ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳವೆ ಬಾವಿ ಅವಲಂಬಿಸಿದ್ದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ: ಡಿ.ಕೆ. ಶಿವಕುಮಾರ್

Published 11 ಮಾರ್ಚ್ 2024, 9:36 IST
Last Updated 11 ಮಾರ್ಚ್ 2024, 9:36 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಆಗುತ್ತಿರುವ ಪ್ರದೇಶಗಳಲ್ಲಿ ನೀರಿನ ಕೊರತೆ ಇಲ್ಲ. ಕೊಳವೆ ಬಾವಿಗಳು ಬತ್ತಿರುವುದರಿಂದ ಇವುಗಳನ್ನೇ ಅವಲಂಬಿಸಿದ್ದ ಪ್ರದೇಶಗಳಲ್ಲಿ ಮಾತ್ರ ನೀರಿನ ಅಭಾವ ಎದುರಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕುಡಿಯವ ನೀರಿನ ದಂಧೆ ತಡೆಗಟ್ಟಿ ನೀರಿನ ಅಭಾವವನ್ನು ನೀಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೆಲವರು ರಾಜಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಕಳೆದ 30–40 ವರ್ಷಗಳಲ್ಲಿ ಇಂತಹ ಭೀಕರ ಬರಗಾಲವನ್ನು ನಾವು ನೋಡಿರಲಿಲ್ಲ. ಬೆಂಗಳೂರಿನಲ್ಲಿರುವ 13,900 ಕೊಳವೆ ಬಾವಿಗಳಲ್ಲಿ 6,900 ಕೊಳವೆ ಬತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನೇ ಅವಲಂಬಿಸಿದ್ದ ಪ್ರದೇಶಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಸರ್ಕಾರದ ಸುಪರ್ದಿಗೆ ಪಡೆದು ನೀರು ಪೂರೈಸಲಾಗುತ್ತದೆ ಎಂದು ಅವರು ಹೇಳಿದರು.

‘ನೀರಿನ ದಂಧೆಗೆ ತಡೆ’

ನೀರಿನ ಪೂರೈಕೆಯಲ್ಲಿ ನಡೆಯುತ್ತಿದ್ದ ದಂಧೆಯನ್ನು ನಾವು ತಡೆದಿದ್ದೇವೆ. ಜನರಿಗೆ ಸೂಕ್ತ ದರದಲ್ಲಿ ನೀರು ಸಿಗುವಂತೆ ಮಾಡಿದ್ದೇವೆ. ಕೆಲವು ಕೊಳಗೇರಿ ಪ್ರದೇಶದಲ್ಲಿ ಉಚಿತವಾಗಿ ನೀರು ನೀಡುತ್ತಿದ್ದೇವೆ. ಉಳಿದಂತೆ ಅಪಾರ್ಟ್‌ಮೆಂಟ್‌ಗಳಿಗೆ ಪೂರೈಸುವ ನೀರಿಗೆ ದರ ನಿಗದಿ ಮಾಡಿದ್ದು, ಕೈಗಾರಿಕಾ ಬಳಕೆಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.

ಈಗಾಗಲೇ 1500 ಕ್ಕೂ ಹೆಚ್ಚು ಟ್ಯಾಂಕರ್‌ಗಳನ್ನು ನೋಂದಣಿ ಮಾಡಲಾಗಿದ್ದು, ಬೇರೆಯವರಿಗೆ ನೋಂದಣಿ ಮಾಡಿಕೊಳ್ಳಲು ಕಾಲಾವಕಾಶ ನೀಡಿದ್ದೇವೆ. ಪೊಲೀಸ್‌, ಆರ್‌ಟಿಓ, ಬಿಬಿಎಂಪಿಯವರಿಗೆ ಸೂಚನೆ ನೀಡಿ ನೋಂದಾಯಿತ ಟ್ಯಾಂಕರ್‌ಗಳ ಮೇಲೆ ಸರ್ಕಾರದ ನಾಮಫಲಕ ಅಳವಡಿಸುವಂತೆ ಮಾಡುತ್ತೇವೆ. ಆ ಮೂಲಕ ಕಾನೂನು ಬಾಹಿರವಾಗಿ ಜನರಿಂದ ಹಣ ವಸೂಲಿ ಮಾಡುವುದನ್ನು ತಡೆಗಟ್ಟುತ್ತೇವೆ. ಬೆಂಗಳೂರು ಸುತ್ತಮುತ್ತ ಇರುವ ನೀರಾವರಿ ಕೊಳವೆ ಬಾವಿಯನ್ನು ಗುರುತಿಸಿದ್ದು, ಅಗತ್ಯ ಬಿದ್ದರೆ ಅವುಗಳನ್ನೂ ಬಳಸಿಕೊಳ್ಳುತ್ತೇವೆ ಎಂದರು.

ಬೆಂಗಳೂರಿನ ಹೊರ ವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ 5 ನೇ ಹಂತದ ಯೋಜನೆ ಮೇ ಅಂತ್ಯದೊಳಗೆ ಪೂರ್ಣಗೊಳಿಸುತ್ತೇವೆ ಎಂದರು.

‘ತಮಿಳುನಾಡಿಗೆ ನೀರು ಬಿಟ್ಟಿಲ್ಲ’

‘ತಮಿಳುನಾಡಿಗೆ ನೀರು ಬಿಟ್ಟಿರುವ ಆರೋಪದಲ್ಲಿ ಹುರುಳಿಲ್ಲ. ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

‘ತಮಿಳಿನಾಡಿಗೆ ಹರಿದು ಹೋಗುವ ಪ್ರತಿ ಹನಿ ನೀರಿಗೂ ಲೆಕ್ಕ ದಾಖಲಾಗಿರುತ್ತದೆ. ನಾವು ಬಿಜೆಪಿಯವರಂತೆ ಮೂರ್ಖರಲ್ಲ. ತಮಿಳುನಾಡು ನೀರು ಕೇಳದಿರುವಾಗ ನಾವು ಯಾಕೆ ನೀರು ಬಿಡೋಣ? ಬೆಂಗಳೂರಿನಲ್ಲಿ ನೀರಿನ ಕೊರತೆ ನೀಗಿಸಲು ಜಲಮಂಡಳಿಯ ಮನವಿ ಮೇರೆಗೆ ಕೆಆರ್‌ಎಸ್‌ನಿಂದ ನೀರು ಹರಿಸಲಾಗಿದೆಯೇ ಹೊರತು, ತಮಿಳುನಾಡಿಗೆ ಹರಿಸಲು ಅಲ್ಲ’ ಎಂದರು.

‘ನಾವು ತಮಿಳುನಾಡಿಗೆ ಬಿಡಬೇಕಾದ ನೀರನ್ನು ಬಿಡುತ್ತೇವೆ. ಬಿಜೆಪಿ ಪ್ರತಿಭಟನೆ ಮಾಡಬೇಕಾಗಿರುವುದು ನಮ್ಮ ವಿರುದ್ಧವಲ್ಲ. ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕು. ಮಹದಾಯಿ, ಕೃಷ್ಣಾ ಮೇಲ್ದಂಡೆಗೆ ಅನುಮತಿ ಕೊಡಿಸಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT