ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಸಂಪುಟ ದರ್ಜೆ, ರಾಜ್ಯ ಸಚಿವರ ದರ್ಜೆ ಹೊಂದಿದವರಿಗೆ ಭರ್ಜರಿ ಸವಲತ್ತು!
ಸಂಪುಟ ದರ್ಜೆ, ರಾಜ್ಯ ಸಚಿವರ ದರ್ಜೆ ಹೊಂದಿದವರಿಗೆ ಭರ್ಜರಿ ಸವಲತ್ತು!
ಫಾಲೋ ಮಾಡಿ
Published 8 ಜೂನ್ 2023, 0:56 IST
Last Updated 8 ಜೂನ್ 2023, 0:56 IST
Comments
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಸಲಹೆಗಾರ, ನಿಗಮ–ಮಂಡಳಿಯ ಅಧ್ಯಕ್ಷ ಸ್ಥಾನಗಳಿಗೆ ನೇಮಕಗೊಂಡು ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ಸಹಿತ ಎಲ್ಲ ಸೌಲಭ್ಯಗಳಿಗೆ ಅರ್ಹರಾದವರಿಗೆ ತಿಂಗಳಿಗೆ ₹60,000 ವೇತನ, ₹1.50 ಲಕ್ಷ ಮನೆಬಾಡಿಗೆ ಹಾಗೂ ವಾರ್ಷಿಕ ಆತಿಥ್ಯ ಭತ್ಯೆ ₹4.50 ಲಕ್ಷ ಸಿಗಲಿದೆ!

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಸಲಹೆಗಾರ, ನಿಗಮ–ಮಂಡಳಿಯ ಅಧ್ಯಕ್ಷ ಸ್ಥಾನಗಳಿಗೆ ನೇಮಕಗೊಂಡು ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ಸಹಿತ ಎಲ್ಲ ಸೌಲಭ್ಯಗಳಿಗೆ ಅರ್ಹರಾದವರಿಗೆ ತಿಂಗಳಿಗೆ ₹60,000 ವೇತನ, ₹1.50 ಲಕ್ಷ ಮನೆಬಾಡಿಗೆ ಹಾಗೂ ವಾರ್ಷಿಕ ಆತಿಥ್ಯ ಭತ್ಯೆ ₹4.50 ಲಕ್ಷ ಸಿಗಲಿದೆ!

ರಾಜ್ಯದಲ್ಲಿ ಪ್ರವಾಸಕ್ಕೆ ಪ್ರತಿದಿನಕ್ಕೆ ₹2,500, ಹೊರರಾಜ್ಯದಲ್ಲಿ ಪ್ರವಾಸಕ್ಕೆ ₹3,000,  ಇಂಧನ ಭತ್ಯೆ, ಪ್ರಯಾಣ ಭತ್ಯೆ, ವಾಹನ ಸೌಕರ್ಯ, ದೂರವಾಣಿ ಸೌಲಭ್ಯವೂ ಸೇರಿ ಭರಪೂರ ಸವಲತ್ತುಗಳು ದೊರಕಲಿವೆ.

ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರದಲ್ಲಿ ಈಗಾಗಲೇ ಮುಖ್ಯಮಂತ್ರಿಯ ಮುಖ್ಯ ಸಲಹೆಗಾರರಾಗಿ ಸುನೀಲ್‌ ಕನುಗೋಳು, ಮಾಧ್ಯಮ ಸಲಹೆಗಾರರಾಗಿ ಕೆ.ವಿ. ಪ್ರಭಾಕರ, ರಾಜಕೀಯ ಕಾರ್ಯದರ್ಶಿಗಳಾಗಿ ವಿಧಾನ ಪರಿಷತ್‌ ಸದಸ್ಯರಾದ ಕೆ. ಗೋವಿಂದರಾಜ್‌ ಮತ್ತು ನಜೀರ್ ಅಹ್ಮದ್‌ ನೇಮಕರಾಗಿದ್ದಾರೆ. ಮುಖ್ಯಮಂತ್ರಿಯ ನಿರ್ದೇಶನದಂತೆ ಈ ನಾಲ್ವರಿಗೂ ಸಂಪುಟ ದರ್ಜೆಯ ಸಚಿವರ ಸ್ಥಾನಮಾನದೊಂದಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ.

ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಸ್ವಾರ್ಥ ಸೇವೆಯನ್ನು ಗೌರವಿಸುವುದಕ್ಕಾಗಿ ತಿಮ್ಮಕ್ಕನವರಿಗೆ ಈ ಹಿಂದೆ ನೀಡಲಾಗಿದ್ದ ರಾಜ್ಯ ಸಚಿವ ದರ್ಜೆ ಸ್ಥಾನಮಾನ ಹಾಗೂ ಪರಿಸರ ರಾಯಭಾರಿ ಸ್ಥಾನವನ್ನು ಮುಂದುವರಿಸಲಾಗಿದೆ.‌

ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿ ಎ.ಎಸ್‌. ಪೊನ್ನಣ್ಣ ಅವರನ್ನು ನೇಮಿಸಿ ಸಂಪುಟ ದರ್ಜೆಯ ಸಚಿವರ ಸ್ಥಾನಮಾನದೊಂದಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಿ ಆದೇಶ ಹೊರಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದರು. ಆದರೆ, ಆ ಆದೇಶವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಇನ್ನೂ ಹಲವರು ಸಂಪುಟ ದರ್ಜೆ, ರಾಜ್ಯ ಸಂಪುಟ ದರ್ಜೆ ‘ಸ್ಥಾನಮಾನ’ ಸಹಿತ ಹುದ್ದೆಗಳನ್ನು ಅಲಂಕರಿಸುವ ಸಾಧ್ಯತೆಯಿದೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ, ಸಲಹೆಗಾರ ಸ್ಥಾನಕ್ಕೆ ನೇಮಕವನ್ನು ಪ್ರಶ್ನಿಸಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಹೈಕೋರ್ಟ್‌ನಲ್ಲಿ 2023 ಜ. 13ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣ ಮುಖ್ಯ ನ್ಯಾಯಮೂರ್ತಿಯ ಪೀಠದ ಮುಂದೆ ವಿಚಾರಣೆಯ ಹಂತದಲ್ಲಿದೆ.

‘ಸ್ಥಾನಮಾನ’ ಸೌಲಭ್ಯ ನಾಲ್ಕು ವಿಧ
ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ, ಸಲಹೆಗಾರರು, ನಿಗಮ– ಮಂಡಳಿ, ಆಯೋಗ ಅಥವಾ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನಗಳಿಗೆ ನೇಮಗೊಂಡವರಿಗೆ ಸೌಲಭ್ಯಗಳನ್ನು ನೀಡುವ ವ್ಯವಸ್ಥೆಯನ್ನು ನಾಲ್ಕು ರೀತಿ ವಿಂಗಡಿಸಲಾಗಿದೆ. ಕೆಲವರಿಗೆ ಸಂಪುಟ ದರ್ಜೆ ಅಥವಾ ರಾಜ್ಯ ಸಚಿವ ದರ್ಜೆ ಸ್ಥಾನಮಾನದ ಜೊತೆಗೆ ಆ ಸಚಿವರಿಗೆ ಲಭ್ಯವಿರುವ ಎಲ್ಲ ಸವಲತ್ತುಗಳನ್ನು ನೀಡಲಾಗುತ್ತಿದೆ. ಇನ್ನೂ ಕೆಲವರಿಗೆ ಸಂಪುಟ ದರ್ಜೆ ಅಥವಾ ರಾಜ್ಯ ಸಚಿವ ದರ್ಜೆ ಸ್ಥಾನಮಾನ ಮಾತ್ರ ನೀಡಲಾಗುತ್ತದೆ.

‘ಸ್ಥಾನಮಾನ’ ಮಾತ್ರ ಇರುವವರಿಗೆ ನೀಡುವ ಮನೆ ಬಾಡಿಗೆ ಆಯಾ ದರ್ಜೆಯ ಸಚಿವರಿಗೆ ನೀಡುವ ಮೊತ್ತಕ್ಕಿಂತ ಕಡಿಮೆಯಾಗಿದ್ದು, ಬೆಂಗಳೂರು ಮತ್ತು ಇತರ ನಗರಗಳಲ್ಲಿ ಬೇರೆ ಬೇರೆಯಾಗಿದೆ. ಅದೇ ರೀತಿ ಇಂಧನ ಭತ್ಯೆಯೂ ಕಡಿಮೆ. ಪೀಠೋಪಕರಣ ಖರೀದಿಸಲು ಅವಕಾಶ ಇಲ್ಲ. ₹20 ಲಕ್ಷದ ಮಿತಿಗೆ ಒಳಪಟ್ಟು ವಾಹನ ಸೌಕರ್ಯ ಪಡೆಯಬಹುದು. ಆರು ಸಿಬ್ಬಂದಿ ಹೊಂದಬಹುದು. ಆದರೆ, ವೈದ್ಯಕೀಯ ಭತ್ಯೆ ಮತ್ತು ಶಿಷ್ಟಾಚಾರ ವ್ಯವಸ್ಥೆ ಇರುವುದಿಲ್ಲ.

ಇತರೆ ಸೌಲಭ್ಯಗಳು

* ಸರ್ಕಾರಿ ಬಂಗಲೆ ಪಡೆದರೆ ಮನೆ ಬಾಡಿಗೆ ಭತ್ಯೆ ಇರುವುದಿಲ್ಲ. ಸ್ವಂತ ಅಥವಾ ಬಾಡಿಗೆ ಮನೆಯಲ್ಲಿದ್ದರೆ ₹1.50 ಲಕ್ಷ ಸಿಗಲಿದೆ

* ನೀರಿನ ವಿದ್ಯುತ್‌ ಬಿಲ್‌ ಸೌಲಭ್ಯ ವಾಗಿ ಕೇವಲ ₹200 ಅನ್ನು ವೇತನದಿಂದ ಕಟಾಯಿಸಿ, ಉಳಿದ ಎಲ್ಲ ಬಿಲ್‌ಗಳನ್ನು ಆಪ್ತ ಶಾಖೆಯ ಮೂಲಕ ಸರ್ಕಾರ ಪಾವತಿಸುತ್ತದೆ

* ₹10 ಲಕ್ಷದ ಮಿತಿಯಲ್ಲಿ ಗೃಹೋಪಯೋಗಿ ವಸ್ತುಗಳು ಹಾಗೂ ಪೀಠೋಪಕರಣಗಳನ್ನು ಖರೀದಿಸಬಹುದು

* ₹26 ಲಕ್ಷದ ಮಿತಿಯಲ್ಲಿ ವಾಹನ ಖರೀದಿಸಬಹುದು

* 12 ಸಿಬ್ಬಂದಿ ಹೊಂದಲು ಅವಕಾಶವಿದೆ

* ಮನೆ, ಕಚೇರಿಗೆ ಉಚಿತ ದೂರವಾಣಿ ಸೌಲಭ್ಯ

* ವೈದ್ಯಕೀಯ ವೆಚ್ಚ ಮರುಪಾವತಿ

ಬಿಜೆಪಿ ಅವಧಿ– 72 ‘ಸ್ಥಾನಮಾನ’

ಬಿಜೆಪಿ ಸರ್ಕಾರದ ಅವಧಿಯಲ್ಲಿ (ಬಿ.ಎಸ್‌. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ) ಒಟ್ಟು 72 ಮಂದಿಗೆ ವಿವಿಧ ‘ಸ್ಥಾನಮಾನ’ ನೀಡಲಾಗಿತ್ತು. ಈ ಪೈಕಿ, 15 ಮಂದಿಗೆ ಸಂಪುಟ ದರ್ಜೆ ಸಹಿತ ಎಲ್ಲ ಸವಲತ್ತು 18 ಮಂದಿಗೆ ಸಂಪುಟ ದರ್ಜೆ ಸ್ಥಾನಮಾನ, 8 ಮಂದಿಗೆ ರಾಜ್ಯ ಸಚಿವ ದರ್ಜೆಯ ಸಹಿತ ಎಲ್ಲ ಸವಲತ್ತು, 31 ಮಂದಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT