಕ್ರಮ ನಡೆಸಲು ವರ್ಮಾ ಅವರಿಗೆ ಸಾಯಿತೇಜ್ ನೆರವು ನೀಡುತ್ತಿದ್ದ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಈ ಪ್ರಕರಣದ ಇದುವರೆಗೂ 11 ಮಂದಿಯನ್ನು ಬಂಧಿಸಿ, ಒಟ್ಟು ₹14.7 ಕೋಟಿ ಜಪ್ತಿ ಮಾಡಲಾಗಿದೆ. ₹94.73 ಕೋಟಿ ಪೈಕಿ ₹5 ಕೋಟಿಯನ್ನು ನಿಗಮದ ಬ್ಯಾಂಕ್‌ ಖಾತೆಗೆ ವಾಪಸ್ ಮಾಡಲಾಗಿತ್ತು. ಉಳಿದ ₹89 ಕೋಟಿಯನ್ನು 700ಕ್ಕೂ ಹೆಚ್ಚು ಮಂದಿ ಬ್ಯಾಂಕ್‌ ಖಾತೆಗಳಿಗೆ ಹಾಕಿ ಹಣ ಡ್ರಾ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿಯಿದೆ. ಬ್ಯಾಂಕ್‌ ಖಾತೆಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾರು ಹಣ ಹಾಕಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ವರ್ಮಾ ಸೂತ್ರದಾರ:

‘ಹೈದರಾಬಾದ್‌, ಬಳ್ಳಾರಿ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಾರ್ಮಿಕರು ಸೇರಿದಂತೆ ಹಲವರ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದು ತನಿಖೆಯಿಂದ ದೃಢಪಟ್ಟಿದೆ. ₹5 ಲಕ್ಷದಿಂದ ₹ 2 ಕೋಟಿ ತನಕ ಹಣ ವರ್ಗಾವಣೆ ಮಾಡಲಾಗಿದೆ. ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಹಣ ವರ್ಗಾವಣೆ ಹಾಗೂ ಹಣ ಡ್ರಾ ಮಾಡುವಲ್ಲಿ ಸತ್ಯನಾರಾಯಣ ವರ್ಮಾ ಸೇರಿದಂತೆ ಹಲವರು ಪ್ರಮುಖ ಪಾತ್ರ ವಹಿಸಿರುವುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT