ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಥಳೀಯರ ಒಡನಾಟ ಅರಿಯದೆ ಪಶ್ಚಿಮಘಟ್ಟ ಉಳಿಯದು: ಕಲ್ಕುಳಿ ವಿಠಲ್‌ ಹೆಗ್ಡೆ

ವಿಚಾರಗೋಷ್ಠಿಯಲ್ಲಿ ಪರಿಸರವಾದಿ ಕಲ್ಕುಳಿ ವಿಠಲ್‌ ಹೆಗ್ಡೆ ಅಭಿಮತ
Published 25 ಆಗಸ್ಟ್ 2024, 15:11 IST
Last Updated 25 ಆಗಸ್ಟ್ 2024, 15:11 IST
ಅಕ್ಷರ ಗಾತ್ರ

ಬೆಂಗಳೂರು: ‘ಅರಣ್ಯದ ಜೊತೆಗಿನ ಮಲೆನಾಡಿಗರ ಒಡನಾಟ ಅರಿಯದೆ, ಸ್ಥಳೀಯ ವಿಚಾರಗಳನ್ನು ಪರಿಗಣಿಸದೆ, ಕೇವಲ ಕಸ್ತೂರಿ ರಂಗನ್‌–ಗಾಡ್ಗೀಳ್‌ ವರದಿ ಆಧಾರದಲ್ಲಿ ಪಶ್ಚಿಮಘಟ್ಟ ಸಂರಕ್ಷಣೆ ಅಸಾಧ್ಯ’ ಎಂದು ಪರಿಸರವಾದಿ ಕಲ್ಕುಳಿ ವಿಠಲ್‌ ಹೆಗ್ಡೆ ಅಭಿಪ್ರಾಯಪಟ್ಟರು.

ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆ ಸಹ್ಯಾದ್ರಿ ಸಂಘ ಭಾನುವಾರ ಹಮ್ಮಿಕೊಂಡಿದ್ದ ‘ಮಲೆನಾಡಿನಲ್ಲಿ ಭೂಹಕ್ಕು ಮತ್ತು ಅರಣ್ಯ ಕಾಯ್ದೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಮಾರ್ಗೋಪಾಯಗಳು’ ವಿಷಯದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಸ್ತೂರಿ ರಂಗನ್‌, ಗಾಡ್ಗೀಳ್‌ ವರದಿಗಳು ಕೇವಲ ಹವಾಮಾನ ಬದಲಾವಣೆ, ಜಾಗತಿಕ ಸಮಸ್ಯೆಗಳನ್ನು ಪರಿಗಣಿಸಿ ಜೀವವೈವಿಧ್ಯ ಉಳಿಸಲು ಸಿದ್ಧಪಡಿಸಲಾಗಿದೆ. ವರದಿಗಳ ಆಧಾರದಲ್ಲಿ ಪಶ್ಚಿಮಘಟ್ಟದ ಭೂಕುಸಿತ ತಡೆಯಲು ಸಾಧ್ಯವಿಲ್ಲ. 50 ಮರ, ಗಿಡ ಇರುವ ಜಮೀನನ್ನು ಅರಣ್ಯವೆಂದು ವ್ಯಾಖ್ಯಾನಿಸಿದ ಕೋರ್ಟ್ ತೀರ್ಪು ಒಪ್ಪಲು ಆಗದು. ದಶಕಗಳ ಹಿಂದೆ ರೂಪಿಸಿದ ಅರಣ್ಯದ ವ್ಯಾಖ್ಯಾನ ಬದಲಾಗಬೇಕು. ಮಲೆನಾಡು, ಮಲೆನಾಡಿಗರು ಇಬ್ಬರೂ ಉಳಿಯಬೇಕು. ಇಲ್ಲದಿದ್ದರೆ ಮಲೆನಾಡಿನ ಜನರು ನೆಮ್ಮದಿಯಾಗಿ ಜೀವಿಸಲು ಸಾಧ್ಯವಿಲ್ಲ’ ಎಂದರು. 

‘ಗುಡ್ಡ ಕುಸಿತಕ್ಕೆ ಬೇರೆಯದೇ ವೈಜ್ಞಾನಿಕ ಕಾರಣಗಳಿವೆ. ಗುಡ್ಡದ ಬುಡಕ್ಕೆ ಆಪತ್ತು ಬಾರದಂತೆ ನೋಡಿಕೊಳ್ಳಬೇಕಿದೆ. ಕೇರಳದಲ್ಲಿ ಶತಮಾನದ ಹಿಂದೆ ಇಂತಹ ಘೋರ ಘಟನೆಗಳು ನಡೆದಿವೆ. ಗುಡ್ಡಗಳ ಸಂರಚನೆ ಬಂಡೆ ಹಾಗೂ ಮಣ್ಣಿನ ಸಮ್ಮಿಶ್ರಣ. ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಬಂದರೆ ಅಪಾಯವಾಗುತ್ತದೆ. ವಯನಾಡ್‌ನಲ್ಲಿ ಈಚೆಗೆ ನಡೆದ ಘಟನೆಗೆ ಒಂದೇ ದಿನ ಸುರಿದ ಮಳೆಯ ಪ್ರಮಾಣ ಕಾರಣ. ಜಾಗತಿಕ ತಾಪಮಾನ, ಹವಾಮಾನ ಬದಲಾವಣೆಗಳಿಂದ ಮಳೆಯ ಪ್ರಮಾಣದಲ್ಲಿ ದಿಢೀರ್‌ ಏರಿಕೆಯಾಗಿದೆ. ಸಮುದ್ರವನ್ನೇ ಕೊಚ್ಚೆ ಮಾಡಿದ್ದರಿಂದ ವಿಷಾನಿಲ ಹೀರಿಕೊಳ್ಳುವ ಶಕ್ತಿ ಕಳೆದುಕೊಂಡಿದೆ. ಇಂತಹ ಎಲ್ಲ ಅಂಶಗಳನ್ನು ಪರಿಗಣಿಸಿ, ಸಮಗ್ರ ಯೋಜನೆ ರೂಪಿಸಿದಾಗ ಪಶ್ವಿಮಘಟ್ಟ ಉಳಿಸಲು ಸಾಧ್ಯ ಎಂದು ಹೇಳಿದರು.

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ‘ದೊಡ್ಡ ಒತ್ತುವರಿ ತೆರವುಗೊಳಿಸಲು ಮಲೆನಾಡಿಗರ ವಿರೋಧವಿಲ್ಲ. ಆದರೆ, ಅಡೆತಡೆ ಇಲ್ಲದೆ ನಡೆಯುತ್ತಿರುವ ನಗರೀಕರಣ, ಅಭಿವೃದ್ಧಿ ಕಾರ್ಯಗಳು, ಪ್ರವಾಸೋದ್ಯಮಕ್ಕೆ ನೀಡುತ್ತಿರುವ ಆದ್ಯತೆಗಳ ಫಲವಾಗಿ ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯ ಕುಗ್ಗುತ್ತಿದೆ. ಅತ್ತ  ಗಿಡ, ಮರ ಬೆಳೆಸುವ ಮೂಲಕ ಹಸಿರು ಕವಚ ಬೆಳೆಸುತ್ತಿರುವ ರೈತರನ್ನು ಬಲಿಪಶು ಮಾಡಲಾಗುತ್ತಿದೆ’ ಎಂದು ದೂರಿದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತರಾದ ಬಿ.ಎ.ರಮೇಶ್‌ ಹೆಗ್ಡೆ, ಎನ್‌.ಎಸ್‌. ಶ್ರೀಧರಮೂರ್ತಿ, ಡಿ.ಸಿ.ಶ್ರೀಧರ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT