ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೀಸಲಾತಿಗೆ ಪ್ರಬಲರ ಹಟ: ಒಕ್ಕಲಿಗರು , ಪಂಚಮಸಾಲಿ ಸಮುದಾಯದವರ ಹೋರಾಟ

ಮೀಸಲಾತಿ ಪ್ರಮಾಣ ಶೇ 12ಕ್ಕೆ ಹೆಚ್ಚಿಸಲು ಆಗ್ರಹ
Published : 24 ನವೆಂಬರ್ 2022, 11:27 IST
ಫಾಲೋ ಮಾಡಿ
Comments

ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣವನ್ನು ಸರ್ಕಾರ ಹೆಚ್ಚಳ ಮಾಡಿರುವ ಬೆನ್ನಲ್ಲೇ, ಪ್ರಬಲ ಸಮುದಾಯದವರು ಮೀಸಲಾತಿ ಪ್ರಮಾಣ ಹೆಚ್ಚಿಸಲು ಹಾಗೂ ಮೀಸಲಾತಿ ಪಟ್ಟಿಯ ಸ್ಥಾನ ಬದಲಾವಣೆಗೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದಾರೆ. ಚುನಾವಣೆ ಎದುರಾಗುತ್ತಿರುವ ಹಾಗೂ ವಿಧಾನಮಂಡಲ ಅಧಿವೇಶನ ಸಮೀಪಿಸುತ್ತಿರುವ ಹೊತ್ತಿನೊಳಗೆ ಒಕ್ಕಲಿಗ ಹಾಗೂ ಪಂಚಮಸಾಲಿ ಸಮುದಾಯದವರು ಮೀಸಲಾತಿಗೆ ಒತ್ತಾಯಿಸಿ ಹೋರಾಟವನ್ನು ತೀವ್ರಗೊಳಿಸಲು ಸಜ್ಜಾಗಿದ್ದಾರೆ.

***

ಬೆಂಗಳೂರು: ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ 4ರಿಂದ ಶೇ 12ಕ್ಕೆ ಹೆಚ್ಚಿಸಲು ಆಗ್ರಹಿಸಿ ದೊಡ್ಡ ಮಟ್ಟದ ಹೋರಾಟಕ್ಕೆ ಒಕ್ಕಲಿಗರ ಸಂಘ ಮತ್ತು ಮೀಸಲಾತಿ ಹೋರಾಟ ಸಮಿತಿ ಸಜ್ಜಾಗಿದೆ. ಸಮುದಾಯದ ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಮುಖಂಡರು ಸೇರಿ ಪ್ರಮುಖರ ಸಭೆ ನ.27ರಂದು ನಡೆಯಲಿದ್ದು, ಹೋರಾಟ ರೂಪುರೇಷೆ ಸಿದ್ಧವಾಗಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ‘ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಭೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಕುಮಾರ ಚಂದ್ರಶೇಖರಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದಾರೆ. ಆದಿಚುಂಚನಗಿರಿ ಶ್ರೀಗಳ ಸಲಹೆ ಮತ್ತು ಸೂಚನೆ ಮೇರೆಗೆ ಸಭೆ ಕರೆಯಲಾಗಿದೆ’ ಎಂದು ಹೇಳಿದರು.

ರಾಜ್ಯಸಭೆ ಸದಸ್ಯ ಎಚ್.ಡಿ.ದೇವೇಗೌಡ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ, ಸಂಸದ ಡಿ.ವಿ.ಸದಾನಂದಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಚಿವರಾದ ಆರ್.ಅಶೋಕ, ಸಿ.ಎನ್‌.ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ. ಸಮುದಾಯದ ಹಾಲಿ ಮತ್ತು ಮಾಜಿ ಶಾಸಕರು, ಸಾಹಿತಿಗಳು, ಹೋರಾಟಗಾರರು, ಚಿತ್ರರಂಗ ಪ್ರಮುಖರು, ಸಂಘ–ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ ಸರ್ಕಾರ ನಿರ್ಧಾರ ಸ್ವಾಗತಾರ್ಹ. ಅದೇ ರೀತಿ ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 3ಎ ಮೀಸಲಾತಿಯನ್ನು ನಮ್ಮ ಸಮುದಾಯ ಪಡೆದುಕೊಳ್ಳುತ್ತಿದ್ದು, ಶೇ 16ಕ್ಕೂ ಹೆಚ್ಚಿರುವ ಸಮುದಾಯ ಶೇ 4ರಷ್ಟು ಮಾತ್ರ ಮೀಸಲಾತಿ ಪಡೆದುಕೊಳ್ಳುತ್ತಿದೆ’ ಎಂದರು.

‘ಆದ್ದರಿಂದ ಮೀಸಲಾತಿ ಹೆಚ್ಚಿಸುವ ಅನಿವಾರ್ಯ ಇದೆ. ಈ ಸಂಬಂಧ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಮಹತ್ವದ ನಿರ್ಣಯಗಳನ್ನು ಭಾನುವಾರದ ಸಭೆ ಕೈಗೊಳ್ಳಲಿದೆ’ ಎಂದು ಬಾಲಕೃಷ್ಣ ಹೇಳಿದರು.

ಡಿ.19: ಪಂಚಮಸಾಲಿ ಸಮುದಾಯದ ಗಡುವು

ಬೆಂಗಳೂರು: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಬಗ್ಗೆ ಬೆಳಗಾವಿಯಲ್ಲಿ ಡಿ.19ರಿಂದ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಮುನ್ನ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರ ವರದಿ ಪಡೆಯಬೇಕು‘ ಎಂದುಕೂಡಲಸಂಗಮದ ಪಂಚಮಸಾಲಿ ‍ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

‘ಈ ಅವಧಿಯ ಒಳಗೆ ವರದಿ ಪಡೆಯದಿದ್ದರೆ ಡಿ.22ರಂದು ಬೆಳಗಾವಿಯಲ್ಲಿ ಬೃಹತ್‌ ಸಮಾವೇಶ ನಡೆಸಲಾ
ಗುವುದು’ ಎಂದು ಗುರುವಾರ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ‘ಸರ್ಕಾರಕ್ಕೆ ಗಡುವು ನೀಡಿರುವುದರಿಂದ ಡಿ.12ರಂದು ಬೆಂಗಳೂರಿನ ವಿಧಾನಸೌಧದ ಮುಂದೆ ನಡೆಸಲು ಉದ್ದೇಶಿಸಿದ್ದ ವಿರಾಟ್‌ ಪಂಚಶಕ್ತಿ ಸಮಾವೇಶವನ್ನು ನಡೆಸದಿರಲು ನಿರ್ಧರಿಸಲಾಗಿದೆ’ ಎಂದರು.

ಕಾರ್ಯಕಾರಿಣಿ ಸಭೆ: ಮೀಸಲಾತಿ ಕುರಿತು ಮುಂದಿನ ಹೋರಾಟ ರೂಪಿಸುವ ಬಗ್ಗೆನಗರದಲ್ಲಿ ಗುರುವಾರ ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯಿತು. ಸಚಿವ ಸಿ.ಸಿ. ಪಾಟೀಲ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ರಾಜ್ಯಸಭಾ
ಸದಸ್ಯ ಈರಣ್ಣ ಕಡಾಡಿ, ಸಮುದಾಯದ ಜನಪ್ರತಿನಿಧಿಗಳು ಇದ್ದರು.

ಇಡಬ್ಲ್ಯುಎಸ್‌ ಮೀಸಲಾತಿಯನ್ನೂ ಕೊಡಿ
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಶೇ 10ರಷ್ಟು ಇಡಬ್ಲ್ಯುಎಸ್‌(ಆರ್ಥಿಕವಾಗಿ ಹಿಂದುಳಿದವರಿಗೆ) ಮೀಸಲಾತಿಯಲ್ಲಿ ನಗರ ಪ್ರದೇಶದ ಒಕ್ಕಲಿಗರಿಗೂ ಅವಕಾಶ ಸಿಗಬೇಕು ಎಂದು ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಗಾನಂ ಶ್ರೀಕಂಠಯ್ಯ ಒತ್ತಾಯಿಸಿದರು.

ಕೇಂದ್ರ ಮೀಸಲಾತಿ ಪಟ್ಟಿಯಲ್ಲಿ ನಗರ ಪ್ರದೇಶದ ಒಕ್ಕಲಿಗರನ್ನು ಹೊರಗಿಡಲಾಗಿದೆ. ಗ್ರಾಮೀಣ ಪ್ರದೇಶದಿಂದ ವಲಸೆ ಬಂದು ನಗರಗಳಲ್ಲಿ ಕೂಲಿ ಮಾಡುತ್ತಿರುವ ಕುಟುಂಬಳಲ್ಲಿನ ಮಕ್ಕಳು ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಇಡಬ್ಲ್ಯುಎಸ್‌ ಮೀಸಲಾತಿ ಪ್ರಮಾಣ ಶೇ 10ರಷ್ಟು ಇರುವುದರಿಂದ ಸಾಮಾನ್ಯ ವರ್ಗದ ಮೀಸಲಾತಿ ಪ್ರಮಾಣವೂ ಕಡಿಮೆಯಾಗಿದೆ. ಈ ಎಲ್ಲಾ ಕಾರಣಗಳಿಂದ ನಗರ ಪ್ರದೇಶದ ಬಡ ಒಕ್ಕಲಿಗರಿಗೂ ಇಡಬ್ಲ್ಯುಎಸ್ ಮೀಸಲಾತಿ ಸಿಗಬೇಕು ಎಂದು ಅವರು ಪ್ರತಿಪಾದಿಸಿದರು.

‘ಕಾಂತರಾಜ್‌ ಅಧ್ಯಕ್ಷತೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ಜಾತಿ ಸಮೀಕ್ಷೆ ಅವೈಜ್ಞಾನಿಕವಾಗಿದೆ. ಒಕ್ಕಲಿಗರ ಉಪಜಾತಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಒಕ್ಕಲಿಗರ ಜನಸಂಖ್ಯೆಯನ್ನು ಕಡಿಮೆ ನಮೂದಿಸಲಾಗಿದೆ. ಆದ್ದರಿಂದ ಆಯೋಗದ ಸಮೀಕ್ಷಾ ವರದಿ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT