ಮಂಡ್ಯ: ‘ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಯೋಗ ರಚನೆ ಮಾಡಿತ್ತು. ತನಿಖಾ ತಂಡ ಮುಖ್ಯಮಂತ್ರಿಗೆ ವರದಿ ಕೊಟ್ಟಿದೆ. ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ವರದಿ ಹೊರಗೆ ಬರಲಿ ಉತ್ತರ ಕೊಡುತ್ತೇವೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಭಾನುವಾರ 27ನೇ ವರ್ಷದ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಬಂದ ಸಂದರ್ಭ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
‘ನಮ್ಮ ಸರ್ಕಾರದ ಅವಧಿಯ ಹಗರಣಗಳನ್ನು ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ ಎಂದು ಈಗಾಗಲೇ ಹಲವು ಬಾರಿ ಹೇಳಿದ್ದೇನೆ. ತಪ್ಪಿನ ಆರೋಪ ಮಾಡಿದವರಿಗೂ ಶಿಕ್ಷೆಯಾಗಲಿ’ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಜೆಪಿ, ರಾಜ್ಯಪಾಲರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರವಾದುದು. ತಮ್ಮನ್ನು ತಾವು ಉಳಿಸಿಕೊಳ್ಳಲು ಆಧಾರವಿಲ್ಲದ ಆರೋಪ ಮಾಡುತ್ತಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬಳಸುತ್ತಿರುವ ಟ್ರಿಕ್ಸ್’ ಎಂದು ಕುಟುಕಿದರು.
ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ತೀರ್ಮಾನಿಸುತ್ತಾರೆ. ಸಿ.ಪಿ.ಯೋಗೇಶ್ವರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದೆವು. ಅವರು ಚುನಾವಣೆಗೆ ನಿಂತರೆ, ಎನ್‌ಡಿಎ ಅಭ್ಯರ್ಥಿಯೇ ಆಗುತ್ತೇನೆ ಎಂದಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತನಿಖೆ ಮಾಡಿ ಎಂದು ಅನುಮತಿ ಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿ, ಕಾಂಗ್ರೆಸ್‌ನವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ಮಿತ್ರರು ಏಕೆ ಇಷ್ಟು ಆತಂಕಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವುದು ಇದು ಮೊದಲೇನಲ್ಲ. ಹಿಂದೆಯೂ ಹಲವು ರಾಜ್ಯಪಾಲರು ಕೊಟ್ಟಿಲ್ಲವೇ? ಎಂದರು.